ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಹವಾಮಾನ ವೈಪರಿತ್ಯ ತಪ್ಪಿಸಿ ಪರಿಸರ ರಕ್ಷಿಸುವ ಉದ್ದೇಶದಿಂದ ‘ಏಕ್ ಪೇಡ್ ಮಾ ಕೆ ನಾಮ್’ ಅಡಿ ಏಕಕಾಲದಲ್ಲಿ ೧೦೦ ಗಿಡ ನೆಡುವ ಅಭಿಯಾನ ಹಮ್ಮಿಕೊಂಡಿದ್ದು, ಮಾರ್ಚ್ ೨೦೨೫ರೊಳಗೆ ದೇಶದಲ್ಲಿ ೧೪೦ ಕೋಟಿ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಎಸ್.ಹೊಸಮನಿ ತಿಳಿಸಿದರು.ತಾಲ್ಲೂಕಿನ ಸೀತಿ ಬಿಜಿಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಶಾಲೆ ಹಾಗೂ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ‘ಏಕ್ ಪೇಡ್ ಮಾ ಕೆ ನಾಮ್’ ಏಕಕಾಲದಲ್ಲಿ ೧೦೦ ಗಿಡ ನೆಡುವ ಅಭಿಯಾನದಡಿ ಗಿಡಗಳನ್ನು ನೆಟ್ಟು ಮಕ್ಕಳಿಗೆ ಕಾನೂನುಗಳ ಅರಿವು ಮೂಡಿಸಿ ಅವರು ಮಾತನಾಡಿದರು.ಆಮ್ಲಜನಕಕ್ಕಾಗಿ ಗಿಡ ನೆಡಿ
ಸೆಪ್ಟೆಂಬರ್ ೨೦೨೪ರೊಳಗೆ ೮೦ ಕೋಟಿ ಸಸಿ ನೆಡುವ ಗುರಿ ಇದೆ ಎಂದ ಅವರು, ಮನುಷ್ಯ,ಪ್ರಾಣಿಗಳು ಜೀವಿಸಲು ಆಮ್ಲಜನಕ ಬೇಕೇಬೇಕು, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ಹಾಗೂ ಆಮ್ಲಜನಕ ಉಳಿಸಿಕೊಳ್ಳಲು ಗಿಡಗಳನ್ನು ಬೆಳೆಸುವುದು ಅತ್ಯಗತ್ಯ. ವಿದ್ಯಾರ್ಥಿಗಳು ಹುಟ್ಟುಹಬ್ಬದಂದು ಒಂದೊಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು. ಪರಿಸರ ಹಾಗೂ ಪ್ರಾಣಿ, ಗಿಡಮರಗಳಿಗೆ, ಅಂತರ್ಜಲಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಿ ಪ್ಲಾಸ್ಟಿಕ್ ಮುಕ್ತ ಕೋಲಾರ ಜಿಲ್ಲೆಯಾಗಿಸಲು ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರು.ಯುವಕರು,ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಆತಂಕಕಾರಿಯಾಗಿದ್ದು, ಇದರಿಂದ ಮಾದಕ ವ್ಯಸನಿಗಳಾದರೆ ನಿಮ್ಮ ಆರೋಗ್ಯ ಮಾತ್ರವಲ್ಲ ನಿಮ್ಮ ಬದುಕೇ ನಾಶವಾಗುತ್ತದೆ. ಭ್ರೂಣಹತ್ಯೆ ತಡೆ ಕಾಯಿದೆ, ಹೆಣ್ಣುಭ್ರೂಣ ಪತ್ತೆ ಕಾಯಿದೆ,ಕೋಟ್ಪಾ, ಎನ್‌ಡಿಪಿಎಸ್ ಕಾಯಿದೆಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿ ಕಾನೂನುಗಳ ಅರಿವು ಪಡೆಯಿರಿ ಉತ್ತಮ ಜೀವನ ನಡೆಸಿ ಎಂದು ಕರೆ ನೀಡಿದರು.
ಬಾಲ್ಯವಿವಾಹ ತಡೆಗಟ್ಟಿಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ತಡೆ ಕಾಯಿದೆಗಳ ಕುರಿತು ಉಪನ್ಯಾಸ ನೀಡಿ, ಸಮಾಜಕ್ಕೆ ಕಳಂಕವಾಗಿರುವ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ದತಿ ವಿರುದ್ದ ಸಂಘಟಿತ ಹೋರಾಟ ಅಗತ್ಯ, ಇದರ ತಡೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.ಹಿರಿಯ ವಕೀಲ ಸಿ.ಬಿ.ಜಯರಾಂ, ಮೋಟಾರ್ ವಾಹನ ಕಾಯಿದೆ ಕುರಿತು ಉಪನ್ಯಾಸ ನೀಡಿ, ೧೮ರ ವಯಸ್ಸು ದಾಟುವವರೆಗೂ ವಾಹನಚಲಾಯಿಸಬಾರದು, ಅದಕ್ಕೆ ಪರವಾನಗಿ ಅಗತ್ಯ ಎಂದ ಅವರು, ಚಿಕ್ಕ ವಯಸ್ಸಿನಲ್ಲಿ ವಾಹನ ಚಲಾಯಿಸಿ ಅಪಘಾತ ನಡೆಸಿದರೆ ಪೋಷಕರಿಗೆ ಶಿಕ್ಷೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಸಸಿ ರಕ್ಷಣೆ ಮಕ್ಕಳ ಹೊಣೆಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಚಂದ್ರಕುಮಾರ್ ಮಾತನಾಡಿ, ಶಾಲೆಯ ಆವರಣವನ್ನು ಹಸಿರಾಗಿಸುವ ಈ ಪ್ರಯತ್ನ ಯಶಸ್ವಿಯಾಗಿದೆ, ಈ ಗಿಡಗಳನ್ನು ಪೋಷಿಸುವ ಹೊಣೆಯೂ ಮಕ್ಕಳದ್ದಾಗಿದೆ. ಒಬ್ಬೊಬ್ಬರು ಒಂದೊಂದು ಗಿಡದ ಜವಾಬ್ದಾರಿ ವಹಿಸಿಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಮದ್ದೇರಿ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷಯ್‌ಕುಮಾರ್, ಪಿಎಸ್‌ಐ ರವಣಮ್ಮ ಮತ್ತಿತರರು ಉಪಸ್ಥಿತರಿದ್ದು, ಶಾಲೆಯ ಆವರಣದಲ್ಲಿ ೧೦೦ ಗಿಡ ನೆಡಲಾಯಿತು ಮತ್ತು ಕಾರ್ಯಕ್ರಮದಲ್ಲಿ ಶಿಕ್ಷಕರು,ಮಕ್ಕಳು ಸೇರಿದಂತೆ ೪೫೦ ಮಂದಿ ಪಾಲ್ಗೊಂಡಿದ್ದರು.