ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹುಟ್ಟುಹಬ್ಬದ ನೆನಪಿನಲ್ಲಿ ಒಂದಾದರೂ ಗಿಡ ನೆಟ್ಟು ಪೋಷಿಸಿದರೆ ಬದುಕು ಸಾರ್ಥಕತೆ ಪಡೆದುಕೊಳ್ಳಲಿದೆ ಎಂದು ಖ್ಯಾತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಹೋಬಳಿಯ ಊಗಿನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಹುಟ್ಟಿದ ಹಬ್ಬದ ನೆನಪಿನಲ್ಲೊಂದು ಗಿಡ ನೆಡಿ’ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನನ್ನು ಗಾಯಕನಾಗಿ ಎಲ್ಲರೂ ಗುರುತಿಸಿದ್ದಾರೆ. ಈಗ ನಾನು ಹುಟ್ಟೂರಿನ ಸುತ್ತಮುತ್ತಲ ಪರಿಸರ ಕಂಡು ಮನಸೋತಿದ್ದೇನೆ. ನಾನಿಂದು ಪರಿಸರ ಪ್ರೇಮಿ ಗಾಯಕನಾಗಿರುವೆ ಎಂದರು.

ನನ್ನ ಹುಟ್ಟುಹಬ್ಬದಿಂದ ಹಿಡಿದು ಯಾವುದೇ ಕಾರ್ಯಕ್ರಮಕ್ಕೂ ಮುನ್ನ ಆ ಸ್ಥಳದಲ್ಲಿ ಗಿಡ ನೆಡುವುದು. ಪೋಷಿಸುವುದು, ಪರಿಸರ ಜಾಗೃತಿ ಮೂಡಿಸುವುದನ್ನು ನನ್ನ ಕಾರ್ಯಕ್ರಮದ ಒಂದು ಭಾಗವಾಗಿ ರೂಪಿಸಿಕೊಂಡಿರುವೆ. ಸಾಲು ಮರದ ತಿಮ್ಮಕ್ಕನಂತಹ ಹಲವಾರು ಪರಿಸರ ಪ್ರೇಮಿಗಳು ತನಗೆ ಪರಿಸರ ಪಾಠ ಕಲಿಸಿ ಕಣ್ತೆರೆಸಿದ್ದಾರೆ ಎಂದು ಸ್ಮರಿಸಿದರು.

ಹುಟ್ಟುಹಬ್ಬಕ್ಕೆ ಸುಖಾಸುಮ್ಮನೆ ದುಂದು ವೆಚ್ಚ ಮಾಡುವ ಬದಲು ಇರುವ ಪರಿಸರ ಉಳಿಸಬೇಕಿದೆ. ಜನಸಂಖ್ಯೆ ಹೆಚ್ಚಬಹುದು. ಆದರೆ ಭೂಮಿ ಬೆಳೆಯಲಾರದು. ಇರುವಷ್ಟು ಭೂಮಿಯಲ್ಲಿ ಸಮೃದ್ಧಿಯ ಬದುಕು ಸಾಗಿಸಲು ಗಿಡಮರ ಬೆಳೆಸಿ ನಾಡಿಗೆ ಹಸಿರು ಚಪ್ಪರ ಹಾಕಬೇಕಿದೆ ಎಂದರು.


ಮನೆಗೊಬ್ಬ ಪರಿಸರ ಪ್ರೇಮಿ ಇದ್ದರೆ ನಾಡು ಆರೋಗ್ಯದ ಬೀಡಾಗಲಿದೆ. ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಲು ಮೊದಲು ಪೋಷಕರು ಸರಳ ಬದುಕು ಎತ್ತರದ ಚಿಂತನೆ ರೂಢಿಸಿಕೊಳ್ಳಬೇಕಿದೆ. ರಸ್ತೆ ಬದಿಯಲ್ಲಿ ಗಿಡ ನೆಟ್ಟು ಉಳಿಸುವ ಪರಿಕಲ್ಪನೆ ಮೂಡಿಸಿಕೊಳ್ಳಬೇಕಿದೆ ಎಂದರು.

ಬೇಸಿಗೆ ಬಂದಿದೆ. ಪ್ರಾಣಿಪಕ್ಷಿಗಳು ಗುಟುಕು ನೀರಿಗೂ ಪರದಾಡುವಂತಾಗಿದೆ. ಹಣ್ಣಿನ ಮರಗಿಡಗಳಿಲ್ಲದೆ ಆಹಾರ ಕ್ಷಾಮ ಎದುರಿಸುವಂತಾಗಿದೆ. ಮನೆಯ ತಾರಸಿಯ ಮೇಲೆ ಒಂದಿಷ್ಟು ನೀರು, ಧವಸ ದಾನ್ಯ ಹಾಕಿ ಎಂದು ವಿನಂತಿಸಿದರು.

ಮಕ್ಕಳಿಗೆ ಹುಟ್ಟಿದ ಹಬ್ಬದಲ್ಲಿ ಹಾಡುಬಹುದಾದ ವಿವಿಧ ಹಾಡು, ಪರಿಸರ ಗೀತೆಗಳನ್ನು ಹೇಳಿಕೊಟ್ಟು ಖುಷಿಪಡಿಸಿದರು.

ಪರಿಸರಪ್ರೇಮಿ ವೆಂಕಟೇಶ್, ಅಭಿಷೇಕ್, ಪುಟ್ಟೇಗೌಡ, ಮಹೇಶ್, ಶಿಲ್ಪಾ ಮತ್ತಿತರರಿದ್ದರು.