ಸಾರಾಂಶ
ಗುಳೇದಗುಡ್ಡ: ಸಮೀಪದ ಕೋಟೆಕಲ್ ಗ್ರಾಮದ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೋಟೆಕಲ್ಲ ಸಂಯುಕ್ತಾಶ್ರಯದಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದವರಿಂದ ಮೂರು ದಿನ ನಡೆದಿರುವ ನಾಟಕೋತ್ಸವ-2024ರ ಮೊದಲನೇ ದಿನ ನಾಟಕೋತ್ಸವವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ಘಂಟಿ ಉದ್ಘಾಟಿಸಿ ಮಾತನಾಡಿ, ನಾಟಕಗಳು ನಮ್ಮ ಬದುಕಿನಲ್ಲಿ ನಿತ್ಯ ನಡೆಯುವ ಪ್ರಸಂಗಗಳನ್ನೇ ನುರಿತ ಕಲಾವಿದರಿಂದ ಮತ್ತೆ ರಂಗದ ಮೇಲೆ ಪ್ರದರ್ಶನ ಮಾಡುವುದರಿಂದ ನೋಡುಗರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನಾಟಕಗಳು ನಮ್ಮ ಬದುಕಿನಲ್ಲಿ ನಿತ್ಯ ನಡೆಯುವ ಪ್ರಸಂಗಗಳನ್ನೇ ನುರಿತ ಕಲಾವಿದರಿಂದ ಮತ್ತೆ ರಂಗದ ಮೇಲೆ ಪ್ರದರ್ಶನ ಮಾಡುವುದರಿಂದ ನೋಡುಗರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ಘಂಟಿ ಹೇಳಿದರು.ಸಮೀಪದ ಕೋಟೆಕಲ್ ಗ್ರಾಮದ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೋಟೆಕಲ್ಲ ಸಂಯುಕ್ತಾಶ್ರಯದಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದವರಿಂದ ಮೂರು ದಿನ ನಡೆದಿರುವ ನಾಟಕೋತ್ಸವ-2024ರ ಮೊದಲನೇ ದಿನ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ನಿತ್ಯ ಬದುಕಿನ ವಾಸ್ತವ ಸತ್ಯ, ಮಾನವೀಯ ಮೌಲ್ಯಗಳು ವಿಡಂಬಣೆ, ವಂಚನೆ, ಮೋಸ ಈ ಮೊದಲಾದ ವರ್ತನೆಗಳನ್ನು ಮನಸ್ಸಿನ ಮೇಲೆ ನಟನೆಯ ಮುಖಾಂತರ ರಂಗದ ಮೇಲೆ ತೋರಿಸುವ ಹೊಸ ಅಲೆಯ ನಾಟಕಗಳು ಬದುಕಿಗೆ ಹತ್ತಿರವಾಗುತ್ತವೆ. ನಾಟಕದ ಕಥಾವಸ್ತು, ತಾಂತ್ರಿಕತೆ, ವಿನ್ಯಾಸ ನೋಡುಗರನ್ನು ಮುಗ್ಧರನ್ನಾಗಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ಸಿ.ಎಂ.ಜೋಶಿ ಮಾತನಾಡಿ, ರಂಗ ಕಲೆ ಉಳಿಸಿ ಬೆಳೆಸಬೇಕಾಗಿದೆ. ಈ ಪ್ರಯತ್ನದಲ್ಲಿ ಸಾಣೆಹಳ್ಳಿಯವರ ಸಾಧನೆ ಮೆಚ್ಚುವಂತಹದ್ದು ಎಂದರು.ಪಿಕೆಪಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ಪ್ರತಿ ವರ್ಷ ಸಾಣೆಹಳ್ಳಿಯ ರಂಗ ತಂಡವನ್ನು ಆಹ್ವಾನಿಸಿ ನಾಟಕಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಮೂರು ದಿನ ರಂಗಾಸಕ್ತರು ಈ ನಾಟಕೋತ್ಸವ ಪ್ರಯೋಜನ ಮಾಡಿಕೊಳ್ಳಬೇಕೆಂದರು.
ರಾತ್ರಿ ಜಯಂತ ಕಾಯ್ಕಿಣಿ ರಚಿಸಿದ ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಜತೆಗಿರುವನು ಚಂದಿರ ನಾಟಕ ಪ್ರದರ್ಶನಗೊಂಡಿತು. ಗ್ರಾಪಂ ಅಧ್ಯಕ್ಷೆ ಮಹಾಲಿಂಗವ್ವ ಎಮ್ಮಿ, ಮಾಜಿ ಅಧ್ಯಕ್ಷೆ ಶ್ರುತಿ ಪತ್ತಾರ, ಪಿಕೆಪಿಎಸ್ ನಿರ್ದೇಶಕರಾದ ಯಲಗುರ್ದಪ್ಪ ತೊಗಲಂಗಿ, ಸಂಗಪ್ಪ ಹಡಪದ, ಮಹಾಲಿಂಗ ಹಾವಡಿ, ಸಂತೋಷ ತಿಪ್ಪಾ, ಶಾಂತವೀರಯ್ಯ ಹುಚ್ಚೇಶ್ವರಮಠ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಮಾವಿನಮರದ, ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ಪಿಕೆಪಿಎಸ್ ವ್ಯವಸ್ಥಾಪಕ ಚಂದ್ರಶೇಖರ ಕಲ್ಯಾಣಿ, ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಮುಖ್ಯಸ್ಥರು ವೇದಿಕೆ ಮೇಲಿದ್ದರು.