ಸಾರಾಂಶ
ಮಹದಾಯಿ ಯೋಜನೆಗೆ ಪರಿಸರ ಇಲಾಖೆ ಅನುಮತಿ ಯಾಕೆ ಕೊಡಿಸುತ್ತಿಲ್ಲ? ಗೋವಾಕ್ಕೆ ಹೆದರಿಕೊಂಡು ಮೋದಿ ಅವರು ಅನುಮತಿ ಕೊಡಿಸುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆ ಬಗ್ಗೆ ಪ್ರಧಾನಿಗಳ ಮುಂದೆ ಮಾತನಾಡಿಲ್ಲ.
ಹುಬ್ಬಳ್ಳಿ: ಗೋವಾ ರಾಜ್ಯಕ್ಕೆ ಹೆದರಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹದಾಯಿಗೆ ಅನುಮತಿ ಕೊಡಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಪರಿಸರ ಇಲಾಖೆ ಅನುಮತಿ ಯಾಕೆ ಕೊಡಿಸುತ್ತಿಲ್ಲ? ಗೋವಾಕ್ಕೆ ಹೆದರಿಕೊಂಡು ಮೋದಿ ಅವರು ಅನುಮತಿ ಕೊಡಿಸುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆ ಬಗ್ಗೆ ಪ್ರಧಾನಿಗಳ ಮುಂದೆ ಮಾತನಾಡಿಲ್ಲ. ನಾವು ಅನೇಕ ಸಲ ಕೇಂದ್ರಕ್ಕೆ ಹೋಗಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ವಿಷಾಧಿಸಿದರು.ಕೆಪಿಎಸ್‌ಸಿಯಲ್ಲಿ ಅವ್ಯವಸ್ಥೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಿಡಿಮಿಡಿಗೊಂಡ ಸಿಎಂ, ಪ್ರಹ್ಲಾದ್ ಜೋಶಿ ಮೊದಲು ಮಹದಾಯಿ ಬಗ್ಗೆ ಮಾತಾಡಲಿ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರಕ್ಕೆ ಎರಡು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 20ಕ್ಕೆ ವಿಜಯನಗರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತೇವೆ ಎಂದರು.