ಗದ್ದೆಯಲ್ಲಿ ನೀರು ನಿಲ್ಲಿಸದ ಕಾರಣ ಕಂದು ಜಿಗಿ ಹುಳು, ಬೇರು ಕೊಳೆ ಹಾಗೂ ಕಾಂಡ ಕೊರಕದಂತಹ ಕೀಟ-ರೋಗಗಳ ಪ್ರಮಾಣವೂ ಕಡಿಮೆ

ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಾಂಪ್ರದಾಯಿಕ ನಾಟಿ ಪದ್ಧತಿ ಬಿಟ್ಪು ಪರ್ಯಾಯವಾಗಿ ಡಿಎಸ್ಆರ್ (ಡೈರೆಕ್ಟ್ ಸೀಡೆಡ್ ರೈಸ್) ಪದ್ಧತಿ ಅಳವಡಿಸಿಕೊಂಡರೆ ಮಿತ ನೀರಿನ ಬಳಕೆಯ ಜತೆಗೆ ಕೃಷಿ ವೆಚ್ಚ ಕಡಿಮೆ ಮಾಡಬಹುದು ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ಪ್ರಾಧ್ಯಾಪಕ ಬಾಬುರಾವ್ ದೀಕ್ಷಿತ್ ಸಲಹೆ ನೀಡಿದರು.

ತಾಲೂಕಿನ ಯರಡೋಣ ಗ್ರಾಪಂ ವ್ಯಾಪ್ತಿಯ ಕಿಂದಿಕ್ಯಾಂಪ್‌ನಲ್ಲಿ ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ನಡೆದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಸಲಹೆ ನೀಡಿ ಮಾತನಾಡಿದರು. ಸಾಂಪ್ರದಾಯಿಕ ನಾಟಿ ಪದ್ಧತಿಯಲ್ಲಿ ಎಕರೆಗೆ ₹40 ಸಾವಿರದಿಂದ ₹43 ಸಾವಿರದವರೆಗೆ ವೆಚ್ಚವಾಗುತ್ತದೆ. ಆದರೆ ಡಿಎಸ್ಆರ್ ಪದ್ಧತಿಯಲ್ಲಿ ನಾಟಿ ವೆಚ್ಚ ಕಡಿಮೆಯಾಗುವುದರ ಜತೆಗೆ ನಿರಂತರವಾಗಿ ಗದ್ದೆಯಲ್ಲಿ ನೀರು ನಿಲ್ಲಿಸುವ ಅಗತ್ಯವಿಲ್ಲ. ಮಣ್ಣು ಹಸಿಯಾಗಿರುವಂತೆಯೇ ನಿರ್ವಹಿಸಿದರೆ ಉತ್ತಮ ಫಸಲು ಪಡೆಯಬಹುದು. ಇದರಿಂದ ನೀರಿನ ಉಳಿತಾಯವಾಗಿ ನಾಲೆಗಳ ಕೊನೆಯ ಭಾಗದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

ಗದ್ದೆಯಲ್ಲಿ ನೀರು ನಿಲ್ಲಿಸದ ಕಾರಣ ಕಂದು ಜಿಗಿ ಹುಳು, ಬೇರು ಕೊಳೆ ಹಾಗೂ ಕಾಂಡ ಕೊರಕದಂತಹ ಕೀಟ-ರೋಗಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಆರ್‌ಎನ್‌ಆರ್‌, ಸೋನಾ ಮಸೂರಿ ಸೇರಿದಂತೆ ವಿವಿಧ ಭತ್ತದ ತಳಿ ಈ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆಯಬಹುದು ಎಂದು ವಿವರಿಸಿದರು.

ವಾಲ್ಮಿ ಸಹಾಯಕ ಪ್ರಾಧ್ಯಾಪಕ ಯಲ್ಲಪ್ಪ ಪೂಜಾರಿ ತುಂಗಭದ್ರ ಎಡದಂಡೆ ನಾಲೆ ನೀರಾವರಿ ಪ್ರದೇಶದಲ್ಲಿ ಎಲ್ಲರಿಗೂ ನೀರು ತಲುಪಲು ವಾರಾಬಂದಿ ಪದ್ಧತಿ ಜಾರಿ ಕುರಿತು ಹಾಗೂ ನೀರಾವರಿ ಕಾಯ್ದೆ ಕುರಿತು ಮಾಹಿತಿ ನೀಡಿದರೆ, ಫಕ್ಕೀರೇಶ ಅಗಡಿ ನೀರು ಬಳಕೆದಾರರ ಸಂಘಗಳ ಆಡಳಿತ ನಿರ್ವಹಣೆ ಮತ್ತು ಇಂದುಧರ ಹಿರೇಮಠ ಮಣ್ಣಿನ ಆರೋಗ್ಯ ಬೆಳೆ ನಿರ್ವಹಣೆ ದ್ವಿದಳ ಧಾನ್ಯ ಬೆಳೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕೆಎನ್‌ಎನ್‌ಎಲ್ ಅಧಿಕಾರಿಗಳು, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.