ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಾರಣಿಗರ ಸ್ವರ್ಗವೇ ಎಂದು ಕರೆಯುವ ಮುಳ್ಳಯ್ಯನಗಿರಿ, ಸೀತಾಳಯ್ಯಗಿರಿ ಹಾಗೂ ಶ್ರೀ ಗುರು ದತ್ತಪೀಠ ಭಾಗದಲ್ಲಿ ಒಂದು ವಾರಕ್ಕೆ ಬರೋಬ್ಬರಿ 8,050 ಕೆ.ಜಿಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ.
ಚಿಕ್ಕಮಗಳೂರಿನ ಪ್ರವಾಸಿತಾಣಗಳು ಅದರಲ್ಲೂ ರಾಜ್ಯದ ಅತಿ ಎತ್ತರದಲ್ಲಿರುವ (6,317 ಅಡಿ) ಶಿಖರವಾಗಿರುವ ಮುಳ್ಳಯ್ಯನಗಿರಿ, ಸೀತಾಳಯ್ಯಗಿರಿಗೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸ ಸಂಗತಿಯಾಗಿದೆ. ಆದರೆ, ಅದರೊಂದಿಗೆ ಗಿರಿ ಭಾಗದಲ್ಲಿ ಉಂಟಾಗುತ್ತಿರುವ ಮಾಲಿನ್ಯ, ಕಸದ ಸಮಸ್ಯೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.ಈ ಸಮಸ್ಯೆ ಪರಿಹಾರಕ್ಕೆ ಇದೀಗ ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಗಿರಿ ಭಾಗದಲ್ಲಿ ಒಂದು ವಾರಕ್ಕೆ ಬರೋಬ್ಬರಿ 8 ಸಾವಿರ ಕೆ.ಜಿಗೂ ಅಧಿಕ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇದು ಕೇವಲ ವಾಹನ ಸಂಚಾರಿಸುವ ಮಾರ್ಗದಲ್ಲಿ ಮಾತ್ರ ಈ ಲೆಕ್ಕಚಾರ ಹಾಕಲಾಗಿದೆ. ಉಳಿದಂತೆ ಚಾರಣಕ್ಕೆ ತೆರಳುವ ಮಾರ್ಗಗಳು ಸೇರಿದಂತೆ ಇದು ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ.
ವಾರದ ದಿನಗಳಲ್ಲಿ ಸರಾಸರಿ ದಿನಕ್ಕೆ 990 ಕೆ.ಜಿ ಹಾಗೂ ವಾರಾಂತ್ಯದ ದಿನಗಳಲ್ಲಿ 1,550 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಹಬ್ಬ, ಜಾತ್ರೆ, ವಿಶೇಷ ದಿನಗಳಲ್ಲಿ ಈ ತ್ಯಾಜ್ಯದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
50 ಕಡೆ ಬ್ಲಾಕ್ ಸ್ಪಾಟ್ ಪತ್ತೆ:
ಗಿರಿ ಭಾಗದ ರಸ್ತೆಯ ಅಕ್ಕ-ಪಕ್ಕ, ವ್ಯಾಪಾರಿ ಸ್ಥಳ, ವಾಹನ ನಿಲುಗಡೆ ಸ್ಥಳ ಸೇರಿದಂತೆ ಸುಮಾರು 50 ಕಡೆ ಕಸ ಎಸೆಯುವ ಸ್ಥಳಗಳು ಇರುವುದನ್ನು ಗುರುತಿಸಲಾಗಿದೆ. ತಾತ್ಕಾಲಿಕವಾಗಿ ಈ ಸ್ಥಳಗಳನ್ನು ಸ್ವಚ್ಛಗೊಳಿಸಿ ಕಸ ಹಾಕದಂತೆ ಕ್ರಮ ವಹಿಸಲಾಗುತ್ತಿದೆ. ಪ್ರವಾಸಿಗರು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕದಂತೆ ಶಾಶ್ವತ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.ಶಾಶ್ವತ ಪರಿಹಾರಕ್ಕೆ ಶಾಶ್ವತ ಟಾಸ್ಕ್ ಫೋರ್ಸ್:
