ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ಪ್ಲಾಸ್ಟಿಕ್ ವಾತವಾರಣವನ್ನು ಮಾತ್ರವಲ್ಲದೇ ಮನುಷ್ಯನನ್ನೂ ಕೊಲ್ಲುತ್ತಿದ್ದು, ಸಾರ್ವಜನಿಕರು ಜಾಗೃತರಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕನಕಗಿರಿ-ಕಾರಟಗಿ ತಾಲೂಕು ಯೋಜನಾಧಿಕಾರಿ ನಿಂಗಪ್ಪ ಅಗಸರ ಹೇಳಿದರು.ಪಟ್ಟಣದ ಶಾಸಕರ ಮಾ.ಹಿ.ಪ್ರಾ. ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿದರು.ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗಿಡ-ಮರಗಳು ಇಲ್ಲದಿರುವುದರಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗಿದ್ದು, ಇದು ಆತಂಕಕಾರಿ ಬೆಳವಣಿಯಾಗಿದೆ.
ಸ್ವಯಂ ಪ್ರೇರಿತವಾಗಿ ನಾವು ಪ್ಲಾಸ್ಟಿಕ್ ಬಳಕೆ ನಿಷೇಧಿಸಿದಾಗ ಮಾತ್ರ ಪರಿಸರ ಸಂರಕ್ಷಣೆಯಾಗಲಿದೆ. ಇನ್ನೂ ಒಂದೇ ದಿನಕ್ಕೆ ಪರಿಸರ ದಿನವಾಗದೆ ದಿನ ನಿತ್ಯವೂ ನೆಟ್ಟ ಸಸಿಗಳ ಪಾಲನೆಯಾದರೆ ಪಟ್ಟಣ ಸುಂದರವಾಗಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಸಂಗಮೇಶ ಹಿರೇಮಠ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ಸ್ವಚ್ಛ ಸಮಾಜ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಚೂಡಾಮಣಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘದ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು. ಪಪಂ ಸದಸ್ಯ ನಂದಿನಿ ರಾಮಾಂಜನೇಯರೆಡ್ಡಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹನುಮೇಶ ವಾಲೇಕಾರ, ಶಿಕ್ಷಕರಾದ ಮಲ್ಲಿಕಾರ್ಜುನ, ಧನಂಜಯ, ಹುಲಿಗೆಮ್ಮ ನಾಯಕ, ಪ್ರಮುಖರಾದ ಪಾಮಣ್ಣ ಅರಳಿಗನೂರು, ಅಯ್ಯನಗೌಡ ಅಳ್ಳಳ್ಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಎನ್. ಗಂಗಾಧರ, ವಲಯ ಮೇಲ್ಚಿಚಾರಕ ಚಂದ್ರಶೇಖರ ಇತರರು ಇದ್ದರು.