ಸಾರಾಂಶ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸಮಾಜದ ಎಲ್ಲ ಶಾಸಕರು ನಾಳೆಯೇ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಸರ್ಕಾರ ಅವರಪ್ಪನ ತಲೆಯಿಂದ ಮೀಸಲಾತಿ ಕೊಡುತ್ತದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸಮಾಜದ ಎಲ್ಲ ಶಾಸಕರು ನಾಳೆಯೇ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಸರ್ಕಾರ ಅವರಪ್ಪನ ತಲೆಯಿಂದ ಮೀಸಲಾತಿ ಕೊಡುತ್ತದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.ಕಾಗವಾಡ ತಾಲೂಕಿನ ಉಗಾರ ಖುರ್ದದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ನಾನು ರಾಜೀನಾಮೆ ಕೊಡುತ್ತೇನೆ. ಅಧಿಕಾರ ಹೋದರೆ ಹೋದಿತು. ಸಮಾಜದ ಸಲುವಾಗಿ ಅಧಿಕಾರ ಕಳೆದುಕೊಳ್ಳಲು ಸಿದ್ಧ ಎಂದು ಘೋಷಿಸಿದರು.
ಹಾಲು, ನೀರಿನ ದೃಷ್ಟಾಂತ ಪ್ರಸ್ತಾಪಿಸಿ ರಾಜೀನಾಮೆ ಕೊಡುತ್ತೇನೆ ಎಂದ ಶಾಸಕ ಕಾಗೆ ಅವರು, ರಾಜನೊಬ್ಬ ತನ್ನ ಹುಟ್ಟುಹಬ್ಬಕ್ಕೆ ಹಾಲು ಸಂಗ್ರಹಿಸಬೇಕೆಂದು ನಿರ್ಧಾರ ಮಾಡಿದ. ಎಲ್ಲರಿಗೂ ಹಾಲು ತಂದು ಬ್ಯಾರಲ್‌ಗೆ ಸುರಿಯಿರಿ ಎಂದು ಹೇಳಿದ. ಅದರಲ್ಲಿ ನಾನೊಬ್ಬನೇ ಒಂದು ತಂಬಿಗೆ ನೀರು ಹಾಕಿದರೆ ಯಾರಿಗೂ ಗೊತ್ತಾಗಲ್ಲ ಎಂದುಕೊಂಡೆ. ನನ್ನಂತೆಯೇ ಇತರರು ಭಾವಿಸಿ ಹಾಲಿನ ಬದಲು ನೀರು ಮಾತ್ರ ಹಾಕಿದರು. ರಾಜ ಬಂದು ನೋಡುವಷ್ಟರಲ್ಲಿ ಅಲ್ಲಿ ಹಾಲಿನ ಬದಲು ನೀರು ಮಾತ್ರ ಇತ್ತು. ಹಾಗೇ ಪಂಚಮಸಾಲಿ ಹೋರಾಟದ ಕತೆ ಆಗಿದೆ. ನಾನೊಬ್ಬ ಪಂಚಮಸಾಲಿ ಶಾಸಕ ಹೀಗೆ ಮಾಡಿದರೆ ಏನಾಗುತ್ತದೆ ಎಂದು ಎಲ್ಲ ಶಾಸಕರ ತಲೆಯಲ್ಲಿದೆ ಎಂದರು.ಇತಿಹಾಸದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ನಾವು ಸಮುದಾಯಕ್ಕಾಗಿ ರಾಜೀನಾಮೆ ನೀಡೋಣ. ರಾಜ್ಯದಿಂದ ಮೀಸಲಾತಿ ಕುರಿತು ಕೇಂದ್ರಕ್ಕೆ ಮನವಿ ಮಾಡಲಿ. ಅಲ್ಲಿ ನಮ್ಮ ಸಂಸದರಿದ್ದಾರೆ. ಒಟ್ಟಿನಲ್ಲಿ ಸಮುದಾಯಕ್ಕೆ ನ್ಯಾಯ ಸಿಗುವುದಾದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.