ವಿನಾಯಕನಗರದ ಪ್ರಜ್ವಲ್‌ನನ್ನು ಅಪಹರಿಸಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಬಚ್ಚಿಟ್ಟು 1 ಕೋಟಿ ರು. ಹಣ ಸುಲಿಗೆ ಮಾಡುವುದು ಆರೋಪಿಗಳ ಸಂಚಾಗಿತ್ತು ಎಂದು ಚಿಕ್ಕಜಾಲ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿನಾಯಕನಗರದ ಪ್ರಜ್ವಲ್‌ನನ್ನು ಅಪಹರಿಸಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಬಚ್ಚಿಟ್ಟು 1 ಕೋಟಿ ರು. ಹಣ ಸುಲಿಗೆ ಮಾಡುವುದು ಆರೋಪಿಗಳ ಸಂಚಾಗಿತ್ತು ಎಂದು ಚಿಕ್ಕಜಾಲ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಪ್ರಜ್ವಲ್‌ನನ್ನು ಜೀವಂತವಾಗಿ ಬಿಟ್ಟರೆ ತಮಗೆ ಭವಿಷ್ಯದಲ್ಲಿ ಕಂಟಕವಾಗಲಿದೆ. ಹೀಗಾಗಿ ಆತನ ಕೊಂದು ಬಳಿಕ ಮೃತದೇಹವನ್ನು ರಹಸ್ಯವಾಗಿಟ್ಟು ಹಣ ಸುಲಿಗೆಗೆ ಆರೋಪಿ ಭಾಸ್ಕರ್ ರೆಡ್ಡಿ ದುರಾಲೋಚನೆ ಮಾಡಿದ್ದ. ಇದಕ್ಕೆ ಆತನ ಸ್ನೇಹಿತ ಏಳುಕೊಂಡಲ ಸಾಥ್ ಕೊಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.
ಪೂರ್ವಯೋಜಿತದಂತೆ ಬುಧವಾರ ಸಂಜೆ 6.45ರ ವೇಳೆ ಅಪಹರಿಸಿ ರಾತ್ರಿ 9.45ರ ಹೊತ್ತಿಗೆ ಪ್ರಜ್ವಲ್‌ನನ್ನು ಭೀಬತ್ಸವಾಗಿ ಆರೋಪಿಗಳು ಹತ್ಯೆ ಮಾಡಿದ್ದಾರೆ. ಆದರೆ ಮನೆಯಲ್ಲಿ ಮಗ ಕಾಣದೆ ಹೋದಾಗ ಆತಂಕಗೊಂಡು ಪ್ರಜ್ವಲ್‌ಗೆ ಆತನ ತಾಯಿ ಹಾಗೂ ಅಣ್ಣ ಹುಡುಕಾಟ ನಡೆಸಿದ್ದಾರೆ. ಪಟಾಕಿ ತರುವುದಾಗಿ ಹೇಳಿ ಭಾಸ್ಕರ್ ಜತೆ ಕಾರಿನಲ್ಲಿ ಪ್ರಜ್ವಲ್ ಹೋಗಿದ್ದನ್ನು ಸ್ಥಳೀಯ ವ್ಯಕ್ತಿ ಹೇಳಿದ್ದರು. ತಕ್ಷಣವೇ ರಾತ್ರಿ 9.30ಕ್ಕೆ ಭಾಸ್ಕರ್‌ಗೆ ಮೃತನ ತಾಯಿ, ಅಣ್ಣ ಹಾಗೂ ಸ್ಥಳೀಯ ವ್ಯಕ್ತಿ ಸೇರಿ ಮೂವರು ನಿರಂತರವಾಗಿ ಕರೆ ಮಾಡಿದ್ದಾರೆ. ಆದರೆ ಅವರ ಕರೆಗಳನ್ನು ಸ್ವೀಕರಿಸದೆ ತನ್ನ ಮೊಬೈಲ್ ಅನ್ನು ರೆಡ್ಡಿ ಸ್ವಿಚ್ಡ್ ಆಫ್ ಮಾಡಿದ್ದ.ಅದೇ ಹೊತ್ತಿಗೆ ಪ್ರಜ್ವಲ್ ಮೇಲೆ ಭೀಕರವಾಗಿ ಆರೋಪಿಗಳು ಹಲ್ಲೆ ನಡೆಸಿ ಕೊಲೆ ಮಾಡುತ್ತಿದ್ದರು. ಈ ಕೃತ್ಯ ಎಸಗಿದ ಬಳಿಕ ರಾತ್ರಿ 10.30ಕ್ಕೆ ಆತನ ಮೊಬೈಲ್ ಆನ್ ಆಗಿದೆ. ಕೂಡಲೇ ಆತನಿಗೆ ಮೃತನ ಕುಟುಂಬದವರಿಂದ ಕರೆಗಳು ಬಂದಿವೆ. ಆಗ ಕರೆ ಸ್ವೀಕರಿಸಿ ತನಗೇನು ಗೊತ್ತಿಲ್ಲ ಎಂದಿದ್ದಾನೆ. ಮೃತನ ತಾಯಿ ಜತೆ ಮಾತನಾಡುತ್ತಲೇ ಕಾರನ್ನು ವೇಗವಾಗಿ ಭಾಸ್ಕರ್ ಚಲಾಯಿಸುತ್ತಿದ್ದ. ಆಗ ಹೊಸಹಳ್ಳಿ ಬಳಿ ಎರಡು ಬೈಕ್‌ಗಳಿಗೆ ಕಾರು ಗುದ್ದಿಸಿದ್ದ. ಇದಾದ ನಂತರ ಸ್ಪಲ್ಪ ದೂರದಲ್ಲಿ ರಸ್ತೆಯಲ್ಲಿ ಹಂಪ್ಸ್ ನೋಡದೆ ಕಾರನ್ನು ಭಾಸ್ಕರ್ ಚಲಾಯಿಸಿದ್ದಾನೆ. ಈ ಹಂತದಲ್ಲಿ ಚಾಲಕನ ನಿಯಂತ್ರನ ತಪ್ಪಿ ಹಂಪ್ಸ್‌ನಿಂದ ಜಿಗಿದು ರಸ್ತೆ ಬದಿಯ 3 ಕಾರುಗಳಿಗೆ ಭಾಸ್ಕರ್ ಗುದ್ದಿದೆ. ಈ ಸರಣಿ ಅಪಘಾತದಿಂದ ಕೆರಳಿದ ಸ್ಥಳೀಯರು, ಭಾಸ್ಕರ್‌ನನ್ನು ಹಿಡಿದು ಥಳಿಸಿದ್ದಾರೆ. ಕಾರು ಪರಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ಮೂಲಗಳು ವಿವರಿಸಿವೆ.
ಭಾಸ್ಕರ್ ಮೇಲೆ ಬಾಲಕನಕುಟುಂಬಕ್ಕೆ ಅತಿವಿಶ್ವಾಸ
ತಮ್ಮ ಮಗ ಭಾಸ್ಕರ್ ಜೊತೆ ಹೋಗಿದ್ದಾನೆ ಎಂದು ತಿಳಿದಾಗ ಮೃತನ ಪೋಷಕರು ನಿರಾಳರಾಗಿದ್ದರು. ವಿದೇಶದಲ್ಲಿ ಓದಿ ಬಂದಿದ್ದ ಆತನನ್ನು ಮೃತನ ಕುಟುಂಬದವರು ಸಜ್ಜನ ವ್ಯಕ್ತಿ ಎಂದೇ ಭಾವಿಸಿದ್ದರು. ಈ ವಿಶ್ವಾಸದಿಂದಲೇ ಆತನ ಜತೆ ಮಗ ಒಡನಾಟಕ್ಕೆ ಅವರು ನಿರ್ಬಂಧಿಸಿರಲಿಲ್ಲ. ಆತನಿಂದ ಮಗನಿಗೆ ಯಾವುದೇ ಅಪಾಯವಿಲ್ಲ ಎಂದಿದ್ದರು. ಹೀಗಾಗಿ ಆ ದಿನ ತಡ ರಾತ್ರಿವರೆಗೆ ಭಾಸ್ಕರ್ ದಾರಿಯನ್ನು ಅವರು ಕಾದಿದ್ದರು ಎಂದು ಮೂಲಗಳು ಹೇಳಿವೆ.ಪ್ರಜ್ವಲ್ ಹತ್ಯೆಗೂ ಮುನ್ನಮತ್ತೊಬ್ಬ ಬಾಲನಿಗೆ ಸ್ಕೆಚ್
ಪ್ರಜ್ವಲ್ ಹತ್ಯೆಗೂ ಮುನ್ನ ಅದೇ ಏರಿಯಾದ ಶ್ರೀಮಂತ ಕುಟುಂಬದ ಮತ್ತೊಬ್ಬ ಬಾಲಕನ ಅಪಹರಣಕ್ಕೆ ಭಾಸ್ಕರ್ ರೆಡ್ಡಿ ಸಂಚು ವಿಫಲವಾಗಿತ್ತು ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ ಆ ಬಾಲಕನ ಚಲನವಲನದ ಮೇಲೆ ನಿಗಾವಹಿಸಿ ಅಪಹರಿಸಲು ಆತ ಮುಂದಾಗಿದ್ದ. ಆದರೆ ಕೊನೆ ಕ್ಷಣದಲ್ಲಿ ಆತನ ಸಂಚು ತಪ್ಪಿತು. ಹೀಗಾಗಿ ತನ್ನೊಂದಿಗೆ ಆತ್ಮೀಯವಾಗಿದ್ದ ಪ್ರಜ್ವಲ್ ಮೇಲೆ ಭಾಸ್ಕರ್ ರೆಡ್ಡಿ ಕಾಕದೃಷ್ಟಿ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.