ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಲೋಕಸಭಾ ಚುನಾವಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ನಿಗದಿಯಾಗಿದ್ದು ಮೊದಲ ಹಂತದಲ್ಲೇ ಶನಿವಾರ ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಗೆ ಆಗಮಿಸುತ್ತಿರೋದು ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಕಲಬುರಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಹಾಗೂ ರಾಜ್ಯಸಭೆ ವಿಪಕ್ಷ ನಾಯಕರೂ ಆಗಿರುವ ಡಾ. ಖರ್ಗೆ ಅವಕಾಶ ಸಿಕ್ಕಾಗೆಲ್ಲಾ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತ ಮಾತಲ್ಲೇ ಕುಟುಕುವವರು.ಇವೆಲ್ಲದರ ಹಿನ್ನೆಲೆಯಲ್ಲೇ ಇದೀಗ ನರೇಂದ್ರ ಮೋದಿ ಲೋಕ ಸಮರಕ್ಕೆ ಮುಹೂರ್ತ ನಿಗದಿಗೂ ಮುನ್ನವೇ ಖರ್ಗೆ ತವರು ಕಲಬುರಗಿಯಿಂದಲೇ ಪಾರ್ಲಿಮೆಂಟ್ ಚುನಾವಣೆಯ ಪಾಂಚಜನ್ಯ ಮೊಳಗಿಸಲು ಮುಂದಾಗಿದ್ದಾರೆ.
ಲೋಕ ಸಮರ ಹಿನ್ನೆಲೆಯಲ್ಲಿ ಮೋದಿ ಕಲಬುರಗಿಗೆ ಭೇಟಿ ನೀಡುತ್ತಿರುವ ಈ ಭೇಟಿಯನ್ನು 2024ರ ಮಹಾಭಾರತ ಸಂಗ್ರಾಮದ ಅತಿ ಮಹತ್ವದ ಭೇಟಿ ಎಂದು ವಿಶ್ಲೇಷಿಸಲಾಗುತ್ತಿದೆ.ಪಾರ್ಲಿಮೆಂಟ್ ಚುನಾವಣೆ ಘೋಷಣೆಯ ಹೊಸ್ತಿಲಲ್ಲೇ ಕರ್ನಾಟಕದ ಕಲಬುರಗಿಗೆ ಮೋದಿ ನೀಡುತ್ತಿರುವ ಭೇಟಿಯನ್ನು ರಾಜಕೀಯವಾಗಿ ಪರಾಮರ್ಶಿಸಲಾಗುತ್ತಿದೆ.
ಕಲಬುರಗಿಯಲ್ಲಿ ರೋಡ್ ಷೋ- ಬಿಜೆಪಿ ಕಾರ್ಯಕರ್ತರ ಸಮಾವೇಶ:ಶನಿವಾರ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಕಲಬುರಗಿಯ ಶ್ರೀನಿವಾಸ ಸರಡಗಿ ಏರ್ಪೋರ್ಟ್‌ಗೆ ಆಗಮಿಸುವ ಪ್ರಧಾನಿಯವರಿಗೆ ಅಲ್ಲಿಂದ ವಾಯು ಸೇನೆಯ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದಲ್ಲಿರುವ ಪೊಲೀಸ್ ಪೆರೇಡ್ ಮೈದಾನಕ್ಕೆ ಕರೆತರಲಾಗುತ್ತದೆ. ಇಲ್ಲಿಂದ ಮೋದಿಯವರು ಬಿಜೆಪಿ ಕಾರ್ಯಕರ್ತರ ಬಹಿರಂಗ ಸಮಾವೇಶಕ್ಕೆ ರಸ್ತೆ ಮೂಲಕ ತೆರಳಲಿದ್ದಾರೆ. ಈ ಮಾರ್ಗದಲ್ಲಿಯೇ ರೋಡ್ ಷೋ ನಡೆಸಲು ಬಿಜೆಪಿ ಮುಂದಾಗಿದ್ದು ಇದಕ್ಕಾಗಿ ಭರದಿಂದ ಸಿದ್ಧತೆಗು ಸಾಗಿವೆ.
ಪ್ರಧಾನಿಯವರ ಕಲಬುರಗಿ ಭೇಟಿ, ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಈಗಾಗಲೇ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿರುವ ಕಲ್ಯಾಣ ನಾಡಿನ ಸಂಸದರಾದ ಬೀದರ್‌ನ ಭಗವಂತ ಖೂಬಾ, ಕಲಬರಗಿಯ ಡಾ. ಉಮೇಶ ಜಾಧವ್, ಶಾಸಕ ಬಸವರಾಜ ಮತ್ತಿಮಡು ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ.2019ರಲ್ಲೂ ಚುನಾವಣೆಗೂ ಮುನ್ನ ಬಂದು ಖರ್ಗೆಗೆ ಖೆಡ್ಡಾ ತೋಡಿದ್ದ ನಮೋ2019ರ ಪಾರ್ಲಿಮೆಂಟ್ ಚುನಾವಣೆಯ ಸಮಯದಲ್ಲೂ ನರೇಂದ್ರ ಮೋದಿ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಕಲಬುರಗಿಗೆ ಭೇಟಿ ನೀಡಿ ಹೋಗಿದ್ದಲ್ಲದೆ, ಆ ಚುನವಣೆಯಲ್ಲಿ ಅಜಾತ ಶತ್ರು ಡಾ. ಖರ್ಗೆಯವರಿಗೆ ಸೋಲಿನ ರುಚಿ ಸವಿಯುವಂತೆ ಮಾಡಿದ್ದು ಗುಟ್ಟೇನಲ್ಲ. ಮೋದಿಯವರ ಈ ಭೇಟಿಯಿಂದಲೇ ಹಿಂದೆಂದೂ ಗೆಲ್ಲದ ಕಲ್ಯಾಣದ ಎಲ್ಲಾ 5 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದ್ದು ಇತಿಹಾಸ.
ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ ಜಾಧವರಬನ್ನು ಪಕ್ಷಕ್ಕೆ ಕರೆತಂದದ್ದಲ್ಲದೆ ಅವರನ್ನೇ ಬಿಜೆಪಿ ಹುರಿಯಾಳಾಗಿಸಿ ಕಲ್ಯಾಣ ನೆಲದಲ್ಲಿ ರಾಜಕೀಯ ಸಂಚಲನ ಮೂಡಿ ಎಲ್ಲೆಡೆ ಕಮಲ ಅರಳಿ ನಿಂತಿತ್ತು.ಕಲಬುರಗಿಯಲ್ಲಿ ಡಾ. ಜಾಧವ್‌ಗೆ ಮತ್ತೆ ಮಣೆ ಹಾಕಿರೋದರಿಂದ ಮೋದಿಯವರ ಇಂದಿನ ಕಲಬುರಗಿ ಭೇಟಿ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ.