ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕೆ, ಪ್ರವಾಸಿಗರನ್ನು ಆಕರ್ಷಿಸಿ ಅತ್ಯುನ್ನತ ಮಟ್ಟಕ್ಕೆ ಸ್ಥಾನ ಪಡೆಯುವಂತೆ ಮಾಡಲು ರಾಜ್ಯ ಸರ್ಕಾರ ವಿಶೇಷ ಗಮನಹರಿಸುತ್ತಿದ್ದು, ಈ ಬಗ್ಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕೆ, ಪ್ರವಾಸಿಗರನ್ನು ಆಕರ್ಷಿಸಿ ಅತ್ಯುನ್ನತ ಮಟ್ಟಕ್ಕೆ ಸ್ಥಾನ ಪಡೆಯುವಂತೆ ಮಾಡಲು ರಾಜ್ಯ ಸರ್ಕಾರ ವಿಶೇಷ ಗಮನಹರಿಸುತ್ತಿದ್ದು, ಈ ಬಗ್ಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ಅವರು ಭಾನುವಾರ ಮಂಗಳೂರಿನ ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಟ್‌ಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಸ್ತುತ ಕ್ರೂಸ್ ಶಿಪ್‌ಗಳು ಮಂಗಳೂರಿಗೆ ಬಂದು ಇಂಧನ ತುಂಬಿಸಿ ಹೋಗುತ್ತವೆ. ಪ್ರವಾಸಿಗರು ಯಾರೂ ಇಳಿದು ಇಲ್ಲಿ ಸ್ಥಳಗಳನ್ನು ವೀಕ್ಷಣೆ ಮಾಡುವುದಿಲ್ಲ. ಈಗಾಗಲೇ ಇಲಾಖಾ ಕಾರ್ಯದರ್ಶಿಯವರು ಮಂಗಳೂರು ಬಂದರು ಅಧಿಕಾರಿಗಳ ಜತಗೆ ಈ ಬಗ್ಗೆ ಸಭೆ ನಡೆಸಿದ್ದಾರೆ. ಮಂಗಳೂರಿನಿಂದ ಗೋವಾ ಕ್ರೂಸ್ ಶಿಪ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಕೇರಳ ಮಾದರಿಯಲ್ಲಿ ಬೋಟ್ ಹೌಸಗಳ ಮೂಲಕ ಪ್ರವಾಸಿಗಳನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ. ತಜ್ಞರು, ಸ್ಥಳೀಯರು, ಪಾಲುದಾರರ ಜತೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರವಾಸೋದ್ಯಮ ಸಭೆಯಲ್ಲಿ ಆಗ ಡಿಸಿಎಂ ಆಗಿದ್ದ ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಅದಕ್ಕೆ ಪೂರಕವಾಗಿ ಈ ಬಾರಿಯ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೆ ಉದ್ಯೋಗ, ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಬ್ಲೂಫ್ಯಾಗ್ ಬೀಚ್ ಅಭಿವೃದ್ಧಿಯ ಬಳಿಕ ನಿರ್ವಹಣೆ ವಿಚಾರವಾಗಿಯೂ ಹೆಚ್ಚಿನ ಗಮನ ಹರಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರಮುಖ ಪಾಲುದಾರರ ಜತೆ ನಡೆದ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದ್ದು, ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಪ್ರಮುಖ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಸಿಆರ್‌ಝೆಡ್ ತೊಡಕು ನಿವಾರಣೆಗೆ ಕ್ರಮ:ಕರಾವಳಿ ಅಭಿವೃದ್ಧಿಗೆ ಮುಖ್ಯ ಅಡ್ಡಿಯಾಗಿರುವ ಸಿಆರ್‌ಝೆಡ್ ನಿಯಮಗಳ ಸಮಸ್ಯೆ ಬಗೆಹರಿಸಲು, ನಿಯಮಾನುಸಾರ ರಸ್ತೆಗಳನ್ನು ಬಲಪಡಿಸಲು ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆದು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು. ಕಡಲತೀರಗಳಲ್ಲಿ ವಾಟರ್ ಸ್ಪೋರ್ಟ್ಸ್ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ಸಾಹಸಿ ಕ್ರೀಡೆಗಳಿಗೆ ಮತ್ತು ಮೂಲಭೂತ ಸೌಕರ್ಯಗಳನ್ನು ಖಾಸಗಿ ಸಹಭಾಗಿತ್ವದೊಂದಿಗೆ ಒದಗಿಸಲು ಸಭೆಯಲ್ಲಿ ಚರ್ಚಿಸಲಾಗಿದೆ.
