ಪಂದ್ಯಾವಳಿಯಲ್ಲಿ ಗೆದ್ದ ಬಾಲಕರ ತಂಡಕ್ಕೆ ಪ್ರಥಮ ೫೦ ಸಾವಿರ ರು., ದ್ವಿತೀಯ ಬಹುಮಾನ ೩೦ ಸಾವಿರ ರು., ಸೆಮಿಫೈನಲ್‌ನ ಎರಡು ತಂಡಗಳಿಗೆ ತಲಾ ೧೫ ಸಾವಿರ ರು. ಹಾಗೂ ಬಾಲಕಿಯರ ತಂಡಕ್ಕೆ ೪೦ ಸಾವಿರ ರು. ಪ್ರಥಮ, ೨೦ ಸಾವಿರ ರು. ದ್ವಿತೀಯ ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳಿಗೆ ತಲಾ ೧೦ ಸಾವಿರ ರು. ನಗದು ಬಹುಮಾನ, ಟ್ರೋಫಿ ವಿತರಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಡಿ.೧೧ ರಿಂದ ೧೪ರವರೆಗೆ ತಾಲೂಕಿನ ವಿ.ಸಿ. ಫಾರಂ ಕೃಷಿ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಜೂನಿಯರ್ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಚಾಂಪಿಯನ್‌ಶಿಪ್-ಕೆ.ಎಸ್.ಪುಟ್ಟಣ್ಣಯ್ಯ ಕಪ್-೨೦೨೫ ಪಂದ್ಯಾವಳಿ ನಡೆಯಲಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳ ೨೦ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಸೇರಿದಂತೆ ಸುಮಾರು ೬೨ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಸುಮಾರು ೧೧೦ ಪಂದ್ಯಾವಳಿಗಳು ನಡೆಯಲಿವೆ. ೪೦ ನಿಮಿಷಗಳ ಆಟಕ್ಕೆ ಅವಕಾಶ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಒಂದು ಸಾವಿರಕ್ಕೂ ಹೆಚ್ಚು ಮಂದಿ ಕ್ರೀಡಾಪಟುಗಳು, ೫೦ ತಾಂತ್ರಿಕ ಅಧಿಕಾರಿಗಳು, ಪಂದ್ಯಾವಳಿಯ ಆಯೋಜಕರನ್ನೊಳಗೊಂಡ ಸುಮಾರು ೧೩೦೦ ಮಂದಿಗೆ ವಸತಿ, ಊಟೋಪಚಾರ, ಕ್ರೀಡಾ ಸಮವಸ್ತ್ರ, ನಾಲ್ಕು ಮ್ಯಾಟ್ ಅಂಕಣಗಳು, ಬಹುಮಾನ, ಸಾರಿಗೆ ಹಾಗೂ ಇತರೆ ಮೂಲಭೂತ ಸೌಲಭ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗಣ್ಯರ ವೇದಿಕೆ ಹಾಗೂ ೫ ಸಾವಿರ ಜನರು ಕುಳಿತು ಪಂದ್ಯಾವಳಿ ವೀಕ್ಷಿಸಲು ಎರಡು ಸಾವಿರ ಚದರಡಿಯ ಅತ್ಯುತ್ತಮ ದರ್ಜೆಯ ಗ್ಯಾಲರಿ ವ್ಯವಸ್ಥೆ, ಹೆಚ್ಚಿನ ಜನರ ವೀಕ್ಷಣೆಗಾಗಿ ಪ್ರತ್ಯೇಕ ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದ್ದು, ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಭಾಗವಹಿಸುವ ಕರ್ನಾಟಕ ಬಾಲಕ- ಬಾಲಕಿಯರ ಕಬಡ್ಡಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.

ಪಂದ್ಯಾವಳಿಯ ವ್ಯವಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸಲು ೨೦೦ಕ್ಕೂ ಹೆಚ್ಚು ಮಂದಿ ನುರಿತ ಸ್ವಯಂಸೇವಕರು, ಸಿಬ್ಬಂದಿ ತಂಡ ಭಾಗವಹಿಸಲಿದ್ದು, ಸುಮಾರು ೫೦ ಲಕ್ಷಕ್ಕೂ ಹೆಚ್ಚು ವೆಚ್ಚದ ಸುಸಜ್ಜಿತ, ಯೋಜಿತ ಕಾರ್ಯಕ್ರಮವಾಗಿ ಮಾಡಲಾಗುವುದು ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಗೆದ್ದ ಬಾಲಕರ ತಂಡಕ್ಕೆ ಪ್ರಥಮ ೫೦ ಸಾವಿರ ರು., ದ್ವಿತೀಯ ಬಹುಮಾನ ೩೦ ಸಾವಿರ ರು., ಸೆಮಿಫೈನಲ್‌ನ ಎರಡು ತಂಡಗಳಿಗೆ ತಲಾ ೧೫ ಸಾವಿರ ರು. ಹಾಗೂ ಬಾಲಕಿಯರ ತಂಡಕ್ಕೆ ೪೦ ಸಾವಿರ ರು. ಪ್ರಥಮ, ೨೦ ಸಾವಿರ ರು. ದ್ವಿತೀಯ ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳಿಗೆ ತಲಾ ೧೦ ಸಾವಿರ ರು. ನಗದು ಬಹುಮಾನ, ಟ್ರೋಫಿ ವಿತರಿಸಲಾಗುವುದು ಎಂದು ತಿಳಿಸಿದರು.

ನಾಲ್ಕು ದಿನಗಳ ಕಾಲ ಹಗಲು ಮತ್ತು ರಾತ್ರಿ ಹೊನಲು ಬೆಳಕಿನ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ೨೦ ಜನ ಆಟಗಾರ ತಂಡವನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್‌ನ ಆಟಗಾರರು, ಪ್ರೊ- ಕಬಡ್ಡಿ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಆಟಗಾರರು ಆಗಮಿಸಲಿದ್ದಾರೆ. ಜೊತೆಗೆ ಒಂದು ದಿನ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹೆಸರಾಂತ ಫಿಟ್‌ನೆಸ್ ತಜ್ಞರಿಂದ ವಿಚಾರ ಸಂಕಿರಣವನ್ನೂ ಏರ್ಪಡಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಜಿ.ಸಿ.ವಿಜಯಕುಮಾರ್, ಹರ್ಷ, ರಾಮು, ಕೆ.ಆರ್.ಶಂಕರ್, ಪ್ರಕಾಶ್ ಇತರರಿದ್ದರು.