ಸಾರಾಂಶ
ಮಡಿಕೇರಿ: ಟಾಸ್ಕ್ ಫೋರ್ಸ್ ಸಭೆ । ರಸ್ತೆ ಗುಂಡಿ ಮುಚ್ಚಲು ಆದೇಶಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ-ಭಾಗಮಂಡಲ ರಸ್ತೆ ಗುಂಡಿಮಯವಾಗಿದ್ದು, ಸಾರಿಗೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಸದ್ಯ ಮಳೆಯಾಗಿರುವುದಿರಿಂದ ‘ವೆಟ್‌ಮಿಕ್ಸ್’ ಅಳವಡಿಸುವಂತೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ 18 ಗ್ರಾ.ಪಂ. ಒಳಪಟ್ಟಂತೆ ಕಾರುಗುಂದದ ವಿಎಸ್‌ಎಸ್‌ಎಸ್‌ಎನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಸ್ತೆಗಳು ತುಂಬಾ ಹಳ್ಳ ಬಿದ್ದಿದ್ದು, ಇಂತಹ ಕಡೆಗಳಲ್ಲಿ ವೆಟ್‌ಮಿಕ್ಸ್ ಅಳವಡಿಸಬೇಕು. ಮೇ ಕೊನೆ ವಾರ ಮತ್ತು ಜೂನ್ ಮಧ್ಯದ ವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂದ ಹೆಚ್ಚಿನ ಮಳೆಯಾಗಿದೆ. ಇದರಿಂದ ಮನೆ ಹಾನಿ, ವಿದ್ಯುತ್ ಅಡಚಣೆ ಮತ್ತಿತರ ಸಮಸ್ಯೆಗಳು ಉಂಟಾಗಿದೆ. ಮನೆಹಾನಿ ಸಂಬಂಧಿಸಿದಂತೆ 24 ಗಂಟೆಯೊಳಗೆ ಪರಿಹಾರ ವಿತರಿಸಬೇಕು ಎಂದು ನಿರ್ದೇಶನ ನೀಡಿದರು. ಬೆಟ್ಟಗೇರಿ, ಕಾರುಗುಂದ, ಚೇರಂಬಾಣೆ, ತಣ್ಣಿಮಾನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ಸಂದರ್ಭದಲ್ಲಿ 5 ದಿನ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಪರಿತಪಿಸಿದ್ದಾರೆ. ಆದ್ದರಿಂದ ಆಯಾಯ ದಿನದಲ್ಲಿಯೇ ವಿದ್ಯುತ್ ಸರಿಪಡಿಸುವ ಕಾರ್ಯವಾಗಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಸೆಸ್ಕ್ ಎಂಜಿನಿಯರ್‌ಗಳಿಗೆ ಎ.ಎಸ್.ಪೊನ್ನಣ್ಣ ಸೂಚಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳು, ರಸ್ತೆ ಬದಿ ಹಳೆಯ ಹಾಗೂ ಬೀಳುವ ಹಂತದ ಮರ ತೆರವುಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸುವುದು ಅತೀ ಮುಖ್ಯವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು ಅಂಗನವಾಡಿ, ಶಾಲಾ, ಕಾಲೇಜುಗಳ ಕಟ್ಟಡಗಳು ಸುಸ್ಥಿತಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ಸಮಸ್ಯೆ ಉಲ್ಬಣ ಆಗದಂತೆ ಗಮನಹರಿಸುವುದು ಅಗತ್ಯ ಎಂದರು.
ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ನಿರಂತರವಾಗಿ ನಡೆದಿದೆ. ಹುಲಿ, ಆನೆ ದಾಳಿ ಈಗ ಕರಡಿ ದಾಳಿ ಶುರುವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಹೇಳಿದರು.ಚೇರಂಬಾಣೆ ಬಳಿಯ ದೋಣಿಕಾಡು ಬಳಿ 40 ಕುಟುಂಬಗಳಿದ್ದು, ಮಳೆಗಾಲದಲ್ಲಿ ತುಂಬಾ ಸಂಕಷ್ಟ ಅನುಭವಿಸುತ್ತಾರೆ. ಈ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ರಸ್ತೆ ನಿರ್ಮಿಸುವಂತೆ ಸೂಚಿಸಿದರು. ಇರುವ ರಸ್ತೆ ಅಭಿವೃದ್ಧಿ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ತಗಾದೆ ತೆಗೆಯಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಚೆಂಬು, ಮದೆನಾಡು, ಡಬ್ಬಡ್ಕದಲ್ಲಿ ವಿದ್ಯುತ್ ಮಾರ್ಗ ಕಾಮಗಾರಿಗೆ ಅಡಚಣೆ ಉಂಟುಮಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. * ರಸಗೊಬ್ಬರ ಕೊರತೆಯಾಗದಿರಲಿ:ಭತ್ತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಉಂಟಾಗದಂತೆ ಗಮನಹರಿಸಬೇಕು. ಅನ್ನಭಾಗ್ಯ ಯೋಜನೆಯ ಅಕ್ಕಿ ಕೇರಳಕ್ಕೆ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಆಹಾರ ಇಲಾಖೆ ಅಧಿಕಾರಿಗಳು ಎಚ್ಚರವಹಿಸುವಂತೆ ಸೂಚಿಸಿದರು. ತೂಕದಲ್ಲಿಯೂ ಮೋಸವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಗಮನಹರಿಸುವಂತೆ ನಿರ್ದೇಶನ ನೀಡಿದರು.
ಮಳೆಗಾದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗದಂತೆ ಎಚ್ಚರವಹಿಸಬೇಕು. ಆ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು.ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾಕಷ್ಟು ಮುನ್ನೆಚ್ಚರ ವಹಿಸಬೇಕು. ಯಾವುದೇ ರೀತಿಯ ಹಾನಿ ಉಂಟಾಗದಂತೆ ಜಾಗೃತಿ ವಹಿಸಬೇಕು. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಭೂಮಂಡಲದಲ್ಲಿ ಹಲವು ರೀತಿಯ ವೈಪರೀತ್ಯಗಳು ಕಂಡುಬರುತ್ತಿದ್ದು, ವಾತಾವರಣದ ಅಪ್‌ಡೇಟ್ ಮಾಹಿತಿ ತಿಳಿದುಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡುವಂತಾಗಬೇಕು ಎಂದರು.ಕರಡಿಗೋಡು, ಚೆರಿಯಪರಂಬು ಮತ್ತಿತರ ಕಡೆಗಳಲ್ಲಿ ಮನೆ ಹಾನಿ ಸಂಬಂಧಿಸಿದಂತೆ ಕೆಲಸ ನಿರ್ವಹಿಸಬೇಕು. ಈಗಾಗಲೇ ಆರಂಭಿಸಿರುವ ಕಾಮಗಾರಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವತ್ತ ಗಮನಹರಿಸಬೇಕು ಎಂದರು. ಊರಿನ ಪ್ರಮುಖರಾದ ಮುದ್ದಯ್ಯ ಮಾತನಾಡಿದರು. ಬೆಟ್ಟಗೇರಿ ಗ್ರಾ.ಪಂ. ಅಧ್ಯಕ್ಷರು, ತಾ.ಪಂ.ಇಒ ಶೇಖರ್, ತಹಸೀಲ್ದಾರ್ ಪ್ರವೀಣ್ ಕುಮಾರ್ ಅವರು ಹಲವು ಮಾಹಿತಿ ನೀಡಿದರು. ಪಿಡಿಒಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮುಂಗಾರು ಸಂಬಂಧ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))