ದಯಮಾಡಿ ಗ್ರಾಮಾಂತರ ಪ್ರದೇಶದ ಗ್ರಾಹಕರು ಪಟ್ಟಣದಲ್ಲಿರುವ ಗ್ಯಾಸ್‌ ಏಜನ್ಸಿಯ ಹತ್ತಿರ ಬರಬೇಡಿ. ಎಲ್ಲಾ ಗ್ರಾಹಕರಿಗೂ ನಿಮ್ಮ ಗ್ರಾಮಗಳ ಬಳಿಯೇ ಸಿಲೆಂಡರ್‌ ಗಳನ್ನು ಸರಬರಾಜು ಮಾಡಿಸುತ್ತೇವೆ. ದಯಮಾಡಿ ಸಹಕರಿಸಿ ಎಂದು ತಾಲೂಕು ದಂಡಾಧಿಕಾರಿ ಎನ್.‌ ಎ.ಕುಂಇ ಅಹಮದ್‌ ತಾಲೂಕಿನ ನಾಗರೀಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಕನ್ನಡಪ್ರಭವಾರ್ತೆ, ತುರುವೇಕೆರೆ

ದಯಮಾಡಿ ಗ್ರಾಮಾಂತರ ಪ್ರದೇಶದ ಗ್ರಾಹಕರು ಪಟ್ಟಣದಲ್ಲಿರುವ ಗ್ಯಾಸ್‌ ಏಜನ್ಸಿಯ ಹತ್ತಿರ ಬರಬೇಡಿ. ಎಲ್ಲಾ ಗ್ರಾಹಕರಿಗೂ ನಿಮ್ಮ ಗ್ರಾಮಗಳ ಬಳಿಯೇ ಸಿಲೆಂಡರ್‌ ಗಳನ್ನು ಸರಬರಾಜು ಮಾಡಿಸುತ್ತೇವೆ. ದಯಮಾಡಿ ಸಹಕರಿಸಿ ಎಂದು ತಾಲೂಕು ದಂಡಾಧಿಕಾರಿ ಎನ್.‌ ಎ.ಕುಂಇ ಅಹಮದ್‌ ತಾಲೂಕಿನ ನಾಗರೀಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಪಟ್ಟಣದ ಕೆರೆಕೋಡಿ ಬಳಿ ಇರುವ ಗ್ಯಾಸ್ ಏಜೆನ್ಸಿಯ ಬಳಿ ಸಿಲೆಂಡರ್‌ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ಯಾಸ್‌ ಏಜನ್ಸಿಯ ಬಾಗಿಲು ತೆರೆಯುವುದು ಬೆಳಗ್ಗೆ 10 ಗಂಟೆಗೆ. ಬಿಸಿಲಿನ ತಾಪದಿಂದ ಜನರು ಕಂಗಾಲಾಗುತ್ತಿದ್ದಾರೆ. ಹೊಟ್ಟೆಗೆ ಇಲ್ಲದೆ, ಕುಡಿಯುವ ನೀರಿಲ್ಲದೇ ತರಿತಪಿಸುತ್ತಿದ್ದಾರೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಹಾಗಾಗಿ ಯಾವ ಗ್ರಾಹಕರೂ ಸಹ ಗ್ಯಾಸ್‌ ಏಜೆನ್ಸಿಯ ಬಳಿ ಬರಬಾರದು ಎಂದು ತಹಸೀಲ್ದಾರ್‌ ಮನವಿ ಮಾಡಿಕೊಂಡರು. ಗುರುವಾರ ಬೆಳಗ್ಗೆಯಿಂದಲೇ ಗ್ಯಾಸ್‌ ಏಜೆನ್ಸಿಯ ಬಳಿ ನೂರಾರು ಮಂದಿ ಕಾದು ಕುಳಿತಿದ್ದರು. ಸಮಯ ಆಗುತ್ತಿದ್ದಂತೆ ಗ್ರಾಹಕರ ಸಂಖ್ಯೆಯೂ ಏರತೊಡಗಿತು. ಇತ್ತ ಬಿಸಿಲಿನ ತಾಪ ಹೆಚ್ಚುತ್ತಿತ್ತು. ಮುಖ್ಯ ಕಚೇರಿಯ ಬಾಗಿಲ ಬಳಿ ನೂರಾರು ಮಂದಿ ಜಮಾಯಿಸಿದರು. ಸಿಬ್ಬಂದಿ ಕಚೇರಿಯ ಬಾಗಿಲು ತೆರೆಯಲೂ ಸಹ ಜನರು ಅವಕಾಶ ನೀಡಲಿಲ್ಲ. ಬೆಳಗ್ಗೆ 10 ಗಂಟೆಗೆ ತೆರೆಯಬೇಕಿದ್ದ ಬಾಗಿಲು 11.45 ಕ್ಕೆ ತೆರೆಯಿತು. ಜನರನ್ನು ನಿಯಂತ್ರಿಸಲು ಗ್ಯಾಸ್‌ ಏಜೆನ್ಸಿಯ ಸಿಬ್ಬಂದಿ ಮತ್ತು ಪೊಲೀಸರು ಹರ ಸಾಹಸ ಮಾಡಿದರು. ಸಿಲೆಂಡರ್ ಪಡೆಯಲು ಜನರು ದುಂಬಾಲು ಬಿದ್ದಿರುವುದನ್ನು ನಿಯಂತ್ರಿಸಲು ಅಲ್ಲಿನ ಸಿಬ್ಬಂದಿ, ಪೊಲೀಸ್‌ ಮತ್ತು ಆಹಾರ ಇಲಾಖಾ ನಿಯಂತ್ರಣಾಧಿಕಾರಿ ಕೃಷ್ಣೇಗೌಡ ಬೆಳಗ್ಗೆಯಿಂದಲೇ ಮೊಕ್ಕಾಂ ಹೂಡಿದ್ದಾರೆ.

ಜನರು ಸಿಲೆಂಡರ್‌ ಪಡೆಯಲು ಸರಿ ರಾತ್ರಿಯಿಂದಲೇ ಬಂದಿರುತ್ತಾರೆ. ಅವರ ಬಂದಿರುವ ಕಾರಣ ಹಾಗೂ ಗುರುತಿಗಾಗಿ ತಮ್ಮ ಚಪ್ಪಲಿಯನ್ನು ಬಿಟ್ಟು ನೆರಳಿನಲ್ಲಿ ಕುಳಿತು ತಮ್ಮ ಚಪ್ಪಲಿಗಳನ್ನು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ಪ್ರತಿ ದಿನ ಕನಿಷ್ಠ ಸಾವಿರ ಸಿಲೆಂಡರ್‌ ಗಳು ಬರುತ್ತಿವೆ. ಹಳ್ಳಿಗಳಿಗೆ 9 ವಾಹನಗಳಲ್ಲಿ ಸಿಲೆಂಡರ್‌ ಸರಬರಾಜು ಮಾಡಲಾಗುತ್ತಿದೆ. ಆದರೆ ಜನರು ವಾಹನಗಳನ್ನು ಹೊರಗೆ ಬಿಡದ ಹಿನ್ನೆಲೆ ಮತ್ತು ಏಜನ್ಸಿ ಬಳಿಯೇ ಬಂದು ಇಲ್ಲೇ ವಿತರಣೆ ಮಾಡಿ ಎಂದು ಪಟ್ಟು ಹಿಡಿದ ಪರಿಣಾಮ ಕೇವಲ 600 ಸಿಲೆಂಡರ್‌ ಗಳನ್ನು ಮಾತ್ರ ವಿತರಣೆ ಮಾಡಲು ಸಾಧ್ಯವಾಗಿದೆ ಎಂದು ಏಜೆನ್ಸಿಯ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿ ಕೃಷ್ಣೇಗೌಡ, ಜೆ.ಕೆ.ಗ್ಯಾಸ್ ಏನ್ಸಿಗಳಾದ ಅರುಣ್ ಕುಮಾರ್, ಜಿಲನ್, ಪಟ್ಟಣ ಪಂಚಾಯಿತಿ ಸದಸ್ಯ ಅಂಜನ್ ಕುಮಾರ್, ರೈತ ಮುಖಂಡ ಲೋಕಮ್ಮನಹಳ್ಳಿ ಕಾಂತರಾಜು, ಅಶೋಕ್, ಶಿವರಾಜು, ಶಶಾಂಕ್‌ ಸೇರಿದಂತೆ ಹಲವು ಮಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಮಾಡಿದರು.