ನಾಡಿಗೆ ಅನ್ನ ನೀಡುವ ಅನ್ನದಾತರಿಗೆ ನಾವೇನೂ ಕೊಡಲು ಸಾಧ್ಯವಿಲ್ಲ. ಆದರೆ ಅವರ ಶ್ರಮವನ್ನು ಗೌರವಿಸಬೇಕಾಗಿದೆ. ಇದೇ ಆಶಯದಲ್ಲಿ ತಾವು ಪ್ರತಿ ವರ್ಷ ರಾಸುಗಳಿಗೆ ಹುಲ್ಲು, ಬೂಸ ವಿತರಿಸುವುದಾಗಿ ರವೀಶ್ ಹೇಳಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಮೂಕ ಪ್ರಾಣಿಗಳಿಗೆ ಸೇವೆ ಮಾಡುವುದು ಪುಣ್ಯದ ಕೆಲಸ. ಈ ಮೂಲಕ ರೈತರು, ರೈತರ ಅವಲಂಬಿತ ದನಕರುಗಳನ್ನು ಗೌರವಿಸುವ ಈ ಸೇವಾಕಾರ್ಯ ಹೆಮ್ಮೆ ಪಡುವ ವಿಚಾರ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.ಬಿಜೆಪಿ ಯುವ ಮುಖಂಡ ಅರಕೆರೆ ರವೀಶ್ ಅವರು ಶುಕ್ರವಾರ ಸಿದ್ಧಗಂಗಾ ಮಠದ ದನಗಳ ಜಾತ್ರೆಯಲ್ಲಿ ಸೇರಿದ್ದ ಎಲ್ಲಾ ರಾಸುಗಳಿಗೆ ತಲಾ ಒಂದೊಂದು ಹೊರೆ ಹುಲ್ಲು, ಒಂದು ಚೀಲ ಬೂಸ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉದ್ಯಮಿಯಾಗಿ, ಕೃಷಿಕರಾಗಿ ಅರಕೆರೆ ರವೀಶ್ ಅವರು ನಮ್ಮ ಕೃಷಿಪರಂಪರೆಗೆ ಉತ್ತೇಜನ ನೀಡಲು, ರೈತರು, ಹಸುಗಳ ಮೇಲಿನ ಪ್ರೀತಿಯಿಂದ ಪ್ರತಿ ವರ್ಷದ ಜಾತ್ರೆಗೆ ಬರುವ ರೈತರು ಹಾಗೂ ರಾಸುಗಳಿಗೆ ಇಂತಹ ಸೇವೆ ಮಾಡಲು ಆಸಕ್ತರಾಗಿದ್ದಾರೆ. ಹಸುಗಳು ಹೆಚ್ಚು ಇಷ್ಟಪಡುವ ರಾಗಿ ಹುಲ್ಲನ್ನೇ ವಿತರಣೆ ಮಾಡಿರುವುದು ವಿಶೇಷ ಎಂದು ಸ್ವಾಮೀಜಿ ಹೇಳಿದರು.ದೇಸಿ ತಳಿ ರಕ್ಷಣೆ ಪ್ರಯತ್ನ:ಕೃಷಿ ಮತ್ತು ರೈತರಿಗೆ ಪ್ರೋತ್ಸಾಹಿಸಿವ ಸಲುವಾಗಿ ಸಿದ್ದಗಂಗಾ ಮಠದಲ್ಲಿ ಪೂಜ್ಯರು ಹಲವಾರು ವರ್ಷಗಳಿಂದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ದನಗಳ ಜಾತ್ರೆ ಏರ್ಪಡಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ದೇಸಿ ತಳಿ ದನಗಳ ವಹಿವಾಟಿಗೆ ಈ ಜಾತ್ರೆ ಪ್ರಮುಖ ವೇದಿಕೆಯಾಗಿದೆ. ಅಲ್ಲದೇ, ಈ ಮೂಲಕ ದೇಶಿ ರಾಸುಗಳನ್ನು ಸಾಕುವ ರೈತರಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದು ಮಠದ ಕಾರ್ಯ ಪ್ರಶಂಸಿಸಿದರು.
