ಹೂವಿನಹಡಗಲಿ: ತಾಲೂಕಿನಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಗೋಮಾಳದ ಹೆಸರಿನಲ್ಲಿ ಮೀಸಲಿಟ್ಟ ಜಮೀನು ಇನ್ನು ತೆರವು ಆಗಿಲ್ಲ. ಕಡತದಲ್ಲಿ ಮಾತ್ರ ತೆರವು, ಆದರೆ ವಾಸ್ತವದಲ್ಲಿ ಇನ್ನು ಸರ್ಕಾರಿ ಭೂಮಿ ಅಕ್ರಮ ಸಾಗುವಳಿ ಮುಂದುವರೆದಿದೆ.ಹೌದು, ತಾಲೂಕಿನಲ್ಲಿ ಸರ್ಕಾರ ಬಗರ್‌ ಹುಕುಂ ಯೋಜನೆಯಲ್ಲಿ ಜಮೀನು ರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನು ನೀಡುವ ನಮೂನೆ-57 ರಡಿ ಅರ್ಜಿ ಆಹ್ವಾನಿಸಿತ್ತು. ಆಗ ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಕೆಯಾಗಿದ್ದವು. ಅರ್ಜಿಗೆ ತಕ್ಕಷ್ಟು ಜಮೀನು ಇಲ್ಲ. ಇತ್ತ ಗೋಮಾಳಕ್ಕೂ ಜಮೀನು ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಜಮೀನಿಗಾಗಿ ತಾಲೂಕಿನ ಹಿರೇಹಡಗಲಿ, ಹೂವಿನಹಡಗಲಿ, ಇಟ್ಟಗಿ 3 ಹೋಬಳಿ ಕೇಂದ್ರಗಳು ಸೇರಿ 1006 ಸರ್ವೇ ನಂಬರ್‌ಗಳಿಗೆ 5977 ಅರ್ಜಿಗಳು ಸಲ್ಲಿಕೆಯಾಗಿದ್ದವು. ಜಮೀನು ಲಭ್ಯತೆ ಇಲ್ಲದ ಕಾರಣ ಎಲ್ಲ ಅರ್ಜಿಗಳು ತಿರಸ್ಕರಿಸಲಾಗಿದೆ.

ತಾಲೂಕಿನಲ್ಲಿ 40,976 ಎಕರೆ 62 ಸೆಂಟ್ಸ್‌ ಸರ್ಕಾರಿ ಜಮೀನು ಇದ್ದು, ಇದರಲ್ಲಿ 5434 ಎಕರೆ 7 ಸೆಂಟ್ಸ್‌ ಸರ್ಕಾರಿ ಜಮೀನು ಒತ್ತುವರಿಯಾಗಿದೆ. 841 ಎಕರೆ 27 ಸೆಂಟ್ಸ್‌ ಜಮೀನು ಒತ್ತುವರಿ ತೆರವು ಮಾಡಿದ್ದು, ಉಳಿದಂತೆ 1812 ಎಕರೆ 3 ಸೆಂಟ್ಸ್‌ ಒತ್ತುವರಿ ತೆರವು ಬಾಕಿ ಇದೆ. ಇದರಲ್ಲಿ 2781 ಎಕರೆ ಜಮೀನಿಗೆ 50, 53 ಫಾರಂ ನಡಿ ಅರ್ಜಿ ಸಲ್ಲಿಕೆಯಾಗಿದೆ. ಇವು ಕೂಡ ಇನ್ನು ತೆರವು ಆಗಿಲ್ಲ.

ಗೋವು, ಮೇಕೆ, ಕುರಿ ಸೇರಿ 1,84,773 ಜಾನುವಾರುಗಳಿವೆ. ಇವುಗಳನ್ನು ಮೇಯಿಸಲು ಸರಿ ಸುಮಾರು 50 ಸಾವಿರ ಎಕರೆ ಜಮೀನು ಅಗತ್ಯವಿದೆ. ಆದರೆ ಸರ್ಕಾರ ಗೋಮಾಳ ಹೆಸರಿನಲ್ಲಿ ಮೀಸಲಿಟ್ಟ ಜಮೀನು ಇನ್ನು ಒತ್ತುವರಿಯಾಗಿದೆ.

ಹಾಗಾದರೆ ಗೋವುಗಳು ಎಲ್ಲಿ ಮೇಯಿಸಬೇಕಿದೆ. ಸರ್ಕಾರ ಒತ್ತುವರಿ ತೆರವಿಗೆ ಇಳಿದರೆ ಅಕ್ರಮ ಸಾಗುವಳಿದಾರರು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಾರೆಂಬ ಭಯ ಕಾಡುತ್ತಿದೆ. ಇದರಿಂದ ಈವರೆಗೂ ಅಕ್ರಮ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಪ್ರತಿ ತಾಲೂಕು ಕೇಂದ್ರದ ತಹಸೀಲ್ದಾರ್‌ ಕಚೇರಿ ಮುಂದೆ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಿ, ಸಾರ್ವಜನಿಕರಿಗೆ ತಿಳಿಯುವ ಹಾಗೆ ನಾಮಫಲಕ ಹಾಕಬೇಕೆಂಬ ಸರ್ಕಾರದ ನಿಯಮ ಈ ತಾಲೂಕಿನಲ್ಲಿ ಅನುಷ್ಠಾನಗೊಂಡಿಲ್ಲ. ತಾಲೂಕಿನ ಕೆಲ ಗ್ರಾಮಗಳ ಗ್ರಾಮ ಠಾಣಾಕ್ಕೆ ಹೊಂದಿಕೊಂಡಂತೆ ಸರ್ಕಾರಿ ಜಮೀನು ಒತ್ತುವರಿಯಾಗಿವೆ. ಈ ಕುರಿತು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.


2781 ಎಕರೆ ಸರ್ಕಾರಿ ಭೂಮಿಗೆ 50-53 ಫಾರಂ ನಡಿ ಅರ್ಜಿ ಹಾಕಿದ್ದಾರೆ. ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಜಿಲ್ಲಾಡಳಿತ ₹2 ಲಕ್ಷ ಮಂಜೂರು ಮಾಡಿದೆ ಎನ್ನುತ್ತಾರೆ ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ.