ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ತಿಗಳ ಸಮುದಾಯದವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ತಿಗಳ ಹಾಗೂ ಉಪಜಾತಿ ಕಾಲಂನಲ್ಲಿ ಅಗ್ನಿವಂಶ ಕ್ಷತ್ರೀಯ ಎಂದು ನಮೂದಿಸುವಂತೆ ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಎಚ್.ಬಸವರಾಜು ಮನವಿ ಮಾಡಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಎಲ್ಲಾ ಜಾತಿಗಳ - ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಹಾಗಾಗಿ ತಿಗಳ ಸಮುದಾಯದ ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ನಿಖರವಾದ ಮಾಹಿತಿ ನೀಡುವಂತೆ ಕೋರಿದರು.
ಸಮೀಕ್ಷೆಗಾಗಿ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಸಮುದಾಯದವರು ಅನುಸೂಚಿಯ 60 ಅಂಶಗಳ- ಪ್ರಶ್ನೆಗಳ ಪೈಕಿ ಮುಖ್ಯವಾಗಿ ಧರ್ಮದ ಕಾಲಂನಲ್ಲಿ ಹಿಂದು , ಮಾತೃಭಾಷೆ ಕನ್ನಡ, ಉದ್ಯೋಗ- ವ್ಯಾಪಾರ, ಕೃಷಿ, ಸಾಗುವಳಿ ಹಾಗೂ ಕುಟುಂಬದ ಕುಲ ಕಸುಬು ಕೃಷಿ ಸಾಗುವಳಿ ಎಂದು ನಮೂದಿಸುವಂತೆ ತಿಳಿಸಿದರು.ಈ ಜಾತಿ ಸಮೀಕ್ಷೆ ನಡೆಸಬೇಕೊ ಅಥವಾ ಬೇಡವೊ ಎಂದು ರಾಜ್ಯ ಸರ್ಕಾರವೇ ಗೊಂದಲದಲ್ಲಿ ಇತ್ತು. ಯಾವ ಜಾತಿಯವರು ಸಮೀಕ್ಷೆ ನಡೆಸಬೇಕೆಂದು ಕೇಳಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಜೇನುಗೂಡಿಗೆ ಕೈ ಹಾಕುವ ಕೆಲಸ ಮಾಡಿದ್ದು, ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿಲ್ಲ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ತಿಗಳ ನಡಿಗೆ ಕಾಂಗ್ರೆಸ್ ಕಡೆಗೆ ಸಮಾವೇಶ ನಡೆಸಿದ್ದರು. ಆಗ ಸಮುದಾಯಕ್ಕೆ 2 ವಿಧಾನ ಪರಿಷತ್ ಹಾಗೂ 4 ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವುದಾಗಿ ನೀಡಿದ್ದ ಭರವಸೆಯನ್ನು ಇಲ್ಲಿವರೆಗೂ ಈಡೇರಿಸಿಲ್ಲ. ಇನ್ನೂ ಸಮಯವಿದ್ದು, ಸಮುದಾಯದ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ನಾವ್ಯಾರು ರಾಜಕೀಯ ಸ್ಥಾನಮಾನ ಕೇಳಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕಳೆದ 25 ವರ್ಷಗಳಿಂದ ದುಡಿಯುತ್ತಿರುವ ಸಮುದಾಯದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಬೇಕು. ಹಿಂದುಳಿದ ಸಮಾಜದವರಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವ ಕೆಲಸವಾಗಬೇಕು. ಅದರಲ್ಲೂ ತಿಗಳ ಸಮುದಾಯ ಹೆಚ್ಚಿರುವ ರಾಮನಗರ , ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿ ಆರು ಜಿಲ್ಲೆಗಳಿಗೆ ನಿಮ್ಮ ಕೊಡುಗೆ ಏನೆಂದು ಉತ್ತರ ಕೊಡಬೇಕಾಗುತ್ತದೆ ಎಂದು ಹೇಳಿದರು.ಬಸವರಾಜ ಬೊಮ್ಮಾಯಿರವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ತಿಗಳರ ಅಭಿವೃದ್ಧಿ ನಿಗಮ ರಚನೆಯಾಗಿತ್ತು. ಆದರೆ,ಇಲ್ಲಿವರೆಗೂ ಚಾಲನೆ ಸಿಕ್ಕಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಿ, 25 ಕೋಟಿ ಅನುದಾನ ಇಟ್ಟಿದ್ದರೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಹಿಳೆಯರಿಗೆ ಹೊಲಿಗೆ ತರಬೇತಿ, ರೈತರಿಗೆ ಕೃಷಿ ಸಲಕರಣೆ ನೀಡಬಹುದಿತ್ತು ಎಂದು ತಿಳಿಸಿದರು.
ಅಗ್ನಿಬನ್ನಿರಾಯ ಜಯಂತಿ ಘೋಷಣೆ ಮಾಡಿದೆ. ಸರ್ಕಾರದಿಂದ ಬೆಂಗಳೂರಿನ ವಿವಿಯಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭವಾಗಿದೆ. ಜಿಲ್ಲೆಯ ಐದು ತಾಲೂಕಿನಲ್ಲಿರುವ ತಿಗಳ ಸಮುದಾಯದವರಿಗೆ ನಿಮ್ಮ ಕೊಡುಗೆ ಏನು. ಡಿ.ಕೆ.ಶಿವಕುಮಾರ್ ರವರು ಮನಸ್ಸು ಮಾಡಿದರೆ ಅವಕಾಶ ಕಲ್ಪಿಸಬಹುದಾಗಿದೆ ಎಂದು ಬಸವರಾಜು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕುಂಭಣ್ಣ , ಸಿದ್ಧಯ್ಯ, ನರಸಿಂಹ, ಕೃಷ್ಣಯ್ಯ, ಗುರುವಯ್ಯ, ಕುಮಾರ್, ಎಂ.ಬಿ.ಕೃಷ್ಣಯ್ಯ, ಗಂಗಣ್ಣ, ಎನ್.ಎಸ್.ಶಿವಣ್ಣ, ಜಗಣ್ಣ, ಗಂಗಹನುಮಯ್ಯ, ಶಿವಣ್ಣ, ಗಂಗಣ್ಣ, ಮಾಗಡಿ ಪುರಸಭೆ ಮಾಜಿ ಅಧ್ಯಕ್ಷೆ ಸುಮಾ ಮತ್ತಿತರರು ಹಾಜರಿದ್ದರು.