ಕನ್ನಡಪ್ರಭವಾರ್ತೆ ತಿಪಟೂರು

ಪ್ರತಿಯೊಬ್ಬ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ವಿಷಮುಕ್ತ ಆಹಾರವನ್ನು ನೀಡುವತ್ತ ತಮಗೆ ತಾವೇ ಪ್ರತಿಜ್ಞೆ ಮಾಡಿಕೊಳ್ಳುವ ಮೂಲಕ ದೇಶದ ಭವಿಷ್ಯದ ಪ್ರಜೆಗಳನ್ನು ಗಟ್ಟಿಮುಟ್ಟಾಗಿ ಹಾಗೂ ಆರೋಗ್ಯಯುತವಾಗಿ ಬೆಳೆಸಬೇಕೆಂದು ಚಿಕ್ಕಬಳ್ಳಾಪುರದ ಸಾಯಿಟ್ರಸ್ಟ್ ಸಂಸ್ಥಾಪಕರಾದ ಮಧುಸೂಧನ ಸಾಯಿ ಅವರು ಹೇಳಿದರು.

ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಶಾಖಾ ಮಠವಾದ ಆಲದಮರ ಮುನಿಯಪ್ಪಸ್ವಾಮಿ ಸುಕ್ಷೇತ್ರ ಆವರಣದಲ್ಲಿ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಿಂದ ಹಮ್ಮಿಕೊಂಡಿದ್ದ ರಾಗಿಯ ರಾಶಿಪೂಜೆ ಹಾಗೂ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದರು. ಅತಿ ಹೆಚ್ಚು ಗುಣಮಟ್ಟದ ಸಾವಯವ ಕೃಷಿ ಆಧಾರಿತ ರಾಗಿಯನ್ನು ತಿಪಟೂರಿನ ಹೊನ್ನವಳ್ಳಿ ಭಾಗದಲ್ಲಿ ಬೆಳೆಯುತ್ತಿದ್ದಾರೆ. ಈಗಾಗಲೇ ತಿಪಟೂರು, ಅರಸೀಕೆರೆ ಕಡೂರು ಸೇರಿದಂತೆ ಅಕ್ಕ ಪಕ್ಕ ತಾಲೂಕುಗಳಲ್ಲಿ ೨,೦೦೦ಕ್ಕೂ ಅಧಿಕ ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ನಮ್ಮ ರಾಜ್ಯ ಸೇರಿದಂತೆ ಪಕ್ಕದ ರಾಜ್ಯಗಳಲ್ಲೂ ಇಲ್ಲಿ ಬೆಳೆದ ರಾಗಿಯಿಂದ ನಾವು ತಯಾರಿಸಿದ ಮಾಲ್ಟ್ ಅನ್ನು ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದು ಈಗಾಗಲೇ ಅದು ಒಂದು ಕೋಟಿ ವಿದ್ಯಾರ್ಥಿಗಳಿಗೆ ತಲುಪುತ್ತಿದೆ . ಮುಂದಿನ ದಿನಗಳಲ್ಲಿ ಇದನ್ನು ಆರರಿಂದ ಎಂಟು ಕೋಟಿ ಮಕ್ಕಳಿಗೆ ವಿತರಿಸುವ ಉದ್ದೇಶವನ್ನು ಹೊಂದಿದ್ದೇವೆ, ಇಂದು ನಾನು ಇಲ್ಲಿಗೆ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ನೆರೆದಿರುವ ರೈತರನ್ನು ಕಂಡರೆ ಮುಂದಿನ ದಿನಗಳಲ್ಲಿ ಆರೋಗ್ಯಕರ ಸಮಾಜವನ್ನು ಕಟ್ಟುತ್ತೇವೆಂಬ ನಮ್ಮ ಸಂಕಲ್ಪ ಈಡೇರುತ್ತದೆ ಎಂದುಕೊಂಡಿದ್ದೇನೆ. ನಮ್ಮ ಮೆಡಿಕಲ್ ಕಾಲೇಜಿನಲ್ಲಿ ೬೦% ರೈತರ ಮಕ್ಕಳೇ ಓದುತ್ತಿದ್ದಾರೆ. ಅವರಿಗೆ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುದ್ದೇನಹಳ್ಳಿಯಲ್ಲಿ ಇರುವ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ ಪಶು ಸಂಗೋಪನೆ ಸಚಿವನಾದಾಗ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ಕೆ ಕೈ ಹಾಕಿದಾಗ ಮುಖ್ಯಮಂತ್ರಿಗಳು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿ ಕ್ಷೀರ ಭಾಗ್ಯವನ್ನು ಜಾರಿಗೆ ತಂದರು. ನಂತರ ಹಾಲಿನ ಜೊತೆ ಪೌಷ್ಟಿಕಾಂಶವುಳ್ಳ ರಾಗಿ ಮಾಲ್ಟ್ ಅನ್ನು ಶ್ರೀಗಳ ನೀಡುತ್ತಿದ್ದಾರೆ. ಈಗ ಅದು ಅಂಗನವಾಡಿ ಮಕ್ಕಳಿಂದ ಹಿಡಿದು ಪ್ರೌಢಶಾಲಾ ಮಕ್ಕಳ ವರೆಗೆ ತಲುಪಿದೆ ಎಂದರು.

ಸಮಾರಂಭದಲ್ಲಿ ಕೊಡಗಿನ ಕೇಂದ್ರೀಯ ವಿದ್ಯಾಲಯದ ಕುಲಪತಿ ಡಾ. ಅಶೋಕ್ ಆಲೂರು, ವೆಂಕಟರಾಮ ರೆಡ್ಡಿ ಪಾಟೀಲ್, ಭಾಗ್ಯ ಲಕ್ಷ್ಮಿ ಕಾರ್ಪೊರೇಷನ್ ಶ್ರೀನಿವಾಸಗುಪ್ತ, ಭೂಮಿತ್ರ ಸಂಸ್ಥೆಯ ನಿರ್ಧೇಶಕ ಗಣೇಶಬಾಬು, ಸುಭಿಕ್ಷಾ ಅಧ್ಯಕ್ಷ ಆನಂದ, ಅಶೀಕ್‌ಕುಮಾರ್, ಸಾವಯವ ರೈತ ಪ್ರಮುಖರಾದ ನಿ. ಪ್ರಾಂಶುಪಾಲ ನಂಜುಂಡಪ್ಪ, ಗೌಡನಕಟ್ಟೆ ಜಗದೀಶ್ ಸೇರಿದಂತೆ ನೂರಾರು ಸಾವಯವ ರೈತರು ಭಾಗವಹಿಸಿದ್ದರು.