ನಾವು ನಮ್ಮ ಜಮೀನಿಗೆ ಓಡಾಡಲು ಇದ್ದ ದಾರಿ ಮುಚ್ಚಿಬಿಟ್ಟಿದ್ದಾರೆ ದಯಮಾಡಿ ನಮಗೆ ದಾರಿ ಬಿಡಿಸಿ ಕೊಡಿ ಎಂದು ಜನ ಸಾಮಾನ್ಯರು ತಹಸೀಲ್ದಾರ್ ರನ್ನು ಕೇಳುವುದು ಸಾಮಾನ್ಯ. ಆದರೆ ಇಲ್ಲಿಯ ಪರಿಸ್ಥಿತಿಯೇ ಬೇರೆ ಇದೆ. ಇಲ್ಲಿ ತಹಸೀಲ್ದಾರ್ ರೇ ಸ್ವತಃ ನಾನು ಓಡಾಡಲು ದಾರಿ ಬಿಡಿ ಪ್ಲೀಸ್ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ

ಎಸ್.ನಾಗಭೂಷಣ ಕನ್ನಡಪ್ರಭ ವಾರ್ತೆ ತುರುವೇಕೆರೆ

ನಾವು ನಮ್ಮ ಜಮೀನಿಗೆ ಓಡಾಡಲು ಇದ್ದ ದಾರಿ ಮುಚ್ಚಿಬಿಟ್ಟಿದ್ದಾರೆ ದಯಮಾಡಿ ನಮಗೆ ದಾರಿ ಬಿಡಿಸಿ ಕೊಡಿ ಎಂದು ಜನ ಸಾಮಾನ್ಯರು ತಹಸೀಲ್ದಾರ್ ರನ್ನು ಕೇಳುವುದು ಸಾಮಾನ್ಯ. ಆದರೆ ಇಲ್ಲಿಯ ಪರಿಸ್ಥಿತಿಯೇ ಬೇರೆ ಇದೆ. ಇಲ್ಲಿ ತಹಸೀಲ್ದಾರ್ ರೇ ಸ್ವತಃ ನಾನು ಓಡಾಡಲು ದಾರಿ ಬಿಡಿ ಪ್ಲೀಸ್ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ದಂಡಾಧಿಕಾರಿಗಳ ಕಚೇರಿಯ ಗೇಟಿನ ಮುಂದೆಯೇ ಹತ್ತಾರು ದ್ವಿ ಚಕ್ರವಾಹನಗಳು. ನಾಲ್ಕು ಚಕ್ರದ ವಾಹನಗಳು ನಿಲ್ಲುತ್ತಿವೆ. ಈ ಕಚೇರಿಕಗೆ ಜನ ಸಾಮಾನ್ಯರು ಒಳಗೆ ಹೋಗಲು ಪರದಾಡಬೇಕು. ಇನ್ನು ಅಧಿಕಾರಿಗಳೋ, ಶಾಸಕರೋ ತಮ್ಮ ವಾಹನಗಳಲ್ಲಿ ಬಂದರಂತೋ ದೇವರೇ ಕಾಪಾಡಬೇಕು. ಒಳ ಹೋಗಲು ಸಾಧ್ಯವೇ ಇಲ್ಲ. ವಾಹನವನ್ನು ಹೊರಗಡೆ ಎಲ್ಲೋ ಬಿಟ್ಟು, ನಡೆದುಕೊಂಡೇ ಹೋಗಬೇಕು. ಗೇಟನ್ನು ತೆರೆದರೆ ಕಚೇರಿಯ ಕೆಲಸಕ್ಕೆ ಬರುವವರಲ್ಲದೇ, ಬೇರೆ ಜನರು ತಮ್ಮ ವಾಹನಗಳನ್ನೆಲ್ಲಾ ಕಚೇರಿಯ ಆವರಣದಲ್ಲಿ ನಿಲ್ಲಿಸುತ್ತಾರೆಂಬ ಆರೋಪವಿದೆ. ಪಟ್ಟಣದ ಬಹುಪಾಲು ಫುಟ್ ಪಾತ್ ಗಳು ಬೀದಿಬದಿ ವ್ಯಾಪಾರಿಗಳ ಪಾಲಾಗಿದೆ. ದ್ವಿ ಚಕ್ರ ವಾಹನಗಳನ್ನು ನಿಲ್ಲಿಸುವುದಿರಲಿ, ಜನರೂ ಸಹ ಫುಟ್ ಪಾತ್ ಮೇಲೆ ಓಡಾಡಲು ಸಾಧ್ಯವಿಲ್ಲದಾಗಿದೆ. ಇನ್ನು ದೊಡ್ಡ ವಾಹನದವರಂತೂ ದಾರಿ ಮಧ್ಯೆಯೇ ನಿಲ್ಲಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುವ ಪರಿಪಾಠ ಇದೆ. ಆ ವೇಳೆಗೆ ಸಾಕಷ್ಟು ಅಡೆತಡೆ ಆಗಿ ನೂರಾರು ವಾಹನಗಳು ನಿಂತು ಹಾರನ್ ಹೊಡೆದು ಹೊಡೆದೂ ಸಾಕಾಗಿ ಬೈದುಕೊಂಡು ಸಾಗುವುದು ಕಾಮನ್ ಆಗಿದೆ. ಸಾರ್ವಜನಿಕರಿಗೆ ಓಡಾಡಲು ಇರುವ ಫುಟ್ ಪಾತ್ ಇಲ್ಲದಾಗಿದೆ. ರಸ್ತೆ ಬದಿಯೇ ವ್ಯಾಪಾರ ಮಾಡುತ್ತಿರುವುದರಿಂದ ಬಸ್ ಸೇರಿದಂತೆ ಇನ್ನಿತರ ದೊಡ್ಡ ವಾಹನಗಳನ್ನು ಸರಾಗವಾಗಿ ಚಲಾಯಿಸಲು ಸಾಧ್ಯವಾಗುತ್ತಿದೆ. ಪೊಲೀಸ್ ಇಲಾಖೆ ಮನಸ್ಸು ಮಾಡಿದರೆ ನಿಯಂತ್ರಣಕ್ಕೆ ತರಬಹುದು. ಜನ ಸಾಮಾನ್ಯರ ಗೋಳು ದಿನೇ ದಿನೇ ಜಾಸ್ತಿಯಾಗುತ್ತಿದೆಯೇ ವಿನಃ ಕಡಿಮೆಯಂತೂ ಆಗುತ್ತಿಲ್ಲ. ಜನರು ಜನಪ್ರನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದು ಕಾಮನ್ ಆಗಿದೆ. ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಹಿಡಿಶಾಪಕ್ಕೆ ಡೋಂಟ್ ಕೇರ್ ಎನ್ನುತ್ತಿದ್ದಾರೆ.