ಸಾರಾಂಶ
ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಹಲವು ಯೋಜನೆ ಜಾರಿಗೊಳಿಸಿದೆ. ಪಠ್ಯಕ್ಕೆ ಆದ್ಯತೆ ನೀಡಿದಷ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪಠ್ಯೇತರ ಚಟುವಟಿಕೆಗೂ ನೀಡಬೇಕಿದೆ. ಆದರೆ, ಕ್ಷೇತ್ರದ ಬಹುತೇಕ ಶಾಲೆಗಳಿಗೆ ಆಟದ ಮೈದಾನ ಮತ್ತು ದೈಹಿಕ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಆಟೋಟಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ.
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ೬೧ ಸರ್ಕಾರಿ ಪ್ರೌಢಶಾಲೆ, ೧೯೪ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಆ ಪೈಕಿ 9 ಪ್ರೌಢ ಮತ್ತು ೮೮ ಪ್ರಾಥಮಿಕ ಶಾಲೆಗಳಿಗೆ ಆಟದ ಮೈದಾನ ಇಲ್ಲ.ಖೋಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್ ಸೇರಿ ಇತರ ಕ್ರೀಡೆ ನಡೆಸಲು ಸಮರ್ಪಕ ಆಟದ ಮೈದಾನವಿಲ್ಲ. ಬೆರಳೆಣಿಕೆಯಷ್ಟು ಶಾಲೆಗಳಲ್ಲಿ ಗ್ರಾಪಂನಿಂದ ನರೇಗಾ ಯೋಜನೆಯಡಿ ಮೈದಾನ ನಿರ್ಮಿಸಿದ್ದು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಕೆಲ ಶಾಲೆಗಳಲ್ಲಿ ಮಕ್ಕಳು ಬೆಳಗಿನ ಜಾವ ಪ್ರಾರ್ಥನೆಗೆ ನಿಲ್ಲಲೂ ಸಹ ಜಾಗದ ಸಮಸ್ಯೆ ಇದೆ. ಸುಸಜ್ಜಿತ ಕಟ್ಟಡ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಮತ್ತು ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ವಹಿಸುವ ಕಾಳಜಿ ಆಟದ ಮೈದಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಏಕೆ ಆದ್ಯತೆ ನೀಡುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಹುದ್ದೆ ತುಂಬಿ:ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ೫೦ ಮಂಜೂರಾತಿ ಹುದ್ದೆಗಳ ಪೈಕಿ ೩೧ ದೈಹಿಕ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ೧೯ ಹುದ್ದೆ ಖಾಲಿ ಇವೆ. ಪ್ರೌಢಶಾಲೆಗಳ ೫೭ ಮಂಜೂರಾತಿ ಹುದ್ದೆಗಳ ಪೈಕಿ ೨೭ ಶಿಕ್ಷಕರಿದ್ದು ೩೦ಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇವೆ. ವಿದ್ಯಾರ್ಥಿಗಳ ದೈಹಿಕ-ಬೌದ್ಧಿಕ ವಿಕಸನ ಹಾಗೂ ಕ್ರೀಡಾ ತರಬೇತಿ ನೀಡಲು ತಾಲೂಕಿನಲ್ಲಿ ಶಾಲೆಗಳ ಸಂಖ್ಯೆಗೆ ಅನುಗುಣವಾಗಿ ಸಕಾಲಕ್ಕೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎನ್ನುವುದು ಕ್ರೀಡಾಪ್ರೇಮಿಗಳ ಒತ್ತಾಯವಾಗಿದೆ.ಮಕ್ಕಳಿಗೆ ಸಹ ಪಠ್ಯದ ಪ್ರಾಮುಖ್ಯತೆ ಎಷ್ಟಿದೆಯೋ ದೈಹಿಕ ಶಿಕ್ಷಣ ಚಟುವಟಿಕೆ ಅಷ್ಟೇ ಮುಖ್ಯವಾಗಿದೆ. ಬಹುತೇಕ ಶಾಲೆಗಳಿಗೆ ಆಟದ ಮೈದಾನ ಇಲ್ಲದಾಗಿದೆ. ಇದರಿಂದ ಮಕ್ಕಳು ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ. ಆಟದ ಮೈದಾನಗಳ ಅವಶ್ಯಕತೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಡಿಡಿಪಿಐಗೆ ಮನವಿ ಸಲ್ಲಿಸಿದ್ದಾರೆ.
ವೀರಭದ್ರಪ್ಪ ಅಂಗಡಿ, ದೈಹಿಕ ಶಿಕ್ಷಣ ಪರಿವೀಕ್ಷಕ, ಯಲಬುರ್ಗಾಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಜಾಗ ಲಭ್ಯವಿರುವ ಕಡೆ ಗ್ರಾಪಂನಿಂದ ನರೇಗಾ ಯೋಜನೆಯಡಿ ಶಿಕ್ಷಣ ಇಲಾಖೆಯ ಆಟದ ಮೈದಾನ ಸಮತಟ್ಟು, ಅಭಿವೃದ್ಧಿಗೆ ಸಹಕಾರ ದೊರೆಯುತ್ತದೆ. ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯದೇ ಇದ್ದುದರಿಂದ ಹುದ್ದೆಗಳು ಖಾಲಿ ಇದೆ. ಈ ಕುರಿತು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಸೋಮಶೇಖರಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಯಲಬುರ್ಗಾಪಠ್ಯದ ಜತೆಗೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಕ್ರೀಡೆ ಅವಶ್ಯವಿದೆ. ಅದಕ್ಕೆ ಪೂರಕವಾಗಿ ತಾಲೂಕಿನಲ್ಲಿ ಆಟದ ಮೈದಾನ, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದು, ನಾನಾ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕಾದ ವಿದ್ಯಾರ್ಥಿಗಳ ಕನಸು ಕಮರುತ್ತಿದೆ.
ಭೀಮೇಶ ಬಂಡಿವಡ್ಡರ, ಕಬಡ್ಡಿ ಕ್ರೀಡಾಪಟು, ಹಿರೇಮ್ಯಾಗೇರಿ