ವಿವಿಧ ತಾಲೂಕು, ಹೊರ ಜಿಲ್ಲೆಗಳ ರೈತರೂ ಸಿದ್ಧಗಂಗಾ ಜಾತ್ರೆಗೆ ತಮ್ಮ ರಾಸುಗಳನ್ನು ಕರೆತರುತ್ತಾರೆ, ಇಲ್ಲಿ ರಾಸು ಖರೀದಿಸಲು ದೂರದ ಊರುಗಳ ರೈತರೂ ಬರುತ್ತಾರೆ. ನಶಿಸಿಹೋಗುತ್ತಿರುವ ದೇಸಿ ಹಸುಗಳ ತಳಿ ರಕ್ಷಣೆ ಆಗಬೇಕಾಗಿದೆ. ಅಂತಹ ತಳಿಯ ಹಸುಗಳನ್ನು ಸಾಕುವ ರೈತರನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.ಯುವ ಮುಖಂಡರ ರವೀಶ್ ಅವರು ರೈತರು ಮತ್ತು ಕೃಷಿಗೆ ನೆರವಾಗುವ ರಾಸುಗಳ ಬಗ್ಗೆ ಒಲವು ತೋರಿಸಿ ಜಾತ್ರೆಯ ಎಲ್ಲಾ ಸಾವಿರಾರು ರಾಸುಗಳಿಗೆ ಹುಲ್ಲು, ಬೂಸ ವಿತರಿಸಿ ರೈತರಿಗೆ ನೆರವಾಗುತ್ತಿದ್ದಾರೆ ಎಂದು ಅಭಿನಂದಿಸಿದರು.
ಬಿಜೆಪಿ ಯುವ ಮುಖಂಡರ ಅರಕೆರೆ ರವೀಶ್ ಮಾತನಾಡಿ, ವಿವಿಧ ಕಾರಣಗಳಿಂದ ಇಂದು ವ್ಯವಸಾಯ ಪದ್ದತಿ ಬದಲಾಗುತ್ತಿದೆ. ಟಿಲ್ಲರ್, ಟ್ರ್ಯಾಕ್ಟರ್ ಮುಂತಾದ ಕೃಷಿ ಉಪಕರಣಗಳ ಬಳಕೆ ಹೆಚ್ಚಾಗಿ, ದನಗಳನ್ನು ಕೃಷಿ ಕಾರ್ಯಕ್ಕೆ ಬಳಸುವುದು ಕಡಿಮೆಯಾಗಿದೆ. ರಾಸುಗಳ ಸಾಕಾಣಿಕೆಯನ್ನೂ ರೈತರು ಕಡಿಮೆ ಮಾಡಿಕೊಂಡಿದ್ದಾರೆ. ಈ ಪರಿಸ್ಥಿತಿಯಲ್ಲಿ ರೈತರ ಒಡನಾಡಿಯಾಗಿದ್ದ ದೇಸಿ ತಳಿ ದನಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಈ ತಳಿಯನ್ನು ಉಳಿಸಬೇಕು ಎಂಬ ಆಶಯದಿಂದ ತಾವು ಈ ಕಾರ್ಯ ಆರಂಭಿಸಿರುವುದಾಗಿ ಹೇಳಿದರು.ನಾಡಿಗೆ ಅನ್ನ ನೀಡುವ ಅನ್ನದಾತರಿಗೆ ನಾವೇನೂ ಕೊಡಲು ಸಾಧ್ಯವಿಲ್ಲ. ಆದರೆ ಅವರ ಶ್ರಮವನ್ನು ಗೌರವಿಸಬೇಕಾಗಿದೆ. ಇದೇ ಆಶಯದಲ್ಲಿ ತಾವು ಪ್ರತಿ ವರ್ಷ ರಾಸುಗಳಿಗೆ ಹುಲ್ಲು, ಬೂಸ ವಿತರಿಸುವುದಾಗಿ ರವೀಶ್ ಹೇಳಿದರು.
ಈ ವೇಳೆ ಸಿದ್ಧಲಿಂಗ ಸ್ವಾಮೀಜಿ ಹಾಗೂ ಶಾಸಕ ಸುರೇಶ್‌ಗೌಡರು ಹಲವು ದಶಕಗಳಿಂದ ಕೃಷಿಕಾರ್ಯದದಲ್ಲಿ ತೊಡಗಿರುವ ಹಿರಿಯ ರೈತರನ್ನು ಸನ್ಮಾನಿಸಿ ಗೌರವಿಸಿದರು. ಅಲ್ಲದೆ ಜಾತ್ರೆಯ ಎಲ್ಲಾ ರೈತರಿಗೆ ಹಸಿರು ಶಾಲು, ಕುಡಿಯುವ ನೀರಿನ ಬಾಟೆಲ್ ವಿತರಿಸಲಾಯಿತು.ಎಪಿಎಂಸಿ ಮಾಜಿ ಸದಸ್ಯ ನೇರಳಾಪುರು ಕುಮಾರ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಯಲ್ಲಾಪುರ ರಮೇಶ್, ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮಧುಗಿರಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರಸ್ವಾಮಿ, ಬೆಳಗುಂಬ ಗ್ರಾ.ಪಂ ಸದಸ್ಯ ಮಾರನಾಯಕನಪಾಳ್ಯ ಮಲ್ಲೇಶ್, ಮುಖಂಡರಾದ ಅನಿಲ್ ಪಟೇಲ್, ಆರೀಫ್ ಪಾಷಾ, ಸಾಗರ್, ರವಿಪ್ರಕಾಶ್, ವಿಲಾಸ್, ಮನು ಹರಳೂರು ಮೊದಲಾದವರು ಭಾಗವಹಿಸಿದ್ದರು.