ಬುರುಡಾಳು ಬೋರೆಯಲ್ಲಿ ಕಾಡುಜಾತಿ ಮರ ಬೆಳೆಸಲು ಯೋಜನೆ

| Published : May 04 2024, 12:41 AM IST

ಸಾರಾಂಶ

ಹೇಮಗಂಗೋತ್ರಿ ಸಮೀಪವಿರುವ ಬುರುಡಾಳು ಬೋರೆಯಲ್ಲಿರುವ ನೀಲಗಿರಿ ಮರಗಳನ್ನು ಬೇರು ಸಹಿತ ತೆಗೆದು ಅಲ್ಲಿ ಸ್ಥಳೀಯ ಪ್ರಭೇದಗಳಿರುವ ಮರ ಗಿಡಗಳನ್ನು ಬೆಳೆಸುವ ಯೋಜನೆಗೆ ಶೀಘ್ರದಲ್ಲಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆಯಲಾಗುವುದು ಎಂದು ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೇಮಗಂಗೋತ್ರಿ ಸಮೀಪವಿರುವ ಬುರುಡಾಳು ಬೋರೆಯಲ್ಲಿರುವ ನೀಲಗಿರಿ ಮರಗಳನ್ನು ಬೇರು ಸಹಿತ ತೆಗೆದು ಅಲ್ಲಿ ಸ್ಥಳೀಯ ಪ್ರಭೇದಗಳಿರುವ ಮರ ಗಿಡಗಳನ್ನು ಬೆಳೆಸುವ ಯೋಜನೆಗೆ ಶೀಘ್ರದಲ್ಲಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆಯಲಾಗುವುದು ಎಂದು ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಹೇಳಿದ್ದಾರೆ. ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ನಲ್ಲಿರುವ ಹಸಿರು ಸಿರಿಯಲ್ಲಿ ನಡೆದ ಹಸಿರು ಭೂಮಿ ಪ್ರತಿಷ್ಠಾನದ ೭ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಈ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆಗೆದು ಬುರುಡಾಳು ಬೋರೆಯನ್ನು ಒಂದು ಜೀವ ವೈವಿಧ್ಯತೆಯ ತಾಣವಾಗಿ ರೂಪಿಸಬೇಕೆಂದು ಹಸಿರು ಭೂಮಿ ಪ್ರತಿಷ್ಠಾನವು ಕೆಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದೆ.

ಕಾರ್ಯ ಯೋಜನೆಯಂತೆ ಅವಧಿ ಪೂರ್ಣಗೊಳ್ಳದೆ ಮರಗಳನ್ನು ಕಡಿಯಲು ಸರ್ಕಾರದಿಂದ ಅನುಮತಿ ಸಿಗಲಿಲ್ಲ, ಈ ಸಲಹೆ ಕಾರ್ಯರೂಪಕ್ಕೆ ಬರಲು ಸ್ವಲ್ಪ ವಿಳಂಬವಾಗಿದೆ. ಈಗ ಅವಧಿ ಪೂರ್ಣಗೊಂಡ ನೀಲಗಿರಿ ಮರಗಳನ್ನು ತೆಗೆದು ಹಂತ ಹಂತವಾಗಿ ಬುರುಡಾಳು ಬೋರೆ ಹಾಗೂ ಗೆಂಡೆಕಟ್ಟೆ ಅರಣ್ಯ ಪ್ರದೇಶವನ್ನು ವಿವಿಧ ಜಾತಿಯ ಮರಗಿಡಗಳನ್ನು ಬೆಳೆಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವರಿಸಿದರು.

ಒಬ್ಬ ಅಧಿಕಾರಿ ಏನೇ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದರು ಅದನ್ನು ಮುಂದುವರಿಸಿಕೊಂಡು ಹೋಗಲು ಸ್ಥಳಿಯರ ಆಸಕ್ತಿ ಜನರ ತಂಡ ಇರಬೇಕಾಗಿರುತ್ತದೆ. ಅಂತಹ ತಂಡವನ್ನು ಹಸಿರು ಭೂಮಿ ಪ್ರತಿಷ್ಠಾನವು ಕಟ್ಟಿ ಬೆಳೆಸುತ್ತಿರುವುದನ್ನು ನೋಡಿ ಬಹಳ ಸಂತೋಷವಾಗಿರುತ್ತದೆ ಎಂದು ಸೌರಭ್ ಕುಮಾರ್ ಹೇಳಿದರು.

