ಲೈಂಗಿಕ ಅಲ್ಪಸಂಖ್ಯಾತರಿಂದ ನಾಳೆ ತಲ್ಕಿ ನಾಟಕ ಪ್ರದರ್ಶನ

| Published : Jun 14 2024, 01:00 AM IST

ಸಾರಾಂಶ

ಸಮುದಾಯದಿಂದ ದೂಡಲ್ಪಟ್ಟ ತಮ್ಮದೇ ಕಥೆ-ವ್ಯಥೆಯನ್ನು ತಲ್ಕಿ ಎಂಬ ನಾಟಕ ಪ್ರದರ್ಶನದ ಮೂಲಕ ಜೂ.15 ರಂದು ಸ್ವತಃ ಲೈಂಗಿಕ ಅಲ್ಪಸಂಖ್ಯಾತ ಅನಾವರಣಗೊಳಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಂಗಳೂರಿನ ಪಯಣ ಸಂಸ್ಥೆ, ಫೀಪಲ್ಸ್ ಲಾಯರ್ಸ್‌ ಗೀಲ್ಡ್, ಶಿವಮೊಗ್ಗದ ರಕ್ಷ ಸಮುದಾಯ, ರಂಗಾಯಣ ನೇಟಿವ್ ಥೇಟರ್ ಸಹಯೋಗದಲ್ಲಿ ಜೂ.15 ರಂದು ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ತಲ್ಕಿ ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಯಣ ಸಂಸ್ಥೆಯ ಚಾಂದಿನಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೊಟ್ಟಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರೇ ಸೇರಿ ಅವರ ಸಮಸ್ಯೆಗಳನ್ನು ಅವರ ಬದುಕನ್ನು ಅವರ ಸುಖದುಃಖಗಳನ್ನು ಬಿಂಬಿಸುವ ನಾಟಕ ತಲ್ಕಿಯಾಗಿದೆ. ಇದೊಂದು ಹೊಸ ಪ್ರಯತ್ನವಾಗಿದೆ ಎಂದರು.

ಇದುವರೆಗೂ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಇತರೆಯವರೇ ನಾಟಕಗಳನ್ನು ಮಾಡುತ್ತಿದ್ದರು. ಆದರೆ, ನಾವು ಈಗ ಲೈಂಗಿಕ ಅಲ್ಪಸಂಖ್ಯಾತರೇ ಸೇರಿ ಕೊಂಡು ಈ ನಾಟಕ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಡೆ ಅಭಿನಯಿಸಬೇಕು ಎಂಬ ಇಚ್ಛೆ ನಮ್ಮದಾಗಿದೆ. ಜೂ.14 ರಂದು ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ 2.30ಕ್ಕೆ ಅಭಿನಯಿಸುತ್ತೇವೆ. ಹಾಗೆಯೇ 15ರಂದು ರಂಗಾಯಣದಲ್ಲಿ ಸಂಜೆ 6.30 ಕ್ಕೆ ಅಭಿನಯಿಸುತ್ತೇವೆ ಎಂದು ಹೇಳಿದರು.

ಈ ನಾಟಕವನ್ನು ಶ್ರೀಜಿತ್ ಸುಂದರಂ ನಿರ್ದೇಶಿಸಿದ್ದು, ಶಾಂತಮ್ಮ, ಲಕ್ಷ್ಮೀಯಮ್ಮ, ರೇವತಿ, ಭಾನಮ್ಮ, ಶೋಭನಾಕುಮಾರಿ, ಸರವಣ ಅಭಿನಯಿಸಲಿದ್ದಾರೆ ಎಂದರು.ಈ ಎಲ್ಲಾ ನಟಿಯರ ಜೀವನ ಚಿತ್ರದ ತುಣುಕುಗಳು ಇಲ್ಲಿವೆ. ಇವು ನೈಜ ಘಟನೆಯಾಗಿವೆ. ನಮ್ಮನೋವುಗಳನ್ನು ನಾವೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಇಂದು ಬಂದೊದಗಿದೆ ಎಂದರು.

ಸವಿತ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರ ನೋವು, ನಲಿವು, ಪ್ರೀತಿ, ಮದ, ಮೋಹ, ಮತ್ಸರ ಸಮುದಾಯದಿಂದ ದೂಡಲ್ಪಟ್ಟ ವ್ಯಥೆ ನಮ್ಮ ಕಥೆ ಇವೆಲ್ಲವೂ ನಾಟಕದ ಮೂಲಕ ಹೇಳುವ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು.

ಪ್ರಮುಖರಾದ ಮಹಮದ್ ಸೈಫುಲ್ಲಾ, ನಿರ್ದೇಶಕ ಶ್ರೀಜಿತ್ ಸುಂದರಂ, ನಟಿಯರಾದ ಎ.ರೇವತಿ, ಭಾನಮ್ಮ ಮತ್ತಿತರರಿದ್ದರು.