ಗಿರಿ ಭಾಗದಲ್ಲಿ ಸ್ವಚ್ಛತೆಯೊಂದಿಗೆ, ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯಲ ಜಿಲ್ಲಾಡಳಿತವು ‘ಗಿರಿ ಸ್ವಚ್ಛತಾ ಟಾಸ್ಕ್ ಪೋರ್ಸ್’ ರಚನೆಗೆ ಮುಂದಾಗಿದೆ. ಮುಖ್ಯವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ಗಿರಿ ವ್ಯಾಪಾರಿಯ ಆರು ಗ್ರಾಪಂ ಅಧ್ಯಕ್ಷರು, ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ ಮಾಲೀಕರು, ಸ್ವಯಂ ಸೇವಾ ಸಂಸ್ಥೆ, ವಾಹನ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಈ ಟಾಸ್ಕ್ ಪೋರ್ಸ್ ರಚನೆಗೆ ಸಿದ್ದತೆ ಮಾಡಲಾಗಿದೆ.ಏನು ಮಾಡುತ್ತೆ ಈ ಟಾಸ್ಕ್ ಫೋರ್ಸ್?:
ಗಿರಿಯ ಭಾಗದ ಸ್ವಚ್ಛತೆ ಕೈಗೊಳ್ಳುವ ಕ್ರಮ ಹಾಗೂ ಗಿರಿ ಭಾಗದಲ್ಲಿ ಶಾಶ್ವತ ಕಸದ ಸಮಸ್ಯೆ ನಿವಾರಣೆಗೆ ಚರ್ಚೆ, ಎಲ್ಲೆಲ್ಲಿ ಶೌಚಾಲಯ ವ್ಯವಸ್ಥೆ, ಸಿಸಿಟಿವಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕಸದ ಬುಟ್ಟಿ ಎಲ್ಲಿ ಅಳವಡಿಸಬೇಕು. ಹೇಗೆ ಕಸ ವಿಲೇವಾರಿ ನಿರ್ವಹಣೆ ಮಾಡಬೇಕು. ಅನಧಿಕೃತ ವ್ಯಾಪಾರಿಗಳ ತಡೆ ಹೇಗೆ, ಸೇರಿದಂತೆ ಮೊದಲಾದವುಗಳ ಕುರಿತು ಟಾಸ್ಕ್ ಪೋರ್ಸ್ ಸಭೆ ನಡೆಸಿ ಚರ್ಚೆ ಮಾಡಲಿದೆ.ದಂಡ, ಜಾಗೃತಿಗೆ ಚಿಂತನೆ:
ಗಿರಿ ಭಾಗದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಎಷ್ಟು ದಂಡ ವಿಧಿಸಬೇಕು. ವಿಧಿಸಿದ ದಂಡವನ್ನು ಹೇಗೆ ಅವರಿಂದ ವಸೂಲಿ ಮಾಡಬೇಕು ಎಂಬುದರ ಕುರಿತು ಟಾಸ್ಕ್ ಪೋರ್ಸ್ ಚಿಂತನೆ ಮಾಡಲಿದೆ. ಜತೆಗೆ, ಕಸ ಹಾಕದಂತೆ ಹೇಗೆ ಜಾಗೃತಿ ಅಭಿಯಾನಗಳನ್ನು ಮಾಡಬೇಕು ಎಂಬ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.ಗಿರಿಯಲ್ಲಿ ಎಷ್ಟು ಹೋಟೆಲ್, ಹೋಂಸ್ಟೇ ಇವೆ ಗೊತ್ತಾ?
ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ ಭಾಗದಲ್ಲಿ 50 ಹೋಂ ಸ್ಟೇ, 16 ಹೋಟೆಲ್, 5 ರಸ್ಟೋರೆಂಟ್ ಹಾಗೂ 10 ಕೆಫೆಗಳು ಇವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ, ಅನಧಿಕೃತವಾಗಿರುವ ಹೋಂಸ್ಟೇ, ರೆಸ್ಟೋರೆಂಟ್, ಹೋಟೆಲ್‌ಗಳ ಬಗ್ಗೆ ಮಾಹಿತಿ ಇಲ್ಲ.ಇಂದು ಕಸದ ಸಮಸ್ಯೆಗೆ ಐಐಎಸ್ಸಿ ವಿಜ್ಞಾನಿಯೊಂದಿಗೆ ಚರ್ಚೆ
ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ಶ್ರೀ ಗುರು ದತ್ತ ಪೀಠದ ಕಸದ ಸಮಸ್ಯೆ ಕುರಿತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಚಾಣಕ್ಯ ಅವರೊಂದಿಗೆ ಮಾ.11 ಹಾಗೂ 12 ರಂದು ಸಭೆ ಹಾಗೂ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.