ತಮ್ಮ ವಿಭಾಗದಲ್ಲಿ ಮರಗಿಡಗಳನ್ನು ಬೆಳೆಸಲು ಆಸಕ್ತಿ ತೋರುವ ಸಂಘ ಸಂಸ್ಥೆಯವರು ತಾವು ಇಚ್ಚಿಸುವ ಪ್ರಭೇದಗಳಿಗೆ ಮುಂಚಿತವಾಗಿ ಕೋರಿಕೆ ಸಲ್ಲಿಸಿದರೆ ಅಗತ್ಯಕ್ಕನುಗುಣವಾಗಿ ಸಸಿಗಳನ್ನು ಇಲಾಖೆಯಿಂದ ಬೆಳೆಸಿಕೊಡಲಾಗುವುದು ಎಂದು ತಿಳಿಸಿದರು.ಮತ್ತೊಬ್ಬ ಮುಖ್ಯ ಅತಿಥಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಸಂತೋಷ್ ಕುಮಾರ್ ಮಾತನಾಡಿ, ತಮ್ಮ ಸಂಸ್ಥೆಯ ಆವರಣದಲ್ಲಿ ಹಸಿರೀಕರಣಕ್ಕೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿರುವುದರಿಂದ ಸಂಸ್ಥೆಗೆ 2 ಬಾರಿ ಕಾಯಕಲ್ಪ ಪ್ರಶಸ್ತಿ ಬಂದಿದೆ ಎಂದರು. ಮೆಡಿಕಲ್ ಕಾಲೇಜಿನ ಕಟ್ಟಡಗಳಲ್ಲಿ ಹಾಗೂ ಮಳೆ ನೀರಿನ ಕೋಯ್ಲು ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಮೆಡಿಕಲ್ ಕಾಲೇಜು ಕಟ್ಟಡದಲ್ಲಿ ಸೌರಶಕ್ತಿಯಿಂದ ವಿದ್ಯುತ್ ಪಡೆಯುವ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ನರ್ಸಿಂಗ್ ಕಾಲೇಜು ಆವರಣದಲ್ಲಿ ಮಳೆನೀರು ಕೋಯ್ಲಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಮುಖ್ಯ ಅತಿಥಿ ಎವಿಕೆ ಕಾಲೇಜಿನ ಪ್ರಾಂಶುಪಾಲ ಡಾ. ಸೀ.ಚ. ಯತೀಶ್ವರ್ ಮಾತನಾಡಿ, ತಮ್ಮ ಕಾಲೇಜಿನ ಎನ್ಎಸ್ಎಸ್ ಘಟಕದಿಂದ ಒಂದು ಅರಣ್ಯ ಬೆಳೆಸಲಾಗುವುದು ಎಂದು ಹಾಸನದ ಪ್ರತಿ ಮನೆಯವರು ಗಿಡ ನೆಟ್ಟು ಪೋಷಿಸುವಂತೆ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಮೂಲಕ ಮನ ಒಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪ್ರಾಸ್ತಾವಿಕ ನುಡಿ ಮಾತನಾಡಿದ ಹಸಿರು ಭೂಮಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಟಿ. ಹೆಚ್. ಅಪ್ಪಾಜಿ ಗೌಡ ೨೦೧೭ ರ ಮೇ ೧ ರಂದು ಆರಂಭಗೊಂಡು ಸಂಸ್ಥೆಯು ಬೆಳೆದು ಬಂದ ದಾರಿಯನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ, ಸಮಾಜ ಸೇವಕ ಎಸ್.ಎಸ್. ಪಾಷಾ, ರಾಜೀವ್ ಗೌಡ, ವಕೀಲರಾದ ಗಿರಿಜಾಂಬಿಕ, ಭಾನುವತಿ ಹಾಗೂ ಹಲವು ಟ್ರಸ್ಟಿಗಳು ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.