ರಂಗ ಕಲೆ ಉಳಿಸಲು ನಾಟಕಗಳ ಆಯೋಜನೆ ಉತ್ತಮ: ಚೈತ್ರ ಶಶಿಧರ್ ಗೌಡ

| Published : Feb 24 2025, 12:30 AM IST

ರಂಗ ಕಲೆ ಉಳಿಸಲು ನಾಟಕಗಳ ಆಯೋಜನೆ ಉತ್ತಮ: ಚೈತ್ರ ಶಶಿಧರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ಕಲಾವಿದರು ಮತ್ತು ಜನರಿಂದ ಮಾತ್ರ ರಂಗಭೂಮಿ ನಾಟಕಗಳನ್ನು ಉಳಿಸಲು ಸಾಧ್ಯ. ರಂಗಭೂಮಿ ನಾಟಕ ಆಗಾಗ್ಗೆ ನಡೆದರೆ ಹಲವು ರಂಗಭೂಮಿ ಕಲಾವಿದರ ಕುಟುಂಬಗಳು ಉಳಿಯುತ್ತವೆ. ಹೀಗಾಗಿ ರಂಗಕಲೆ ಪೋತ್ಸಾಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ರಂಗಕಲೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಅವುಗಳನ್ನು ಉಳಿಸಲು ಹೆಚ್ಚು ನಾಟಕಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಮಾಜ ಸೇವಕಿ ಚೈತ್ರ ಶಶಿಧರ್‌ಗೌಡ ತಿಳಿಸಿದರು.

ಮೆಣಸಗೆರೆ ಗ್ರಾಮದಲ್ಲಿ ಶ್ರೀಶನಿದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಹದೇಶ್ವರ ಕೃಪ ಘೋಷಿತ ನಾಟಕ ಮಂಡಳಿಯಿಂದ ಏರ್ಪಡಿಸಿದ ಶ್ರೀಶನಿಪ್ರಭಾವ ಹಾಗೂ ರಾಜ ಸತ್ಯವ್ರತ ಎಂಬ ಪೌರಾಣಿಕ ನಾಟಕದಲ್ಲಿ ಅಭಿನಂದನೆ ಸ್ವೀಕರಿಸಿ ಆರ್ಥಿಕ ನೆರವು ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಕಲಾವಿದರು ಮತ್ತು ಜನರಿಂದ ಮಾತ್ರ ರಂಗಭೂಮಿ ನಾಟಕಗಳನ್ನು ಉಳಿಸಲು ಸಾಧ್ಯ. ರಂಗಭೂಮಿ ನಾಟಕ ಆಗಾಗ್ಗೆ ನಡೆದರೆ ಹಲವು ರಂಗಭೂಮಿ ಕಲಾವಿದರ ಕುಟುಂಬಗಳು ಉಳಿಯುತ್ತವೆ. ಹೀಗಾಗಿ ರಂಗಕಲೆ ಪೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಪ್ರಸ್ತುತ ದಿನದಲ್ಲಿ ಟಿವಿಯಲ್ಲಿ ಬರುವಂತ ಧಾರವಾಹಿಗಳಿಂದ ನಮ್ಮ ಸಂಸ್ಕೃತಿ ನಾಶಗೊಳ್ಳುತ್ತಿದೆ. ಯುವ ಸಮುದಾಯ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿ ಮೊಬೈಲ್‌ಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಗ್ರಾಮೀಣ ಸಂಸ್ಕೃತಿಯ ನಾಟಕಗಳು ನಶಿಸುತ್ತಿವೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಮಾಜಿ ಅಧ್ಯಕ್ಷ ಎಂ.ಕೆ. ಮಹದೇವು, ಮುಖಂಡರಾದ ನಂಜುಂಡಸ್ವಾಮಿ, ಪ್ರಮೋದ್, ಆಲೂರೇಗೌಡ, ರಾಜಣ್ಣ, ಚಲುವರಾಜು, ರಾಜೇಶ್ ಸೇರಿದಂತೆ ಉಪಸ್ಥಿತರಿದ್ದರು.

9 ವಿವಿಗಳ ವಿಲೀನ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿ: ಸಿ.ಟಿ.ಮಂಜುನಾಥ್

ಕನ್ನಡಪ್ರಭ ವಾರ್ತೆ ಮಂಡ್ಯ

ಹಣಕಾಸಿನ ಹೊರೆಯ ನೆಪವೊಡ್ಡಿ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸಿರುವ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಬೊಬ್ಬೆ ಹಾಕುವ ಮುಖ್ಯಮಂತ್ರಿಗಳು, ಸಚಿವರು ಹಾಗೂ ಕಾಂಗ್ರೆಸ್ಸಿಗರು, ಕೂಡಲೇ ಶ್ವೇತಪತ್ರ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆ ಯೋಜನೆಯಡಿ 9 ವಿವಿಗಳನ್ನು ಸ್ಥಾಪಿಸಿ ಎಲ್ಲದ್ದಕ್ಕೂ ಕುಲಪತಿಗಳನ್ನೂ ನೇಮಕ ಮಾಡಿತ್ತು. ಆದರೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಣಕಾಸಿನ ಹೊರೆಯ ನೆಪವೊಡ್ಡಿ ವಿಲೀನ ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಪೆಟ್ಟು ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿ ಬೇಕಾಗಿರುವ ಅಧ್ಯಾಪಕರು ಮತ್ತು ಸಿಬ್ಬಂದಿಗಳ ನೇಮಕ, ಜೊತೆಗೆ ಕೇಂದ್ರ ಸರ್ಕಾರಕ್ಕೆ ಯುಜಿಸಿ ಅನುದಾನಕ್ಕೆ ಶಿಫಾರಸ್ಸು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಇದೀಗ ಕುಂಟು ನೆಪ ಹೇಳಿಕೊಂಡು ವಿಲೀನಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೂಡಲೇ ಮೈಸೂರು ವಿವಿಯೊಂದಿಗೆ ಮಂಡ್ಯ ವಿಶ್ವವಿದ್ಯಾಲಯವನ್ನು ವಿಲೀನ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಮಂಡ್ಯ ವಿವಿಯನ್ನು ಶಕ್ತಿಯುತವಾಗಿ ಬೆಳೆಸಲು ಯೋಜನೆ ರೂಪಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.