ಸಾರಾಂಶ
-ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಸಲಹೆ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ18 ವರ್ಷದ ಒಳಗಡೆ ಇರುವ ಎಳೆ ವಯಸ್ಸಿನ ಹೆಣ್ಣು ಮಕ್ಕಳನ್ನು ದಾಂಪತ್ಯಕ್ಕೆ ದೂಡಬೇಡಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಸಲಹೆ ನೀಡಿದರು.
ನೆಹರು ನಗರದ ಆರೋಗ್ಯ ಕೇಂದ್ರದಲ್ಲಿ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಮಾಹಿತಿ ನೀಡಿದ ಅವರು ಎಳೆ ವಯಸ್ಸಿಗೆ ಮದುವೆ ಮಾಡಿ ಅಪಾಯ ತಂದುಕೊಳ್ಳಬೇಡಿ. ಅಂತರದ ಹೆರಿಗೆ, ಕುಟುಂಬ ಯೋಜನೆ, ಚಿಕ್ಕ ಕುಟುಂಬದ ಆದರ್ಶ ಪಾಲಿಸುವುದರ ಕಡೆ ಗಮನ ಕೊಡಿ ಎಂದರು.ಬಾಲಿಕಾ ಗರ್ಭಧಾರಣೆ ನಿಯಂತ್ರಿಸಲು ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ನಿಲ್ಲಿಸದಿದ್ದಲ್ಲಿ ತಾಯಿ ಮರಣ, ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ. ತೊಡಕಿನ ಗರ್ಭಿಣಿಯರು ಆಸ್ಪತ್ರೆಯಲ್ಲಿ ಮೂರು ಬಾರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪರೀಕ್ಷೆಗೆ ಒಳಪಟ್ಟರೆ ಒಟ್ಟು ರು.300 ಫಲಾನುಭವಿಯ ಬ್ಯಾಂಕ್ ಖಾತೆಗೆ ಸೇವಾ ಸಿಂಧು ಪೋರ್ಟಲ್‍ನಿಂದ ಅರ್ಜಿ ಸಲ್ಲಿಸಿದವರಿಗೆ ಜಮಾ ಮಾಡಲಾಗುವುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಸರ್ಕಾರದ ಯೋಜನೆಗಳು ಗ್ರಾಮಾಂತರ ಪ್ರದೇಶದ ಕಟ್ಟ ಕಡೆಯ ತಾಯಿಗೂ ತಲುಪಿಸುವಲ್ಲಿ ಜನನಿ ಸುರಕ್ಷಾ ಯೋಜನೆ, ಜೆಎಸ್‍ಎಸ್‍ಕೆ ಉಪಯುಕ್ತವಾಗಿವೆ. ಗರ್ಭಿಣಿ ತಾಯಂದಿರು ಪ್ರತಿ ತಿಂಗಳು 9ನೇ ತಾರೀಖು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಟ್ಟು ಇದರ ಪ್ರಯೋಜನ ಪಡೆಯಬೇಕು ಎಂದರು.ಮಧುಮೇಹ, ರಕ್ತದೊತ್ತಡ, ಅಸ್ತಮಾ, ಮೊದಲ ಹೆರಿಗೆ ಸಿಜೇರಿಯನ್ ಆದವರು, ಅವಳಿ ಮಕ್ಕಳ ಹೊಂದಿದವರು ಪ್ರತಿ ತಿಂಗಳು 24ನೇ ತಾರೀಖು ವಿಶೇಷ ಗರ್ಭಿಣಿಯರ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ರಕ್ತಹೀನತೆ ತಡೆಯಲು ಕಬ್ಬಿಣಾಂಶದ ಮಾತ್ರೆ ಪಡೆದು ತಾಯಂದಿರು ಆರೋಗ್ಯವಂತ ಮಗುವನ್ನು ಹೆತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ವನಜಾಕ್ಷಿ ಮಾತನಾಡಿ, ಗರ್ಭಿಣಿ ತಾಯಂದಿರು ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ ದಾಖಲೆಗಳನ್ನು ಒಂದೆಡೆ ಜೋಪಾನವಾಗಿ ಇಟ್ಟುಕೊಂಡು ಪ್ರತಿದಿನ ಮಧ್ಯಾಹ್ನ ಎರಡು ತಾಸು ಎಡ ಮೊಗ್ಗುಲಲ್ಲಿ ಮಲಗುವುದರ ಮೂಲಕ ಗರ್ಭದಲ್ಲಿ ಬೆಳೆಯುವ ಮಗುವಿಗೂ ಕೂಡ ವಿರಾಮ ಸಿಗುವಂತೆ ಅವಕಾಶ ಮಾಡಿಕೊಡಬೇಕು ಎಂದರು.ಉಪ್ಪು ನೀರಿನಿಂದ ಸ್ವಚ್ಛಗೊಳಿಸಿ ಹಸಿ ತರಕಾರಿ ಹಾಗೂ ಮೊಳಕೆ ಕಾಳುಗಳು ಮತ್ತು ದಾವಣಗೆರೆ ಮಿಕ್ಸ್ ಶೇಂಗಾ, ಬೆಲ್ಲ, ಹುರಿಗಡಲೆ, ವಡ್ರಾಗಿ ಹಿಟ್ಟು, ಸಮ ಪ್ರಮಾಣದಲ್ಲಿ ಬೆರೆಸಿ ಗಂಜಿ ಇಲ್ಲವೇ ಉಂಡೆ ತಯಾರಿಸಿ ಪ್ರತಿದಿನ ಬಳಕೆ ಮಾಡಿದರೆ ಕೆಂಪು ರಕ್ತ ಕಣಗಳ ವೃದ್ಧಿಯಾಗುವುದಲ್ಲದೆ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು. ಫಾರ್ಮಸಿ ಅಧಿಕಾರಿ ಆಸಿಯಾ, ಪ್ರಯೋಗಶಾಲಾ ತಂತ್ರಜ್ಞೆ ಪೂರ್ಣಿಮಾ, ಶುಶ್ರೂಷಾಣಾಧಿಕಾರಿ ಮನು, ಆಶಾ ಕಾರ್ಯಕರ್ತೆಯರಾದ ಭಾಗ್ಯಮ್ಮ, ಕೆಂಚಮ್ಮ ಲಿಖಿತಾ ಇದ್ದರು.
----------------ಪೋಟೋ: ಚಿತ್ರದುರ್ಗ ನೆಹರು ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿದರು.
---------ಫೋಟೋ:9 ಸಿಟಿಡಿ6