ಸಾರಾಂಶ
ದಾವಣಗೆರೆ: ದಾವಣಗೆರೆ ಪಿಜೆ ಬಡಾವಣೆಯ ರಿ.ಸ.ನಂ.53ರ 4.13 ಎಕರೆ ಜಾಗ ವಕ್ಫ್ ಮಂಡಳಿಗೆ ಸೇರಿದ್ದೆಂಬ ವದಂತಿಗೆ ಇನ್ನು 2 ದಿನದಲ್ಲೇ ಉತ್ತರ ಸಿಗಲಿದ್ದು, ಈ ಭಾಗದ ನಿವಾಸಿಗಳು ಯಾವುದೇ ಆತಂಕಕ್ಕೊಳಕಾಗಬೇಕಿಲ್ಲ ಎಂದು ತಹಸೀಲ್ದಾರ್ ಡಾ.ಅಶ್ವತ್ಥ್ ಹೇಳಿದ್ದಾರೆ. ನಗರದ ಪಿಜೆ ಬಡಾವಣೆಯ ಶ್ರೀ ರಾಮ ದೇವಸ್ಥಾನದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರ ಸೂಚನೆ ಮೇರೆಗೆ ಸ್ಥಳೀಯ ನಿವಾಸಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಆಯೋಜಿಸಿದ್ದ ನಾಗರೀಕರ ಸಭೆಯಲ್ಲಿ ಮಾತನಾಡಿದ ಅವರು, ತಾಂತ್ರಿಕ ದೋಷದಿಂದ ಆಗಿದ್ದ ಗೊಂದಲಕ್ಕೆ ಇನ್ನೆರೆಡು ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದ್ದು, ನಂತರ ನಿವಾಸಿಗಳು ಸರ್ಕಾರದ ದಾಖಲೆ ಪಡೆಯಬಹುದು ಎಂದರು.
ಪಿಜೆ ಬಡಾವಣೆ 1951ರಿಂದ 56ನೇ ಇಸ್ವಿಯಲ್ಲಿ ರಿ.ಸ.ನಂ.53ರಲ್ಲಿ ದಾವಣಗೆರೆ ಗ್ರಾಮ ಬಡಾವಣೆಗೆ ಭೂ ಸ್ವಾಧೀನಕ್ಕೆ ಒಳಪಟ್ಟಿದೆ. ಇದು 18.2 ಎಕರೆ ವಿಸ್ತೀರ್ಣವಿದ್ದು, ಗ್ರಾಮ ಬಡಾವಣೆಗೆ ಸ್ವಾಧೀನಗೊಂ ಭೂಮಿಯನ್ನು ಖರಾಬಿಗೆ ತಂದರು. ಆಗ ಸರ್ವೇ ನಂಬರ್ 53 ಅಸ್ತಿತ್ವ ಕಳೆದುಕೊಂಡಿತು. ಪಕ್ಕದ ಸರ್ಕಾರಿ ಹೈಸ್ಕೂಲ್ ಮೈದಾನವಿದ್ದ ರಿ.ಸ.ನಂ.48ಕ್ಕೆ 53ನ್ನು ವಿಲೀನಗೊಳಿಸಿದ್ದರು. 48ನೇ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಅಂದಿಗೆ 52 ಎಕರೆ ಜಮೀನಿತ್ತು. 53ರಲ್ಲಿ ಇದ್ದ 18 ಎಕರೆ ಮತ್ತು 48ರಲ್ಲಿದ್ದ 52 ಎಕರೆ ಸೇರಿ ಒಟ್ಟು 70.18 ಎಕರೆ ಜಮೀನು ಆಗಿತ್ತು ಎಂದು ಅವರು ತಿಳಿಸಿದರು.ಅದೇ 70 ಎಕರೆಯಲ್ಲಿ ಪಿಜೆ ಬಡಾವಣೆ, ಹೈಸ್ಕೂಲ್ ಮೈದಾನ ಎಲ್ಲವೂ ಬರುತ್ತವೆ. ಹಾಗಾಗಿ ಪಿಜೆ ಬಡಾವಣೆ ಇಂದು ವಾಸ್ತವವಾಗಿ ರಿ.ಸ.ನಂ.48ರಲ್ಲಿದೆ. ಹೀಗಿದ್ದರೂ ಸರ್ಕಾರದ ಅಪ್ಲಿಕೇಷನ್‌ನಲ್ಲಿ 53 ತೋರಿಸುತ್ತಿದೆ. ದಿಶಾಂಕ್ ಅಪ್ಲಿಕೇಷನ್‌ನಲ್ಲಿ ಈ ಬಡಾವಣೆ ಸರಿಯಾಗಿ ಇದು ದಾಖಲಾಗಿಲ್ಲ. ಸರ್ಕಾರದ ಬಳಿ ಇರುವ ಮೂಲ ಕಂದಾಯ ದಾಖಲೆಗಳ ಪ್ರಕಾರ ಇದು ರಿ.ಸ.ನಂ. 48 ಆಗುತ್ತದೆಯೇ ಹೊರತು, 53 ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಖರಾಬು ಭೂಮಿ ಎಂಬುದಾಗಿ ನಮೂದಾದ ರಿಸನಂ 53 ಅಸ್ತಿತ್ವ ಕಳೆದುಕೊಂಡಿತು. ಹಾಗಾಗಿ ಅದು ದಾಖಲೆಯಿಂದ ಹೊರಗುಳಿಯಿತು. ಈ ಗ್ರಾಮಕ್ಕೆ ಅಂದಿಗೆ ಕಡೆಯ ರಿ.ಸ.ನಂ.162 (ಅಖೈರು) ಇತ್ತು. ಇದರಲ್ಲಿ 4.25 ಎಕರೆ ಖಬರಸ್ಥಾನ ಇದೆ. ಆ ಖಬರಸ್ಥಾನವು ಪಿಬಿ ರಸ್ತೆಯಲ್ಲಿದೆ. ಅಂದಿಗೆ ಅದು 162ನೇ ರಿ.ಸ.ನಂಬರ್. ಸರ್ಕಾರವೇ ಖಬರಸ್ಥಾನಕ್ಕೆ ನೀಡಿದ್ದ ಭೂಮಿ ಅದು. ಸರ್ವೇ ಅಧಿಕಾರಿಗಳು ರದ್ದಾದ 53ನೇ ಸರ್ವೇ ನಂಬರ್ ಕ್ರೊನೋಲಜಿ ತಪ್ಪಾಗಬಾರದೆಂದು 53ನ್ನು 162ಕ್ಕೆ ಸೇರಿಸುತ್ತಾರೆ. ಸರ್ವೇ ನಿಯಮಾನುಸಾರ ಸರ್ವೇ ನಂಬರ್ ಕೈ ತಪ್ಪ ಬಾರದೆಂದು ಹೀಗೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.ಆದರೆ, ಅದು ಗ್ರಾಮ ನಕ್ಷೆಯಲ್ಲಿ ಬದಲಾವಣೆಯಾಗದ್ದರಿಂದ ದಿಶಾ ಅಪ್ಲಿಕೇಷನ್‌ನಲ್ಲಿ ನಮೂದಾಗಲಿಲ್ಲ. ಈ ಪ್ರಮಾದ ತಾಂತ್ರಿಕ ತೊಂದರೆಯಿಂದ ಆಗಿದ್ದೇ ಹೊರತು, ಉದ್ದೇಶಪೂರ್ವಕವಾಗಿ ಆಗಿದ್ದಂತಹದ್ದಲ್ಲ. ವಕ್ಫ್ ಮಂಡಳಿ ಅಧಿಕಾರಿಯಿಂದಲೂ ಈ ಬಗ್ಗೆ ವಿವರಣೆ ಕೇಳಿದ್ದೆವು. ವಾಸ್ತವದಲ್ಲಿರುವ ಪಿಜೆ ಬಡಾವಣೆ ಮೇಲೆ ನಮ್ಮ ಯಾವುದೇ ಹಕ್ಕು ಇಲ್ಲವೆಂದು ವಕ್ಫ್ ಮಂಡಳಿಯ ಅಧಿಕಾರಿ ಪತ್ರದ ಮೂಲಕ ಉತ್ತರ ನೀಡಿದ್ದಾರೆ. ಈಗ ಪಿಜೆ ಬಡಾವೆಯನ್ನು 48ನೇ ರಿ.ಸ.ನಂ.ಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಒಂದೆರೆಡು ದಿನಗಳಲ್ಲಿ ಆರ್‌ಟಿಸಿ ಪರಿಶೀಲಿಸಿದರೆ ಸ್ಥಳೀಯ ನಿವಾಸಿಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಈಗ ಸರ್ವೇ ಇಲಾಖೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾದರೆ. ರಿ.ಸ.ನಂ.48 ಎಂಬುದಾಗಿ ದಿಶಾಂಕ್‌ನಲ್ಲೂ ಶೀಘ್ರವೇ ಬರಲಿದೆ. ಖಬರಸ್ಥಾನ ರಿ.ಸ.ನಂ.53 ಆಗಿಯೇ ಇದೆ. ಇದರಲ್ಲಿ 5 ಎಕರೆ ಭೂಮಿ ಇರಲಿದೆ. ಇದನ್ನು ಹೊರತುಪಡಿಸಿದರೆ, ಪಿಜೆ ಬಡಾವಣೆಯ ನಿವಾಸಿಗಳು ಯಾವುದೇ ಭಯಪಡಬೇಕಿಲ್ಲ ಎಂದು ತಹಸೀಲ್ದಾರ ಅಶ್ವತ್ಥ್ ಮನವಿ ಮಾಡಿದರು.ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಪಾಲಿಕೆ ಸದಸ್ಯರಾದ ಎ.ನಾಗರಾಜ, ಸವಿತಾ ಹುಲ್ಮನಿ ಗಣೇಶ, ಸುಧಾ ಇಟ್ಟಿಗುಡಿ, ಮಧು ಪವಾರ್, ಕಾಂಗ್ರೆಸ್ ಮುಖಂಡ, ಸ್ಥಳೀಯ ನಿವಾಸಿ ಎಸ್.ಎಸ್.ಗಿರೀಶ ಇತರರು ಇದ್ದರು.