ಮನ್ ಕೀ ಬಾತ್‌ನಲ್ಲಿ ಬಾಗಲಕೋಟೆ ಗೊಂದಳಿಕಲಾವಿದ ವೆಂಕಪ್ಪ ಸ್ಮರಿಸಿದ ಪ್ರಧಾನಿ ಮೋದಿ

| Published : Feb 26 2024, 01:30 AM IST

ಸಾರಾಂಶ

ಪ್ರತಿ ತಿಂಗಳ ಕೊನೆ ವಾರದಲ್ಲಿ ನಡೆಯುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗುತೇಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿ ಅವರ ಕಲಾ ಸೇವೆ ಸ್ಮರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರತಿ ತಿಂಗಳ ಕೊನೆ ವಾರದಲ್ಲಿ ನಡೆಯುವ ಮನ್ ಕೀ ಬಾತ್‌ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗುತೇಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿ ಅವರ ಕಲಾ ಸೇವೆ ಸ್ಮರಿಸಿದ್ದಾರೆ.

ವಂಶ ಪರಂಪರೆಯ ಗೊಂದಳಿ ಕಲಾವಿದನಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೊಗಳಿಕೆ ಸಹಜವಾಗಿ ಸಂದ ಗೌರವವಾಗಿದೆ. 80 ವರ್ಷದ ವೃದ್ಧ ಗೊಂದಳಿ ಕಲಾವಿದನ ಹೆಸರು ಸಹಿತ ಹೊಗಳಿದ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಹೆಸರು ಪ್ರಸ್ತಾಪಮಾಡಿ, 150ಕ್ಕೂ ಹೆಚ್ಚು ಕಥೆಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಹಾಡು ಹಾಡಿರುವ ವೆಂಕಪ್ಪ ಅವರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ರಕ್ಷಿಸಲು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಯಾವುದೇ ಶುಲ್ಕ ಪಡೆಯದೇ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಇವರ ಸೇವೆ ಶ್ಲಾಘನೀಯ ಎಂದು ಮನ್ ಕಿ ಬಾತ್‌ನಲ್ಲಿ ಕಲಾವಿದನ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ

ಚರಂತಿಮಠರಿಂದ ಶುಭಾಶಯ:

ಭಾರತೀಯ ಸಂಸ್ಕೃತಿ ಪರಂಪರೆಯನ್ನು ರಕ್ಷಿಸಲು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬಾಗಲಕೋಟೆಯ ಡಾ.ವೆಂಕಪ್ಪ ಅಂಬಾಜಿ ಸುಗತೇಕರ್ ಕೂಡ ಒಬ್ಬರು.

ಭಾನುವಾರದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇವರನ್ನು ನೆನಪಿಸಿಕೊಂಡಿರುವುದು ಬಾಗಲಕೋಟೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಕಲಾವಿದ ಡಾ.ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಶುಭವಾಗಲಿ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.