ಸಾರಾಂಶ
ಪರಿಶಿಷ್ಟ ಜಾತಿ ಒಳಮೀಸಲು ಸಮೀಕ್ಷೆಯು ಹುಕ್ಕೇರಿ ತಾಲೂಕಿನಾದ್ಯಂತ ಹಮ್ಮಿಕೊಂಡಿದ್ದು ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ದತ್ತಾಂಶ ಸ್ಪಷ್ಟವಾಗಿರಬೇಕು. ಈ ಮೂಲಕ ಸಮೀಕ್ಷೆಗೆ ಸಹಕರಿಸಬೇಕು
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪರಿಶಿಷ್ಟ ಜಾತಿ ಒಳಮೀಸಲು ಸಮೀಕ್ಷೆಯು ಹುಕ್ಕೇರಿ ತಾಲೂಕಿನಾದ್ಯಂತ ಹಮ್ಮಿಕೊಂಡಿದ್ದು ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ದತ್ತಾಂಶ ಸ್ಪಷ್ಟವಾಗಿರಬೇಕು. ಈ ಮೂಲಕ ಸಮೀಕ್ಷೆಗೆ ಸಹಕರಿಸಬೇಕು ಎಂದು ತಹಸೀಲ್ದಾರ್ ಮಂಜುಳಾ ನಾಯಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಇಲ್ಲಿನ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಒಳಮೀಸಲು ಸಮೀಕ್ಷೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲು ಸಮೀಕ್ಷೆ ನಡೆಸುತ್ತಿದೆ. ಹಾಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ತಮ್ಮ ನಿಖರ ಮಾಹಿತಿ ನಮೂದಿಸಬೇಕು ಎಂದರು.
ಸಂವಿಧಾನದ 341ನೇ ವಿಧಿಯಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಉಪಜಾತಿಗಳ ವೈಜ್ಞಾನಿಕ ಮಾಹಿತಿ ತಿಳಿಯಬೇಕಿದೆ. ಒಳಮೀಸಲಾತಿ ಕೊಡುವಾಗ ನಿರ್ಧಿಷ್ಟ ಅಂಕಿ ಅಂಶಗಳು ಬೇಕಾಗುತ್ತವೆ. ಸಮೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ಕ್ರಮಗಳನ್ನು ವಹಿಸಲಾಗಿದೆ ಎಂದು ಹೇಳಿದರು.ಗಣತಿದಾರರು ಮೇ 21ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುವರು. ಮೊಬೈಲ್ ಆ್ಯಪ್ ಆನ್‌ಲೈನ್ ಸಮೀಕ್ಷೆ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಸಮೀಕ್ಷೆಗಾಗಿ 460 ಶಿಕ್ಷಕರು, 46 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಎಲ್ಲ ಗಣತಿದಾರರಿಗೆ ತರಬೇತಿ ನೀಡಲಾಗಿದೆ. ವಿಶೇಷ ಶಿಬಿರಗಳಲ್ಲಿ ಮತಗಟ್ಟೆವಾರು ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಎಲ್ಲರೂ ಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸಮೀಕ್ಷೆಯಲ್ಲಿ ಮನೆ, ಕಾರು, ಬೈಕ್, ಜಮೀನು ಉದ್ಯೋಗದ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದಿಂದ ಸಿಗುವ ಸೌಲಭ್ಯ ನಿಲ್ಲಿಸುತ್ತಾರೆ ಎನ್ನುವ ತಪ್ಪು ತಿಳುವಳಿಕೆ ಇದೆ. ಸಮೀಕ್ಷೆಗೆ ಮಾಹಿತಿ ನೀಡುವುದರಿಂದ ಯಾವುದೇ ರೀತಿಯ ಸೌಲಭ್ಯ ಕಡಿತಗೊಳಿಸುವುದಿಲ್ಲ. ಯಾವುದೇ ರೀತಿ ಗೊಂದಲಕ್ಕೊಳಗಾಗದೆ ಗಣತಿದಾರರ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಮಹತ್ವಪೂರ್ಣ ಕಾರ್ಯಕ್ರಮವಾದ ಈ ಒಳಮೀಸಲು ಸಮೀಕ್ಷೆಯು ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಮುನ್ನುಡಿ ಆಗಲಿದೆ. ಆದ್ದರಿಂದ ತಾಲೂಕಿನ ಸಾರ್ವಜನಿಕರು, ಮುಖಂಡರು, ಸಂಘಟನೆಗಳು ಸಹಕಾರಿ ನೀಡಿ ಸಮೀಕ್ಷೆ ಯಶಸ್ವಿಗೊಳಿಸಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಶಿರಸ್ತೆದಾರ ಎನ್.ಆರ್.ಪಾಟೀಲ, ಬಸವರಾಜ ನಾಂದೂರಕರ, ಸಂತೋಷ ನಾಯಕ ಮತ್ತಿತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))