ಸಾರಾಂಶ
ಭೂ ಮಾಲೀಕ ರೈತರಿಗೆ ಅಗತ್ಯ ಭೂ ದಾಖಲೆಗಳು ಕ್ಷಣಾರ್ಧದಲ್ಲಿ ಸಿಗಬೇಕೆಂಬ ದೃಷ್ಟಿಯಿಂದ ಹಾಗೂ ರೈತರ ಅಲೆದಾಟವನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಭೂ ಮಾಲೀಕ ರೈತರಿಗೆ ಅಗತ್ಯ ಭೂ ದಾಖಲೆಗಳು ಕ್ಷಣಾರ್ಧದಲ್ಲಿ ಸಿಗಬೇಕೆಂಬ ದೃಷ್ಟಿಯಿಂದ ಹಾಗೂ ರೈತರ ಅಲೆದಾಟವನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ನಗರದ ತಾಲೂಕು ಆಡಳಿತದ ಸೌಧದಲ್ಲಿ ಗುರುವಾರ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹುಡುಕುವುದು ಕಷ್ಟಕರವಾಗಿದ್ದು ಕಚೇರಿಗೆ ಅಲೆಯುವಂತಾಗಿತ್ತು. ಭೂ ಸುರಕ್ಷಾ ಯೋಜನೆಯಿಂದ ರೈತರು ಅಗತ್ಯ ಎಲ್ಲಾ ದಾಖಲೆಗಳನ್ನು ತಂತ್ರಜ್ಞಾನದಿಂದ ನಿಮ್ಮ ಮೊಬೈಲ್‌ನಲ್ಲಿಯೆ ನೋಡಬಹುದು. ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರಿಂದ ತಿದ್ದಲು, ಕಳೆಯಲು ಸಾಧ್ಯವಿಲ್ಲ. ದಾಖಲೆಗಳನ್ನು ಯಾರು ನಾಶ ಮಾಡಲೂ ಆಗುವುದಿಲ್ಲ. ದಾಖಲೆ ಸುಭದ್ರವಾಗಿ ಶಾಶ್ವತವಾಗಿರುತ್ತವೆ. ಈ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ನಮ್ಮ ಸರ್ಕಾರ ರೈತರಿಗೆ ಅನುಕೂಲವಾಗಲೆಂದು ಜಾರಿಗೆ ತಂದಿದೆ. ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತನೆಯಾಗಲಿವೆ. ರೆಕಾರ್ಡ್ ರೂಂಗಳಿಂದ ಪಡೆದುಕೊಳ್ಳಲು ಸಮಯದ ಅವಕಾಶ ನಿವಾರಣೆಯಾಗಲಿದೆ. ನೇರವಾಗಿ ನೀವೇ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳುವ ಅವಕಾಶವಿದ್ದು ದಾಖಲೆಗಳನ್ನು ರೈತರ ಕೈಗೆ ತಲುಪಿಸುವ ಯೋಜನೆ ಇದಾಗಿದ್ದು ರೈತ ಬಾಂದವರು ಯೋಜನೆಯ ಪ್ರಯೋಜನಪಡೆದುಕೊಳ್ಳಬೇಕೆಂದು ತಿಳಿಸಿದರು. ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ, ಕಂದಾಯ ಇಲಾಖೆಗೆ ಈ ಯೋಜನೆ ತಳಪಾಯವಿದ್ದಂತೆ ಭೂ ದಾಖಲೆಗಳನ್ನು ಭದ್ರವಾಗಿಡಲು ಸಹಕಾರಿಯಾಗಿದೆ. ೨೦೯ ತಾಲೂಕುಗಳಲ್ಲಿ ಇಂದು ಏಕಕಾಲದಲ್ಲಿ ಈ ಯೋಜನೆ ಜಾರಿಯಾಗುತ್ತಿದ್ದು ಅದರಲ್ಲಿ ತಿಪಟೂರು ತಾಲೂಕು ಒಂದಾಗಿದೆ. ನಮ್ಮಲ್ಲಿ ಭೂ ದಾಖಲೆಗಳನ್ನು ಇಡಲು ಐದು ಸೆಕ್ಷನ್‌ಗಳಿದ್ದು ಅದರಲ್ಲಿ ಎ ಮತ್ತು ಬಿ ಸೆಕ್ಷನ್ ಅತ್ಯಂತ ಮುಖ್ಯವಾದ ದಾಖಲೆಗಳದ್ದಾಗಿದೆ. ಇವುಗಳನ್ನು ಸ್ಕ್ಯಾನ್ ಮೂಲಕ ಡಿಜಿಟಲೀಕರಣ ಮಾಡಿದರೆ ಯಾರು ಸಹ ಕಳವು ಮಾಡುವುದಾಗಲಿ, ಶಿಥಿಲ ಅಥವಾ ತಿದ್ದುಪಡಿ ಮಾಡುವುದಕ್ಕೆ ಸಾಧ್ಯವಿಲ್ಲ. ರೈತರು ದಾಖಲೆಗಾಗಿ ಅಲೆಯುವುದು ತಪ್ಪುತ್ತದೆ. ಮೊಬೈಲ್ ಮೂಲಕ ದಾಖಲಾತಿಗಳನ್ನು ನೋಡಬಹುದಾಗಿದೆ. ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿರುವ ೬ ಕೋಟಿ ಪುಟಗಳಷ್ಟು ಭೂ ದಾಖಲೆಗಳನ್ನು ಗಣಕೀಕರಣಗೊಳಿಸಬೇಕಿದೆ. ಈಗಾಗಾಲೆ ನಮ್ಮ ಕಚೇರಿಯಲ್ಲಿ ಸ್ಯ್ಕಾನ್ ಮಾಡಲು ಆರು ಜನ ಸಿಬ್ಬಂದಿಗಳನ್ನು ಸರ್ಕಾರದ ವತಿಯಿಂದ ನೇಮಕ ಮಾಡಲಾಗಿದೆ ಎಂದರು. ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಮಾತನಾಡಿ ಇದು ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಗ್ರಾಮ ಮತ್ತು ಹೋಬಳಿವಾರು ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡುವುದರಿಂದ ಹಂತ ಹಂತವಾಗಿ ತ್ವರಿತಗತಿಯಲ್ಲಿ ಕೆಲಸ ಮಾಡಲಾಗುವುದು. ರೈತರು ಸ್ಪಂದಿಸುವ ಮೂಲಕ ಸಹಕಾರ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಲೋಕನಾಥ್‌ಸಿಂಗ್, ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ರವಿಕುಮಾರ್, ಅಶೋಕ್, ಸಿಬ್ಬಂದಿಗಳಾದ ಪುನೀತ್ ಸೇರಿದಂತೆ ಇತರ ಸಿಬ್ಬಂದಿ ವರ್ಗದವರಿದ್ದರು.