ಕೇಂದ್ರ ಸರ್ಕಾರವು ಪಿಎಂ-ಕಿಸಾನ್‌ ಯೋಜನೆಯಡಿ ಹಣ ಪಡೆಯುವ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಹೀಗಾಗಿ ಕಂತು ಬಿಡುಗಡೆಯಾಗುವ ಮುನ್ನ ಬಾಕಿ ಇರುವ ರೈತರು ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ನಿಧಿ (ಪಿಎಂ-ಕಿಸಾನ್‌) ಯೋಜನೆಯಡಿ 24ನೇ ಕಂತಿನ ಹಣ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ ಕುಷ್ಟಗಿ ತಾಲೂಕಿನಲ್ಲಿ ಸುಮಾರು 70 ಸಾವಿರ ರೈತರ ಪೈಕಿ 35,793 ರೈತರ ಇ-ಕೆವೈಸಿ ಪ್ರಕ್ರಿಯೆ ಬಾಕಿ ಉಳಿದಿದೆ. ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳಿಗೆ ಕಂತಿನ ಹಣ ದೊರೆಯದೇ ಇರುವ ಸಾಧ್ಯತೆ ಇರುವುದರಿಂದ ರೈತರು ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.

ಕೇಂದ್ರ ಸರ್ಕಾರವು ಪಿಎಂ-ಕಿಸಾನ್‌ ಯೋಜನೆಯಡಿ ಹಣ ಪಡೆಯುವ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಹೀಗಾಗಿ ಕಂತು ಬಿಡುಗಡೆಯಾಗುವ ಮುನ್ನ ಬಾಕಿ ಇರುವ ರೈತರು ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ.

ಹೋಬಳಿವಾರು ಬಾಕಿ: ಕುಷ್ಟಗಿ ಹೋಬಳಿಯಲ್ಲಿ 10,918, ಹನುಮಸಾಗರದಲ್ಲಿ 10,792, ಹನಮನಾಳದಲ್ಲಿ 7,383 ಹಾಗೂ ತಾವರಗೇರಾ ಹೋಬಳಿಯಲ್ಲಿ 6,700 ರೈತರ ಇ-ಕೆವೈಸಿ ಬಾಕಿ ಇದೆ. ನಾಲ್ಕು ಹೋಬಳಿಗಳಲ್ಲಿ ಒಟ್ಟು 35,793 ರೈತರು ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ.

ಮೊಬೈಲ್‌ನಲ್ಲೇ ಮಾಡಿಕೊಳ್ಳಬಹುದು: ರೈತರು ಮುಖ ದೃಢೀಕರಣ (ಫೇಸ್‌ ಆಥೆಂಟಿಕೇಷನ್‌) ಸೌಲಭ್ಯ ಹೊಂದಿರುವ ಸಂಬಂಧಿತ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಮೊಬೈಲ್‌ನಲ್ಲೇ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದು. ಮೊಬೈಲ್‌ ಮೂಲಕ ಮಾಡಲು ಸಾಧ್ಯವಾಗದವರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ), ಗ್ರಾಮ ಒನ್‌ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್‌ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು.

ಖಾತೆಗೆ ನೇರ ಜಮೆ: ಪಿಎಂ-ಕಿಸಾನ್‌ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 24ನೇ ಕಂತಿನ ಸಹಾಯಧನ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಬಯೋಮೆಟ್ರಿಕ್‌ ಅಥವಾ ಮುಖ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಮಾತ್ರ ಕಂತಿನ ಹಣ ಲಭ್ಯವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.ಇ-ಕೆವೈಸಿ ಮಾಡಿಸಬೇಕು: ಇ-ಕೆವೈಸಿ ಮಾಡಿಸಿಕೊಳ್ಳಲು ರೈತರು ಕೊನೆಯ ಕ್ಷಣದ ವರೆಗೆ ಕಾಯದೆ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇ-ಕೆವೈಸಿ ಬಾಕಿ ಉಳಿಸಿಕೊಂಡರೆ ಪಿಎಂ-ಕಿಸಾನ್‌ ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ತೊಂದರೆಯಾಗಬಹುದು. ರೈತರು ಸ್ವತಃ ಮೊಬೈಲ್‌ ಮೂಲಕ ಅಥವಾ ಸಮೀಪದ ಸಿಎಸ್‌ಸಿ, ಗ್ರಾಮ ಒನ್‌ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕುಷ್ಟಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಹೇಳಿದರು.