ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ ಸಂಚಾರ ಒತ್ತಡ ಹೆಚ್ಚಾಗಿದ್ದು, ಇದರ ನಿರ್ವಹಣೆಗೆ ಅಂಡರ್‌ಪಾಸ್ ಹಾಗೂ ಫ್ಲೈಓವರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದರು.
ಮಂಗಳೂರು : ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ ಸಂಚಾರ ಒತ್ತಡ ಹೆಚ್ಚಾಗಿದ್ದು, ಇದರ ನಿರ್ವಹಣೆಗೆ ಅಂಡರ್‌ಪಾಸ್ ಹಾಗೂ ಫ್ಲೈಓವರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದರು.ಅವರು ಸೋಮವಾರ ಮುಡಾ ಅಧ್ಯಕ್ಷರಾಗಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರತ್ರಕರ್ತರೊಂದಿಗೆ ಮಾತನಾಡಿದರು.ನಗರದ ಸಂಚಾರ ದಟ್ಟಣೆ ಗಮನದಲ್ಲಿದೆ. ಅದರ ನಿರ್ವಹಣೆಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು. ಕೆರೆಗಳು, ಪಾರ್ಕ್ ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇವೆ. ಮುಂದೆ ನಿರ್ಮಿಸುವ ಲೇ ಔಟ್ ಗಳಲ್ಲಿ ಪಾರ್ಕ್‌ಗಳನ್ನು ನಿರ್ಮಿಸಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು. 25-50 ಸೆಂಟ್ಸ್ ಜಾಗಗಳಲ್ಲಿ ಪಾರ್ಕ್‌ಗಳ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದರು.ಮಾಸ್ಟರ್‌ಪ್ಲಾನ್ ಶೀಘ್ರ ಜಾರಿಗೆ ಪ್ರಯತ್ನ:
ಮುಡಾದಲ್ಲಿ ಮಾಸ್ಟರ್ ಪ್ಲಾನ್‌ನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು. ನಗರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಪ್ರಮುಖವಾಗಿದೆ. ಅದರಲ್ಲಿರುವ ಸಣ್ಣಪುಟ್ಟ ಗೊಂದಲಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಚರ್ಚಿಸಿ ಬಗೆ ಹರಿಸಲಾಗುತ್ತಿದ್ದು, ಶೀಘ್ರದಲ್ಲೇ ಜಾರಿಗೊಳಿಸಲಾಗುವುದು.ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುಮತಿ ಸಿಗಲು ಬಾಕಿ ಇದೆ ಎಂದರು.ಮುಡಾ ಕೇವಲ ಸಿಂಗಲ್ ಸೈಟ್ ಹಂಚಿಕೆಗೆ ಸೀಮಿತವಾಗದೆ, ನಗರದ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ನಗರ ಹೊರವಲಯಗಳಾದ ಬಜ್ಪೆ, ಸುರತ್ಕಲ್ ವ್ಯಾಪ್ತಿಗಳಲ್ಲಿ ಅಭಿವೃದ್ಧಿಯ ಕೊರತೆ ಇದೆ. ರಸ್ತೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಉರ್ವ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಪಾಲಿಕೆಯೊಂದಿಗೆ ಸಂಯೋಜನೆ ನಡೆಸಿ ಕ್ರಮ ವಹಿಸಲಾಗುವುದು ಎಂದರು.ಮುಡಾ ವ್ಯಾಪ್ತಿಯಲ್ಲಿರುವ ಕುಂಜತ್ತಬೈಲ್‌ನಲ್ಲಿ 18 ಎಕರೆ ಜಾಗದಲ್ಲಿ 200 ಲೇಔಟ್‌ಗಳಿದ್ದು, 35 ಹಂಚಿಕೆಯಾಗಿದೆ. ಕೊಣಾಜೆಯಲ್ಲಿ 13.50 ಎಕರೆ ಜಾಗದಲ್ಲಿ 142 ಸೈಟ್‌ಗಳು ಹಾಗೂ ಚೇಳ್ಯಾರುವಿನಲ್ಲಿ 45 ಎಕರೆಯಲ್ಲಿ 700 ಸೈಟ್‌ಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ತ್ವರಿತವಾಗಿ ಸೈಟ್ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು. ಹೊರ ವಲಯಗಳಲ್ಲಿ ಬಡವರಿಗೆ ಕೈಗೆಟಕುವ ದರದಲ್ಲಿ ಜಾಗ ನೀಡಲಾಗುವುದು ಎಂದರು.ಮಧ್ಯವರ್ತಿಗಳ ನಿಯಂತ್ರಣಕ್ಕೆ ಕ್ರಮ:ಮುಡಾದಲ್ಲಿ ಮಧ್ಯವರ್ತಿಗಳ ಹಾವಳಿಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಚೇರಿ ಕೆಲಸಕ್ಕೆ ಒಂದಿಷ್ಟು ಹೊತ್ತು ನಿಂತು ಕಾಯಬೇಕಾಗುತ್ತದೆ. ಆದರೆ, ಜನರಿಗೆ ಕಾಯುವಷ್ಟು ತಾಳ್ಮೆ ಇರುವುದಿಲ್ಲ. ಜನರೇ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಮುಡಾದ ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಸಾಧ್ಯವಿರುವ ರೀತಿಯಲ್ಲಿ ಸರಳೀಕರಣ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಸುರೇಶ್ ಬಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೊ, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್, ಮುಖಂಡರಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ರವೂಫ್, ವಿನಯ್ ರಾಜ್, ಪ್ರವೀಣ್ ಆಳ್ವ, ವಿಕಾಸ್ ಶೆಟ್ಟಿ, ಸಂಶುದ್ದೀನ್, ಮುಡಾ ಆಯುಕ್ತ ಅಬ್ದುಲ್ ನಝೀರ್ ಮತ್ತಿತರರು ಇದ್ದರು.