ಧರ್ಮ ಸಂಸ್ಕೃತಿ ರಕ್ಷಣೆಗೆ ಸಜ್ಜಾಗಬೇಕಿದೆ: ಕಾಗೇರಿ

| Published : Jul 10 2024, 12:36 AM IST

ಸಾರಾಂಶ

ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಷ್ಟ್ರ ರಕ್ಷಣೆಯ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು. ಸವಾಲನ್ನು ಸ್ವೀಕರಿಸಿ ಧರ್ಮ, ಸಂಸ್ಕೃತಿ ರಕ್ಷಣೆಗೆ ಸಜ್ಜಾಗಬೇಕಾಗಿದೆ ಎಂದು ಸಂಸದ ಕಾಗೇರಿ ತಿಳಿಸಿದರು.

ಭಟ್ಕಳ: ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದ ವಡೇರ ಸ್ವಾಮೀಜಿಯವರು ದೇವಸ್ಥಾನದ ಇತಿಹಾಸವುಳ್ಳ ಸ್ವರ್ಣಗೌರಿ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ನಂತರ ಆಶೀರ್ವಚನ ನೀಡಿದ ಅವರು, ಅಳ್ವೇಕೋಡಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ದೇವರ ಇಚ್ಛೆಯಂತೆ ಆಷಾಢ ಮಾಸದಲ್ಲಿಯೇ ಕಾರ್ಯಕ್ರಮ ನಡೆದಿದೆ. ಇಲ್ಲಿನ ಆಡಳಿತ ಮಂಡಳಿಯವರ ಶ್ರಮ, ಕಾರ್ಯಕರ್ತರ ಉತ್ಸಾಹ ಕಾರ್ಯಕ್ರಮಕ್ಕೆ ಮೆರುಗು ನೀಡಿದೆ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ೧೦ ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿರುವುದು ಧಾರ್ಮಿಕ ಶ್ರದ್ಧಾಭಕ್ತಿಯ ದ್ಯೋತಕವಾಗಿದೆ. ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ರಾಷ್ಟ್ರ ರಕ್ಷಣೆಯ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು. ಸವಾಲನ್ನು ಸ್ವೀಕರಿಸಿ ಧರ್ಮ ಸಂಸ್ಕೃತಿ ರಕ್ಷಣೆಗೆ ಸಜ್ಜಾಗಬೇಕಾಗಿದೆ ಎಂದರು.

ಸನಾತನ ಹಿಂದೂ ಧರ್ಮವು ಋಷಿಮುನಿಗಳ ತಪ್ಪಸ್ಸಿನ ಫಲವಾಗಿದೆ. ನಮ್ಮ ಮಠ- ಮಂದಿರಗಳು ಧಾರ್ಮಿಕತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಹಿಂದೆ ಧಾರ್ಮಿಕವಾಗಿ ಅನೇಕ ತೊಂದರೆಗಳನ್ನು ಎದುರಿಸಿದ್ದನ್ನು ಸ್ಮರಿಸಿದರು.

ಸ್ವರ್ಣಗೌರಿ ಪುಸ್ತಕದ ಸಂಪಾದಕ ಶ್ರೀಧರ ಶೇಟ್ ಅವರು ಪುಸ್ತಕ ಪರಿಚಯ ಮಾಡಿದರು. ಮಾಜಿ ಶಾಸಕ ಸುನಿಲ್ ನಾಯ್ಕ, ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಹನುಮಂತ ನಾಯ್ಕ, ಅರವಿಂದ ಪ್ಯೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ದ್ಯೆಮನೆ, ನಾಮಧಾರಿ ಸಮಾಜದ ಅಧ್ಯಕ್ಷ ಅರ್.ಕೆ. ನಾಯ್ಕ, ಉದ್ಯಮಿ ಅಶೊಕ ಪ್ಯೆ, ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೊವಿಂದ ನಾಯ್ಕ, ಮಾರಿ ಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಮೊಗೇರ. ಚಾರ್ಟರ್ಡ್‌ ಅಕೌಂಟೆಂಟ್ ಯೋಗೇಶ ಕಾಮತ್, ಮೊಗೇರ ಸಮಾಜದ ಆಧ್ಯಕ್ಷ ಅಣ್ಣಪ್ಪ ಮೊಗೇರ, ದೇವಸ್ಥಾನ ಹಾಗೂ ಮಾರಿಜಾತ್ರಾ ಸಮಿತಿ ಸದಸ್ಯರು, ದೇವಸ್ಥಾನದ ಅರ್ಚಕ ವೃಂದ ಉಪಸ್ಥಿತರಿದ್ದರು. ಶ್ರೀಗಳ ಪಾದಪೂಜೆಯನ್ನು ದೇವಾಲಯದ ಧರ್ಮದರ್ಶಿ ಮಂಡಳದಿಂದ ನೆರವೇರಿಸಲಾಯಿತು. ಅರ್ಚಕ ವೃಂದ ವೇದಘೋಷ ಮಾಡಿದರು. ಧರ್ಮದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು.