ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನಲ್ಲಿ ಪ್ರವಾಸೋದ್ಯಮಿಗಳು ಒಗ್ಗಟ್ಟಿನಿಂದ ಪರಿಸರ ಸ್ನೇಹಿಯಾದ ವಿನೂತನ ಯೋಜನೆ ಜಾರಿಗೆ ಮುಂದಾದರೆ ಖಂಡಿತವಾಗಿಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉಜ್ವಲ ಭವಿಷ್ಯವಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.ನಗರದ ಹೊರವಲಯದಲ್ಲಿನ ರೆಸಾರ್ಟ್‌ನಲ್ಲಿ ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್ ನೂತನ ವೆಬ್ ಸೈಟ್, ಲಾಂಛನ ಅನಾವರಣಗೊಳಿಸಿ ಜಿಲ್ಲಾಧಿಕಾರಿ ಮಾತನಾಡಿದರು.
ಕೊಡಗಿನ ನಿಸರ್ಗ ಸಂಪತ್ತು, ಶ್ರೀಮಂತ ಸಂಸ್ಕೃತಿಯನ್ನೂ ಪ್ರವಾಸೋದ್ಯಮಿಗಳು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಗಮನ ನೀಡಬೇಕೆಂದು ಅವರು ಕಿವಿಮಾತು ಹೇಳಿದ್ದಾರೆ.ಕುಶಾಲನಗರ- ಮಡಿಕೇರಿ ನಡುವಿನ ಹೆದ್ದಾರಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಖಾಸಗಿ ಜಾಗ ದೊರಕಿದರೆ, ಶೌಚಾಲಯ ಮಿನಿ ರೆಸ್ಟೋರೆಂಟ್ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಸಾಧ್ಯವಿದೆ. ಸದ್ಯದಲ್ಲಿಯೇ ಮೈಸೂರು- ಕುಶಾಲನಗರ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾದ ನಂತರ ಕುಶಾಲನಗರದಲ್ಲಿ ವಾಹನ ದಟ್ಟಣೆ ಇಳಿಮುಖವಾಗುವ ಸಾಧ್ಯತೆಯಿದೆ ಎಂದರು.
ಮಡಿಕೇರಿಯಲ್ಲಿ ವಾಹನ ದಟ್ಟಣೆ ಮತ್ತು ವಾಹನ ನಿಲುಗಡೆ ಸಮಸ್ಯೆ ನಿವಾರಿಸಲು ಸೂಕ್ತ ಸ್ಥಳಗಳಲ್ಲಿ ಪ್ರವಾಸಿ ವಾಹನ ನಿಲುಗಡೆಗೊಳಿಸಿ ಅಂಥ ಸ್ಥಳದಿಂದ ಪ್ರವಾಸಿಗರನ್ನು ಪ್ರವಾಸಿ ಸಂಚಾರಿ ವಾಹನಗಳ ಮೂಲಕ ಪ್ರವಾಸೀ ತಾಣಗಳಿಗೆ ಕರೆದೊಯ್ಯುವ ಸೌಲಭ್ಯದತ್ತ ಚಿಂತನೆ ಹರಿಸಬೇಕಾಗಿದೆ ಎಂದು ಸಲಹೆ ನೀಡಿದರು.ಕಳಪೆ ಗುಣಮಟ್ಟದ, ನಕಲಿ ಉತ್ಪನ್ನಗಳು ಕೊಡಗು ಹೆಸರಿನಲ್ಲಿ ಮಾರಾಟವಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರತ್ಯೇಕವಾದ ಕೊಡಗು ಬ್ರಾಂಡ್ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ನಿಟ್ಟಿನಲ್ಲಿಯೂ ಗಮನ ನೀಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೂರ್ಗ್ ಹೋಟೆಲ್ಸ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಭವಿಷ್ಯದಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಕಷ್ಟು ನೂತನ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ತಮ್ಮ ಅಸೋಸಿಯೇಷನ್‌ಗೆ ಕಚೇರಿ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದರು.ಪ್ರವಾಸೋದ್ಯಮಿ ಮತ್ತು ಸಂಘದ ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ಮಾತನಾಡಿ, ಕುಶಾಲನಗರಕ್ಕೆ ರೈಲ್ವೇ ಮಾರ್ಗ ಸಂಪರ್ಕ ಯೋಜನೆ ದಶಕಗಳಿಂದ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಬೇಕು. ಕೊಡಗಿನಲ್ಲಿ ಹಲವಾರು ತಾಣಗಳಿದ್ದು, ಇವುಗಳಿಗೆ ಕಾಯಕಲ್ಪ ನೀಡಿದ್ದಲ್ಲಿ, ಈಗಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ದಟ್ಟಣೆ ಕಡಮೆಯಾಗಲು ಸಾಧ್ಯವಿದೆ ಎಂದೂ ಸಲಹೆ ನೀಡಿದರು.
ಪ್ರವಾಸೋದ್ಯಮಿ ಕೊಲ್ಲೀರ ಧರ್ಮಜ ಮಾತನಾಡಿ, ಫೋಟೋಗ್ರಫಿ ಟೂರಿಸಂಗೆ ದಕ್ಷಿಣ ಕೊಡಗಿನಲ್ಲಿ ಸಾಕಷ್ಟು ಅವಕಾಶವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ಹರಿಸಬೇಕೆಂದು ಸಲಹೆ ನೀಡಿದರು. ನಾಗರಹೊಳೆಯಲ್ಲಿ ಸಫಾರಿ ವಾಹನಗಳು ಆಗಿಂದಾಗ್ಗೆ ದುರಸ್ತಿಯಾಗುತ್ತಿದೆ. ದೂರದಿಂದ ಬರುವ ಪ್ರವಾಸಿಗರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದರು.ಪ್ರವಾಸೋದ್ಯಮಿ ಮೋಹನ್ ದಾಸ್ ಮಾತನಾಡಿ, ಪರಿಸರ ಸ್ನೇಹಿಯಾಗಿ ಕಾಫಿ ಪ್ರವಾಸೋದ್ಯಮವನ್ನು ಕೊಡಗಿನ ಕಾಫಿ ತೋಟಗಳಲ್ಲಿ ಪರಿಚಯಿಸಲು ಅವಕಾಶ ಇದೆ ಎಂದರು. ಪ್ರವಾಸೋದ್ಯಮಿ ಜಯಚಿಣ್ಣಪ್ಪ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ಮತ್ತಷ್ಟು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.
ಪ್ರವಾಸೋದ್ಯಮಿ ಜಗದೀಶ್ ಮಾತನಾಡಿದರು.ಪ್ರವಾಸೋದ್ಯಮಿ ಮದನ್ ರೂಪಿಸಿದ ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್‌ನ ನೂತನ ವೆಬ್ ಸೈಟನ್ನು ಜಿಲ್ಲಾಧಿಕಾರಿ ಅನಾವರಣಗೊಳಿಸಿದರು. ನಗರಸಭೆಯ ಪೌರಾಯುಕ್ತ ರಮೇಶ್, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬಸಪ್ಪ, ಅಸೋಸಿಯೇಷನ್ ಖಜಾಂಜಿ ಸಾಗರ್ ವೇದಿಕೆಯಲ್ಲಿದ್ದರು.
ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್ ಸ್ವಾಗತಿಸಿದರು. ಉಪಾಧ್ಯಕ್ಷ ಬೇರೇರ ಮಂಜುನಾಥ್ ವಂದಿಸಿದರು. ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ನಿರೂಪಿಸಿದರು.ಇದೇ ಸಂದರ್ಭ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.