ಹೋಂ ಸ್ಟೇಗಳ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸಲಾಗಿದೆ. ಮನೆಯಲ್ಲಿ ಅತಿಥಿಗಳಿಗಾಗಿ ಕೊಠಡಿ ಮಾಡಿ ಅದರಲ್ಲಿ ಪ್ರವಾಸಿಗರನ್ನು ಇರಿಸಿಕೊಳ್ಳುವುದು ಹೋಮ್ ಸ್ಟೇಯ ನೈಜ ಪರಿಕಲ್ಪನೆ. ಲಾಡ್ಜ್ ರೀತಿಯಲ್ಲಿ ಮಾಡುವುದನ್ನು ನಾವು ಒಪ್ಪುವುದಿಲ್ಲ. ಹಾಗಿದ್ದರೆ ಹೊಟೇಲ್‌ಗೆ ಅನುಮತಿ ಪಡೆದು ಮಾಡಬಹುದು. ಹೋಂ ಸ್ಟೇ ಮಾಡುವುದಾದರೆ ಅದರ ನಿಯಮಾವಳಿ ಪ್ರಕಾರವೇ ಮಾಡಬೇಕು ಎಂದರು.ನೇತ್ರಾವತಿ ನದಿಯಲ್ಲಿ ರಿವರ್ ಕ್ರೂಸ್ ಹಾಗೂ ಹೌಸ್‌ಬೋಟ್ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಸಮುದಾಯದ ಜನರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಅವರಿಗೆ ಹೊಸ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಕ್ರೂಸ್ ಹಡಗುಗಳಲ್ಲಿ ಮಂಗಳೂರಿಗೆ ಬರುವ ಪ್ರವಾಸಿಗರು ಕರಾವಳಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಕ್ರೂಸ್ ಸಂಪರ್ಕಿತ ಪ್ರವಾಸಿ ವಲಯಗಳು ಮತ್ತು ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಾಜಿ ಶಾಸಕ ಜೆ.ಆರ್.ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದ್ದರು.ಬೀಚ್ ವೀಕ್ಷಿಸಿದ ಸಚಿವರು:
ತಣ್ಣೀರುಬಾವಿ ಬೀಚ್‌ಗೆ ಆಗಮಿಸಿದ ಸಚಿವ ಕೆ.ಜೆ.ಜಾರ್ಜ್ ಅವರು ಬೀಚ್ ಪ್ರದೇಶವನ್ನು ವೀಕ್ಷಿಸಿ ಅಧಿಕಾರಿಗಳು, ಪ್ರಮುಖರಿಂದ ಮಾಹಿತಿ ಪಡೆದರು. ಬೀಟ್ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಬಹುದಾದ, ಅಳವಡಿಸಬೇಕಾಗಿರುವ ಮೂಲಸೌಕರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು. ಸ್ಥಳದಲ್ಲಿದ್ದ ಪಾಲುದಾರರು ಬೀಚ್ ಟೂರಿಸಂ ಪ್ರಗತಿಗೆ ಕೈಗೊಳ್ಳಬಹುದಾದ ಯೋಜನೆಗಳನ್ನು ಸಚಿವರಿಗೆ ವಿವರಿಸಿದರು.............
ಮಂಗಳೂರು-ಗೋವಾ ಕ್ರೂಸ್ ಪ್ರವಾಸೋದ್ಯಮನ್ಯೂ ಮಂಗಳೂರು ಬಂದರಿನ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರೂಸ್ ಹಡಗುಗಳನ್ನು ಆಕರ್ಷಿಸುವ ಕುರಿತು ಚರ್ಚಿಸಲಾಗಿದೆ. ಮಂಗಳೂರು-ಕಾರವಾರ-ಗೋವಾ ವಲಯದಲ್ಲಿ ದೇಶೀಯ ಕ್ರೂಸ್ ಸೇವೆಗಳನ್ನು ಉತ್ತೇಜಿಸಲು ಖಾಸಗಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುವುದು. ಕರಾವಳಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಜೆಟ್ಟಿ ಹಾಗೂ ಇತರೆ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಅನುಮತಿಗಳಿಗಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದರು.----