ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶಂಕಿತ ಡೆಂಘೀ ಜ್ವರದಿಂದ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆದರೆ, ಆರೋಗ್ಯ ಇಲಾಖೆ ಮಾತ್ರ ಇದನ್ನು ಈವರೆಗೆ ದೃಢಪಡಿಸಿಲ್ಲ.ರಿಪ್ಪನ್ ಪೇಟೆಯ ಮಹಿಳೆಯೋರ್ವರು ಮಂಗಳವಾರ ಮೃತಪಟ್ಟರೆ, ಶಿರಾಳಕೊಪ್ಪದಲ್ಲಿ ಒಂಬತ್ತು ತಿಂಗಳ ಮಗುವೊಂದು ಶನಿವಾರ ಮೃತಪಟ್ಟಿದೆ. ಇಬ್ಬರೂ ಕೂಡ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ರಿಪ್ಪನ್‍ಪೇಟೆಯ ರಶ್ಮಿ ಆರ್.ನಾಯಕ್ (42) ಮಂಗಳವಾರ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಿಪ್ಪನ್ ಪೇಟೆಯ ನಾಯಕ್ ಫರ್ಟಿಲೈಸರ್ಸ್ ಮಾಲೀಕ ರಾಮದಾಸ್ ನಾಯಕ್ ಪುತ್ರ ರಾಘವೇಂದ್ರ ನಾಯಕ್ ಪತ್ನಿ ರಶ್ಮಿ ಆರ್.ನಾಯಕ ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಶಿವಮೊಗ್ಗದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.ರಶ್ಮಿ ಆರ್.ನಾಯಕ್ ಅವರು ಇತರೆ ಕಾಯಿಲೆಯಿಂದ ಕೂಡ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇವರಿಗೆ ಡೆಂಘಿ ಜ್ವರ ಇರುವುದು ದೃಢಪಟ್ಟಿತ್ತು ಎಂದು ಖಾಸಗಿ ಆಸ್ಪತ್ರೆ ಮೂಲಗಳು ತಿಳಿಸಿದ್ದರೆ, ಆರೋಗ್ಯ ಇಲಾಖೆ ಮಾತ್ರ ಡೆಂಘಿಯಿಂದ ಈ ಸಾವು ಸಂಭವಿಸಿದೆ ಎಂಬುದನ್ನು ದೃಢಪಡಿಸಿಲ್ಲ.
ಡೆಂಘೀ ಜ್ವರದಿಂದಲೇ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ ಎಂದು ಡಿಎಚ್‌ಒ ನಟರಾಜ್ ತಿಳಿಸಿದ್ದಾರೆ.ರಶ್ಮಿ ಆರ್.ನಾಯಕ್ ಅವರಿಗೆ ಪತಿ ಮತ್ತು ಇಬ್ಬರು ಪುತ್ರರು ಇದ್ದಾರೆ.9 ತಿಂಗಳ ಮಗು ಡೆಂಘೀಗೆ ಬಲಿ?
ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದ 9 ತಿಂಗಳ ಮಗು ಶನಿವಾರ ಮೃತಪಟ್ಟಿರುವ ಘಟನೆ ತಡವಾಗಿ ತಿಳಿದು ಬಂದಿದೆ.ಜು.2ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು ತಾಲೂಕು ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಈ ಪ್ರಕರಣದಲ್ಲಿ ಕೂಡ ತಾಲೂಕು ಆರೋಗ್ಯಾಧಿಕಾರಿಗಳು ಡೆಂಘಿಯಿಂದ ಸಾವು ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.ಮಗುವಿನ ಮನೆಗೆ ವಿಜಯೇಂದ್ರ ಭೇಟಿ:
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ. ವೈ. ವಿಜಯೇಂದ್ರ ಅವರು ಮೃತ ಮಗುವಿನ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.ಇದೇ ವೇಳೆ ತಾಲೂಕು ವೈದ್ಯಾಧಿಕಾರಿ ಅವರನ್ನು ತಾಲೂಕಿನಲ್ಲಿ ಡೆಂಘೀ ಕಾಯಿಲೆ ಉಲ್ಬಣಗೊಂಡಿದ್ದು, ತಕ್ಷಣ ನಿಯಂತ್ರಣಕ್ಕೆ ತ್ವರಿತ ಗತಿಯಲ್ಲಿ ಕ್ರಮ ಕೈಗೊಂಡು ಆರೋಗ್ಯ ಇಲಾಖೆ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿರೇಂದ್ರ ಪಾಟೀಲ್, ನಗರಾಧ್ಯಕ್ಷ ಚನ್ನವೀರ ಶೆಟ್ಟರ್, ಉಪಾಧ್ಯಕ್ಷರಾದ ನವೀದ್, ಸಾಧಿಕ, ಕೆಜಿಎನ್ ಅಯೂಬ್ , ಖಾನಿ ಅಯುಬ್, ಮಕಬೂಲ್ ಸಾಬ್ ಉಪಸ್ಥಿತರಿದ್ದರು.