ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮರಗಳನ್ನು ಬೆಳೆಸಿದರೆ ಮಾತ್ರ ಮನುಕುಲ ಉಳಿಯುತ್ತದೆ. ಪ್ರತಿಯೊಂದು ಜೀವಿಗೆ ಉಸಿರಾಡಲು ಶುದ್ಧ ಗಾಳಿ ಬಹಳ ಮುಖ್ಯವಾಗಿದೆ. ಹಸಿರೇ ಉಸಿರು ಎಂದು ಬಬಲೇಶ್ವರ ಉಪ ವಲಯ ಅರಣ್ಯಾಧಿಕಾರಿ ಅಪ್ಪಾಸಾಹೇಬ ಬಗಲಿ ಹೇಳಿದರು.ಕನ್ನಡಪ್ರಭ ದಿನಪತ್ರಿಕೆ ವತಿಯಿಂದ ವೇದ ಅಕಾಡೆಮಿ, ಕರ್ನಾಟಕ ಚಿತ್ರಕಲಾ ಪರಿಷತ್, ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಅನಾರೋಗ್ಯಕ್ಕೀಡಾದವರಿಗೆ ಬಿಸಿಲೆರಿ ನೀರು ಕುಡಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲರೂ ಬಿಲಿಸರಿ ನೀರು ಕುಡಿಯುತ್ತಿದ್ದಾರೆ. ಮುಂದೊಂದು ದಿನ ಬಿಸಿಲರಿ ಬದಲು ಅನಾರೋಗ್ಯಕ್ಕೀಡಾದವರಿಗೆ ಲವಣ ಹಾಗೂ ಖಣಿಜಾಂಶಗಳುಳ್ಳ ನೀರು ಕುಡಿಬೇಕಾಗುತ್ತದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಹೊಂದಬೇಕು. ಜಿಲ್ಲೆಯಲ್ಲಿ ಅರಣ್ಯದ ಪ್ರಮಾಣ ಕಡಿಮೆಯಿದ್ದು, ಸಚಿವ ಎಂ.ಬಿ.ಪಾಟೀಲರ ವೃಕ್ಷ ಅಭಿಯಾನದಿಂದ ಸ್ವಲ್ಪ ಮಟ್ಟಿಗೆ ಹಸಿರಾಗಿದೆ. ಕನ್ನಡಪ್ರಭ ದಿನಪತ್ರಿಕೆ ವತಿಯಿಂದ ಅರಣ್ಯ ಬೆಳೆಸುವ ಹಾಗೂ ಕರ್ನಾಟಕ ವನ್ಯ ಜೀವಿಗಳ ಕುರಿತು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಅತ್ಯಂತ ಸೂಕ್ತವಾಗಿದೆ ಎಂದರು.
ವೇದ ಅಕಾಡೆಮಿ ಪ್ರಾಂಶುಪಾಲ ಎಂ.ಜಿ.ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬರೂ ಮರಗಳನ್ನು ಕಡಿದು ಕಾಂಕ್ರಿಟ್ ನಾಡು ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಮುಂದಿನ ಪೀಳಿಗೆಗೆ ನೋಡಲು ಮರಗಳು ಸಿಗುವುದು ಕಷ್ಟವಾಗಲಿದೆ. ಈಗಿನಿಂದಲೇ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಿಸಬೇಕು. ಕನ್ನಡಪ್ರಭ ಮಾಡುತ್ತಿರುವ ಪರಿಸರ ಜಾಗೃತಿ ಮೂಡಿಸುವ ಮಹತ್ವದ ಕಾರ್ಯ ಶ್ಲಾಘನೀಯವಾಗಿದೆ. ನಮ್ಮ ಶಾಲೆಯ 151 ಮಕ್ಕಳು ಕೋಟಿ ವೃಕ್ಷ ಅಭಿಯಾನದಲ್ಲಿ ಭಾಗವಹಿಸಿ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಹಾಗೂ ಕಾಡು ಬೆಳೆಸುವಿಕೆಗೆ ವೇದ ಸಂಸ್ಥೆಯು ಕೊಡುಗೆ ನೀಡುತ್ತಿದೆ ಎಂದರು. ಮೋಡಗಳು ಚಲಿಸುವಾಗ ವಿಜಯಪುರದಲ್ಲಿ ನಾವು ಮಳೆಸುರಿಸುವುದು ಬೇಡ, ಏಕೆಂದರೆ ಇಲ್ಲಿಯ ಜನರಿಗೆ ಮರಗಳ ಅಗತ್ಯತೆಗಳ ಬಗ್ಗೆ ಅರಿವಿಲ್ಲ ಎಂದು ಮಾತನಾಡಿಕೊಂಡವು. ಈಗ ಎಲ್ಲೆಡೆ ಅಭಿಯಾನ ನಡೆಯುತ್ತಿರುವುದರಿಂದ ಈಗ ಮೋಡಗಳು ಜಾಸ್ತಿ ಮಳೆಸುರಿಸುತ್ತಿವೆ ಎಂದು ಮೋಡಗಳ ಕುರಿತು ಕಥೆಯೊಂದರ ಮೂಲಕ ಮಕ್ಕಳಿಗೆ ಅರಿವು ಮೂಡಿಸಿದರು.ವೇದ ಅಕಾಡೆಮಿ ಉಪಾಧ್ಯಕ್ಷ ದಯಾನಂದ ಕೆಲೂರ ಮಾತನಾಡಿ, ಪ್ರತಿಯೊಬ್ಬರೂ ಈಗಿನಿಂದಲೇ ಎಚ್ಚೆತ್ತುಕೊಂಡು ಪರಿಸರ ಉಳಿಸುವ ಹಾಗೂ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಉಸಿರಾಡಲು ಗಾಳಿಗೆ ಹಣ ಕೊಡುವ ಸ್ಥಿತಿ ಎದುರಾಗಲಿದೆ. ಅದಕ್ಕೂ ಮೀರಿ ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡು ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆಯಿದ್ದ ಚಿತ್ರಣ ಈಗ ಇಲ್ಲ, ಇತ್ತೀಚೆಗೆ ಎಲ್ಲರಿಗೂ ಪರಿಸರದ ಕುರಿತು ಅರಿವು ಮೂಡಿದ್ದು, ಜನರು ತಮ್ಮ ಜಮೀನುಗಳಲ್ಲಿ, ಮನೆಗಳ ಆವರಣದಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ. ಇದರಿಂದ ಅರಣ್ಯದ ಪ್ರಮಾಣ ಹೆಚ್ಚಾಗಿ ಬೆಳೆಯುತ್ತಿದೆ. ಅರಣ್ಯ ಹಾಗೂ ವನ್ಯ ಜೀವಿಗಳ ಕುರಿತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿರುವ ಕನ್ನಡಪ್ರಭ ತಂಡದ ಕಾರ್ಯ ಮೆಚ್ಚುವಂತಹದ್ದು ಎಂದರು.
ಕನ್ನಡಪ್ರಭ ಹಿರಿಯ ವರದಿಗಾರ ಶಶಿಕಾಂತ ಮೆಂಡೆಗಾರ ಮಾತನಾಡಿ, ಸದಾ ಹೊಸತನವನ್ನು ಪರಿಚಯಿಸುವ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸಂಸ್ಥೆಗಳು ಚಿತ್ರಕಲೆ ಸ್ಪರ್ಧೆ ಮೂಲಕ ಅರಣ್ಯ ಬೆಳೆಸಿ ನಾಡು ಉಳಿಸಿ ಎಂಬ ಸಂದೇಶ ನೀಡಿ ಸಾಮಾಜಿಕ ಕಾರ್ಯ ಮಾಡುತ್ತಿದೆ. ತಾಲೂಕು ಮಟ್ಟದ ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.ಈ ವೇಳೆ ಕನ್ನಡಪ್ರಭದ ಆನಂದ ಮೋಕಾಶಿ, ಸುರೇಶ ತೇರದಾಳ, ಬಹುಮಾನ ವಿಜೇತ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ ಗುರು ಚಲವಾದಿ, ವೇದ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.ವಿಜೇತರಿಗೆ ಬಹುಮಾನ ವಿತರಣೆ
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ 9 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.8ನೇ ತರಗತಿಯಲ್ಲಿ ನಗರದ ಎಸ್.ಎಸ್.ಬಿ ಪ್ರೌಢಶಾಲೆಯ ಸುಪ್ರೀಯಾ ರಾಠೋಡ ಪ್ರಥಮ ಸ್ಥಾನ, ಎಕ್ಸಲೆಂಟ್ ಇಂಗ್ಲೀಷ್ ಮೀಡಿಯಂ ಶಾಲೆಯ ಮಾನಸಾ ಮಸಳಿ ದ್ವಿತೀಯ ಸ್ಥಾನ ಹಾಗೂ ಎಸ್.ಕೆ.ವಿ.ವಿ.ಎಸ್ ಶಾಲೆಯ ತನುಶ್ರೀಬಿ.ಕೆ ತೃತೀಯ ಸ್ಥಾನ ಪಡೆದುಕೊಂಡರು. 9ನೇ ತರಗತಿಯಲ್ಲಿ ನಗರದ ಶಾಂತಿನಿಕೇತನ ಸಿ.ಬಿಎಸ್.ಸಿ ಶಾಲೆಯ ಶ್ರೀಪ್ರಿಯಾ ಕುಲಕರ್ಣಿ ಪ್ರಥಮ ಸ್ಥಾನ, ವೇದ ಅಕಾಡೆಮಿಯ ವೇದಾ ಗವಳಿ ದ್ವಿತೀಯ ಸ್ಥಾನ ಹಾಗೂ ರವೀಂದ್ರನಾಥ ಟ್ಯಾಗೂರ ಶಾಲೆಯ ಅದ್ವಿತಾ ಸೂರ್ಯವಂಶಿ ತೃತೀಯ ಸ್ಥಾನ ಪಡೆದುಕೊಂಡರು. 10ನೇ ತರಗತಿಯಲ್ಲಿ ತಿಕೋಟಾದ ಎ.ಬಿ.ಜತ್ತಿ ಪ್ರೌಢಶಾಲೆಯ ವೈಷ್ಣವಿ ಮೆಟಗುಡ್ಡ ಪ್ರಥಮ ಸ್ಥಾನ, ನಗರದ ಬಿ.ಎಂ.ಪಾಟೀಲ ಪಬ್ಲಿಕ್ ಸ್ಕೂಲ್ ನವೈಷ್ಣವಿ ಪಾಟೀಲ ದ್ವಿತೀಯ ಸ್ಥಾನ, ವಿಕಾಸ ಶಾಲೆಯ ಸಮೃದ್ಧಿ ನಾಗಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡರು.
;Resize=(128,128))
;Resize=(128,128))