ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಹಾಗೂ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತೇಜನ ನೀಡಲು ಪಿ.ಎಂ.ಶ್ರೀ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.ತಾಲೂಕಿನ ಕಲ್ಲೋಳಿ ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆವತಿಯಿಂದ ಆಯೋಜಿಸಿದ ಶಾಲಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು 2020 ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪಿ.ಎಂ ಶ್ರೀ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಆಧಾರಿತ ಕಲಿಕೆ, ಪರಿಸರ ಸ್ನೇಹಿ ವಾತಾವರಣ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯ 59 ಶಾಲೆಗಳು ಪಿ.ಎಂ ಶ್ರೀ ಯೋಜನೆಯಡಿ ಆಯ್ಕೆಯಾಗಿವೆ. ರಾಜ್ಯದಲ್ಲಿಯೇ ಅತಿ ಹೆಚ್ಚು, (40 ಪಿ.ಎಂ ಶ್ರೀ) ಶಾಲೆಗಳನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ನೀಡಿರುವುದು ಹೆಮ್ಮೆಯ ಸಂಗತಿ. ಈ ಶಾಲೆಗಳ ಅಭಿವೃದ್ಧಿಗಾಗಿ 2 ಕಂತುಗಳಲ್ಲಿ ಸಿವಿಲ್ ಕಾಮಗಾರಿಗೆ ₹6 ಕೋಟಿ, ಶಾಲಾ ಚಟುವಟಿಕೆಗಳಿಗೆ ₹5. ಕೋಟಿ ಮಂಜೂರಾಗಿದ್ದು ಶೇ.75 ಅನುದಾನ ಬಿಡುಗಡೆಯಾಗಿದೆ ಎಂದರು.
ಮೂಡಲಗಿ ತಾಲೂಕಿನಲ್ಲಿ 7 ಪಿ.ಎಂ ಶ್ರೀ ಶಾಲೆಗಳು (ಕಲ್ಲೋಳಿ, ಮೆಳವಂಕಿ, ಮೂಡಲಗಿ, ಘಟಪ್ರಭಾ, ಅರಭಾವಿ, ವಡೇರಹಟ್ಟಿ, ನಾಗನೂರ) ಆಯ್ಕೆಗೊಂಡು ಇದುವರೆಗೆ ಎರಡು ಕಂತುಗಳಲ್ಲಿ ಒಟ್ಟು ₹67.28 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಶಾಲೆಗಳು ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ಮಾದರಿ ಶಾಲೆಗಳಾಗಿ ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದೆ. ಪಾಲಕರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕೆಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪ್ರಮುಖರಾದ ಪ್ರಭು ಕಡಾಡಿ, ಅಡಿವೆಪ್ಪ ಕುರಬೇಟ, ಕಾಡೇಶ ಗೋರೋಶಿ, ಶಿವಾನಂದ ಹೆಬ್ಬಾಳ, ಶಿವಪ್ಪ ಬಿ.ಪಾಟೀಲ, ಸೋಮನಿಂಗ ಹಡಿಗನಾಳ, ಅಜೀತ ಚಿಕ್ಕೋಡಿ, ದಸಗೀರ ಕಮತನೂರ, ಶಂಕರ ಖಾನಗೌಡ್ರ, ಪ್ರಧಾನ ಗುರುಗಳಾದ ಸಿ. ಎಲ್. ಬಡಿಗೇರ ಸೇರಿದಂತೆ ಸ್ಥಳೀಯ ಮುಖಂಡರು, ಪಾಲಕರು, ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.