ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಲಯನ್ಸ್ ಸಂಸ್ಥೆಗಳು ಪರಿಸರ ಕಾಳಜಿಯೊಂದಿಗೆ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು, ಮರಗಳನ್ನು ಉಳಿಸಿ ಪರಿಸರ ಸಂರಕ್ಷಣೆ ಮಾಡುವ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಆಪ್ ಫ್ರೆಂಚ್ ರಾಕ್ಸ್ ಸಂಸ್ಥೆ ನೂತನ ಅಧ್ಯಕ್ಷ ಡಾ.ಕೆ.ಆರ್.ಸ್ವಾಮೀಗೌಡರ ಪದಗ್ರಹಣ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪರಿಸರ ವಿಕೋಪದಿಂದ ಅತಿವೃಷ್ಟಿಗಳು ಸಂಭವಿಸುತ್ತಿವೆ. ಹಾಗಾಗಿ ಹೆಚ್ಚಿನ ಮರಗಳನ್ನು ಬೆಳೆಸಿ ಅರಣ್ಯ ಸಂರಕ್ಷಣೆ ಮಾಡಬೇಕು. ಸಮಾಜ ಸೇವೆ ಮಾಡುವ ಲಯನ್ಸ್ ಸಂಸ್ಥೆಗಳು ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗಿದೆ ಎಂದರು.
ಡಾ.ಕೆ.ಆರ್.ಸ್ವಾಮೀಗೌಡರು ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಹಲವು ಸೇವಾ ಕಾರ್ಯಗಳ ಮೂಲಕ ಸಂಸ್ಥೆಯನ್ನು ಬೆಳೆಸಬೇಕು ಎಂದರು.ಲಯನ್ ಕೆ.ದೇವೇಗೌಡ ಮಾತನಾಡಿ, ಲಯನ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಸದಸ್ಯರು ಶಿಸ್ತು ಬೆಳೆಸಿಕೊಳ್ಳಬೇಕು. ಲಯನ್ಸ್ ಕ್ಲಬ್ ಆಪ್ ಫ್ರೆಂಚ್‌ರಾಕ್ಸ್ ಸಂಸ್ಥೆಯೂ ಆರಂಭವಾಗಿ ಇಲ್ಲಿಯವರೆಗೂ ಸಂಸ್ಥೆಗೆ ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದೇವೆ ಹೊರತು ದೊಡ್ಡಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಸಂಸ್ಥೆಯಿಂದ ಡಯಾಲಿಸಿಸ್ ಕೇಂದ್ರ ಆರಂಭಿಸಬೇಕೆಂದು ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದ್ದೇವೆ. ಕೇಂದ್ರ ಆರಂಭಿಸಲು ರಾಷ್ಟ್ರೀಯ ಲಯನ್ಸ್ ಸಂಸ್ಥೆಯೂ 85 ಲಕ್ಷ ರು. ಸಹಾಯಧನ ನೀಡಲಿದೆ. ಇದಕ್ಕೆ ಜಾಗ ನೀಡುವಂತೆ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಇಬ್ಬರನ್ನು ಒತ್ತಾಯಿಸಲಾಗುತ್ತಿದೆ. ಸ್ಥಳ ಸಿಕ್ಕರೆ ಸಂಸ್ಥೆಯಿಂದ ಉಚಿತ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗುವುದು ಎಂದರು.ಅಧ್ಯಕ್ಷ ಕೆ.ಆರ್.ಸ್ವಾಮೀಗೌಡ ಮಾತನಾಡಿ, ನಾನು ಹಲವು ವರ್ಷಗಳಿಂದ ಸಂಸ್ಥೆ ಸದಸ್ಯರಾಗಿ ಸೇವೆ ಸಲ್ಲಿಸಿ ಈಗ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಜತೆಗೂಡಿ ಸಾಧ್ಯವಾದಷ್ಟು ಸಮಾಜಸೇವಾ ಕಾರ್‍ಯ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಲ.ಟಿ.ನಾರಾಯಣಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು. ಲ.ಎನ್.ಜಯರಾಮು ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋದಿಸಿದರು. ಕಾರ್ಯದರ್ಶಿಯಾಗಿ ಬಿ.ಪುಟ್ಟಬಸವೇಗೌಡ, ಖಜಾಂಚಿಯಾಗಿ ಎಸ್.ಆನಂದ್, ಉಪಾಧ್ಯಕ್ಷರಾಗಿ ಎಚ್.ಸಿ.ಮಹೇಶ್, ಎಸ್.ಆನಂದ್ ಅಧಿಕಾರ ಸ್ವೀಕರಿಸಿದರು.ಮಾಜಿ ಅಧ್ಯಕ್ಷ ಟಿ.ಪಿ.ಕರೀಗೌಡ, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಪ್ರೊ.ಎಂ.ಪುಷ್ಪಾವತಿ, ಅರವಿಂದ್ ರಾಘವನ್, ಎಚ್.ಶ್ರೀನಿವಾಸ್‌ಗೌಡ, ಡಾ.ಮಣಿಕರ್ಣಿಕ, ಟಿ.ಪಿ.ರೇವಣ್ಣ, ಡಾ.ಸಿ.ಎ.ಅರವಿಂದ್, ಜೆ.ಚಂದನ್, ಪಿ.ಎಲ್.ಆದರ್ಶ, ಇ.ಎಸ್.ನಾಗರಾಜು, ಹಾಸ್ಯನಟರಾದ ತುಕಾಲಿಸಂತೋಷ್, ಪತ್ನಿ ಮಾನಸ ಸಂತೋಷ್ ಇದ್ದರು.