ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಅರ್ಹ ನಾಗರಿಕರೆಲ್ಲರೂ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜಿಲ್ಲಾಡಳಿತದೊಂದಿಗೆ ಸಕ್ರಿಯವಾಗಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
- ಜಿಲ್ಲೆಯ ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪರಾಮರ್ಶಿಸುವ ಕುರಿತು ಸಭೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಅರ್ಹ ನಾಗರಿಕರೆಲ್ಲರೂ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜಿಲ್ಲಾಡಳಿತದೊಂದಿಗೆ ಸಕ್ರಿಯವಾಗಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ರೈತರು ನೀಡಿರುವ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪರಾಮರ್ಶಿಸುವ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ ಎನುಮೆರೇಷನ್ ಫಾರಂಗಳನ್ನು ವಿತರಿಸುತ್ತಿದ್ದಾರೆ. ನಾಗರಿಕರು ಈ ಫಾರಂಗಳನ್ನು ಸೂಕ್ತವಾಗಿ ಭರ್ತಿ ಮಾಡಿ, ಸಹಿ ಪ್ರಕ್ರಿಯೆ ಪೂರ್ಣಗೊಳಿಸಿ ಮರಳಿ ಬಿ.ಎಲ್.ಒ.ಗಳಿಗೆ ತಲುಪಿಸಬೇಕು ಮತ್ತು ಈ ಕುರಿತ ಮಾಹಿತಿಯನ್ನು ಇತರರೊಂದಿಗೂ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿದರು.ಮತದಾರರ ಪಟ್ಟಿ ಪರಿಷ್ಕರಣೆಯು ಕೇವಲ ಬಿ.ಎಲ್.ಒ.ಗಳ ಕರ್ತವ್ಯವಷ್ಟೇ ಅಲ್ಲ, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ಮೇಲೆಯೂ ಹೆಚ್ಚಿನ ಜವಾಬ್ದಾರಿಯಿದೆ. ಪ್ರತಿ ಪಂಚಾಯಿತಿಯ ಬಿಲ್ ಕಲೆಕ್ಟರ್ಸ್, ನೀರಗಂಟಿಗಳು, ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಬಿ.ಎಲ್.ಒ.ಗಳ ಜೊತೆ ನಿಂತು, ಮನೆ ಮನೆಗೆ ತೆರಳಿ ಫಾರಂಗಳನ್ನು ಭರ್ತಿ ಮಾಡಿಕೊಡುವಲ್ಲಿ ಪೂರ್ಣ ಸಹಕಾರ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅನಿವಾರ್ಯ ಕಾರಣಗಳಿಂದ ಅಥವಾ ಪ್ರಕೃತಿ ವಿಕೋಪಗಳಂತಹ (ಮನೆ ಕುಸಿತ, ಬೆಂಕಿ ಅವಘಡ) ಸಂದರ್ಭಗಳಲ್ಲಿ ದಾಖಲೆಗಳನ್ನು ಕಳೆದುಕೊಂಡು ಯಾವುದೇ ಗುರುತಿನ ಚೀಟಿ ಇಲ್ಲದಿರುವ ಸಾರ್ವಜನಿಕರು ಹಾಗೂ ರೈತರ ಹಿತದೃಷ್ಟಿಯಿಂದ ಜಿಲ್ಲಾಡಳಿತ ವಿಶೇಷ ಕ್ರಮ ಕೈಗೊಂಡಿದೆ. ಇಂತಹ ವ್ಯಕ್ತಿಗಳನ್ನು ಪಿಡಿಒಗಳು ತಹಶೀಲ್ದಾರ್ ಕಚೇರಿಗೆ ಕಳುಹಿಸಿಕೊಡಬೇಕು. ಕೇವಲ ಒಂದೇ ದಿನದಲ್ಲಿ ಅವರಿಗೆ ''''''''ಶಾಶ್ವತ ನಿವಾಸಿ ಪ್ರಮಾಣಪತ್ರ'''''''' ನೀಡುವಂತೆ ಈಗಾಗಲೇ ಎಲ್ಲ ತಹಸೀಲ್ದಾರ್‌ಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಅರ್ಹರ ಹೆಸರನ್ನು ಸೇರ್ಪಡೆಗೊಳಿಸುವ ಈ ಪ್ರಕ್ರಿಯೆ ಕೇವಲ ಸಲಹೆಯಾಗಿ ಪರಿಗಣಿಸದೇ, ಅತ್ಯಂತ ಗಂಭೀರ ವಿಷಯವಾಗಿ ಸ್ವೀಕರಿಸಬೇಕು. ಜಿಲ್ಲಾಡಳಿತ, ಚುನಾವಣಾ ಆಯೋಗ ಹಾಗೂ ಸರ್ಕಾರದ ಪರವಾಗಿ ಕೈಗೊಳ್ಳಲಾಗಿರುವ ಈ ಮಹತ್ವದ ಕಾರ್ಯಕ್ಕೆ ಅಧಿಕಾರಿಗಳು, ಪಿಡಿಒಗಳು ಮತ್ತು ಜಿಲ್ಲೆಯ ಸಮಸ್ತ ಸಾರ್ವಜನಿಕರು ಕೈ ಜೋಡಿಸಬೇಕೆಂದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ , ಜಿಲ್ಲಾಮಟ್ಟದ ಅಧಿಕಾರಿಗಳು ಪಿಡಿಓಗಳು ಉಪಸ್ಥಿತರಿದ್ದರು.- - -
()