ಕಾಡು ಪ್ರಾಣಿಗಳ ಉಪಟಳ ತಪ್ಪಿಸದ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

| Published : Feb 07 2024, 01:47 AM IST

ಕಾಡು ಪ್ರಾಣಿಗಳ ಉಪಟಳ ತಪ್ಪಿಸದ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ ತಾಲೂಕಿನ ಚಿಪ್ಳಿ ಲಿಂಗದಹಳ್ಳಿಯಲ್ಲಿ ಕಾಡು ಪ್ರಾಣಿಗಳು ಕಾಣಿಸಿರುವ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದೇ, ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮದಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಇಲಾಖೆಗೆ ಮಾಹಿತಿ ಮುಟ್ಟಿಸಿದಾಗ ಬೆಳಗ್ಗೆ ಬರುವುದಾಗಿ ಹೇಳಿ, ಸೋಮವಾರ ಮಧ್ಯಾಹ್ನ 2 ಗಂಟೆ ಸ್ಥಳಕ್ಕೆ ಬಂದಿದ್ದಾರೆ. ಸಿಬ್ಬಂದಿ ವಾಚ್‌ಗಾರ್ಡ್ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಚಿರತೆ ನೋಡಿದ ಪ್ರತ್ಯಕ್ಷದರ್ಶಿಗಳು, ಚಿರತೆ ಫೋಟೋ, ವೀಡಿಯೊ ತಂದುಕೊಟ್ಟರೆ ಮಾತ್ರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನೀವು ಚಿರತೆಯದೆಂದು ತೋರಿಸುವ ಕಾಲಿನ ಗುರುತುಗಳನ್ನೆಲ್ಲ ಗಮನಿಸಿಕೊಂಡು ಕೂರಲು ಆಗುವುದಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ಸಾಗರ

ಜನವಸತಿ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಂಡಿರುವ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದೇ, ನಿರ್ಲಕ್ಷ್ಯ ವಹಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನ ಚಿಪ್ಳಿ ಲಿಂಗದಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಗ್ರಾಮದ ಕೆಲವರು ಕೂಡಲೇ ಸಾಗರದ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ಮುಟ್ಟಿಸಿ, ಬೆಳಗ್ಗೆ ಬಂದು ಸ್ಥಳ ಪರಿಶೀಲಿಸುವಂತೆಯೂ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಅಧಿಕಾರಿಗಳು, ಬೆಳಗ್ಗೆ ಬರುವುದಾಗಿ ಹೇಳಿ, ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರಿಗೆ ಸೂಚಿಸಿದ್ದರು.

ಆದರೆ, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ವಾಚ್‌ಗಾರ್ಡ್ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಚಿರತೆ ನೋಡಿದ ಪ್ರತ್ಯಕ್ಷದರ್ಶಿಗಳು, ಚಿರತೆ ಫೋಟೋ, ವೀಡಿಯೊ ತಂದುಕೊಟ್ಟರೆ ಮಾತ್ರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನೀವು ಚಿರತೆಯದೆಂದು ತೋರಿಸುವ ಕಾಲಿನ ಗುರುತುಗಳನ್ನೆಲ್ಲ ಗಮನಿಸಿಕೊಂಡು ಕೂರಲು ಆಗುವುದಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.

ಅರಣ್ಯ ಸಿಬ್ಬಂದಿಯ ಇಂತಹ ಬೇಜವಾಬ್ದಾರಿ ಮಾತುಗಳು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರಿ 11 ಗಂಟೆಯವರೆಗೂ ಮಹಿಳೆಯರು, ಮಕ್ಕಳು ಅಡಕೆ ಸುಲಿಯಲು ಹೋಗಿಬರುತ್ತಾರೆ. ಬೈಕಿನಲ್ಲಿ ಓಡಾಡುವವರೂ ಇದ್ದಾರೆ. ಒಂದೊಮ್ಮೆ ಚಿರತೆ ಯಾರ ಮೇಲಾದರೂ ದಾಳಿ ಮಾಡಿದರೆ ಅದಕ್ಕೆ ಯಾರು ಹೊಣೆ? ಜಾನುವಾರುಗಳನ್ನು ಹೊತ್ತೊಯ್ದರೆ ಅರಣ್ಯ ಇಲಾಖೆಯವರು ತಂದುಕೊಡುತ್ತಾರಾ? ಮರ ಕಡಿಯುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕರೆ 1 ಗಂಟೆಯಲ್ಲಿ ಓಡಿ ಬರುವ ಸಿಬ್ಬಂದಿ, ಚಿರತೆ ಓಡಾಡಿರುವ ಮಾಹಿತಿ ನೀಡಿದರೆ ಇಷ್ಟು ತಡವಾಗಿ ಬರುವುದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಜನರಿಗೆ ಕನಿಷ್ಠ ಮಾಹಿತಿ ನೀಡಿ, ಎಚ್ಚರಿಸುವ ಕೆಲಸವೂ ಇಲಾಖೆ ವತಿಯಿಂದ ನಡೆಯದಿರುವುದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಗಿದೆ.

- - -

-ಫೋಟೋ: ಚಿರತೆ

(ಸಾಂದರ್ಭಿಕ ಚಿತ್ರ.)