ರಾಮನಗರ: ಪೋಕ್ಸೋ ಪ್ರಕರಣದ ಆರೋಪಿ ದೈಹಿಕ ಶಿಕ್ಷಣ ಶಿಕ್ಷಕನೊಬ್ಬ ಪೊಲೀಸ್ ಭವನದ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಭಾನುವಾರ ನಡೆದಿದೆ

ರಾಮನಗರ: ಪೋಕ್ಸೋ ಪ್ರಕರಣದ ಆರೋಪಿ ದೈಹಿಕ ಶಿಕ್ಷಣ ಶಿಕ್ಷಕನೊಬ್ಬ ಪೊಲೀಸ್ ಭವನದ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಭಾನುವಾರ ನಡೆದಿದೆ.

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಪ್ಪರಹಳ್ಳಿಯ ಶಶಿಧರ್ (49) ಮೃತರು. ಈತ ಕಳೆದ 15 ವರ್ಷಗಳಿಂದ ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿಯ ಅನುದಾನಿತ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈತನ ಪತ್ನಿಯೂ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ದಂಪತಿ ಚನ್ನಪಟ್ಟಣದಲ್ಲಿ ನೆಲೆಸಿದ್ದರು.

ಶಾಲೆಯ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಶಶಿಧರ್ ನನ್ನು ಪೊಲೀಸರು ಶುಕ್ರವಾರವೇ ಬಂಧಿಸಿದ್ದರು. ರಾಮನಗರದ ಮಹಿಳಾ ಠಾಣೆ ಪೊಲೀಸರು ಶನಿವಾರ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸಿದ್ದರು. ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಪೊಲೀಸರು ಸಿದ್ಧತೆಯನ್ನೂ ಮಾಡಿಕೊಂಡಿದ್ದರು.

ಇದಕ್ಕಾಗಿ ಬೆಳಗ್ಗೆ ಆರೋಪಿ ಶಶಿಧರ್ ಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಬಳಿಕ, ಮುಂದಿನ ಕಾನೂನು ಪ್ರಕ್ರಿಯೆಯಾಗಿ ಬೆರಳಚ್ಚು (ಫಿಂಗರ್ ಪ್ರಿಂಟ್) ನೋಂದಣಿ ಮಾಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಇರುವ ಪೊಲೀಸ್ ಭವನಕ್ಕೆ ಕರೆದುಕೊಂಡು ಬಂದಿದ್ದರು.

3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ:

ಪೊಲೀಸ್ ಭವನದ ಮೂರನೇ ಮಹಡಿಯಲ್ಲಿ ಪೊಲೀಸರು ಶಶಿಧರ್ ಅವರ ಬೆರಳಚ್ಚು ಪಡೆದಿದ್ದರು. ವಾಪಸ್ ಲಿಫ್ಟ್ ನಲ್ಲಿ ಕರೆ ತರಲು ಮುಂದಾದ ಪೇದೆಗಳನ್ನು ತಳ್ಳಿ ಶಶಿಧರ್ ಕೆಳಗೆ ಹಾರಿದ್ದಾರೆ. ಮೇಲಿಂದ ಬಿದ್ದ ರಭಸಕ್ಕೆ ತಲೆ ಭಾಗಕ್ಕೆ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಈ ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಧಾವಿಸಿದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿ ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ತೀವ್ರ ವಾಗ್ವಾದ ನಡೆಯಿತು.

ಶಿಕ್ಷಕ ಶಶಿಧರ್ ಅವರ ಆತ್ಮಹತ್ಯೆಗೆ ಪೊಲೀಸರು ಮತ್ತು ಶಾಲೆಯ ಮುಖ್ಯಶಿಕ್ಷಕರೇ ನೇರ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕ ಶಶಿಧರ್ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿ ತೀವ್ರವಾಗಿ ಮಾನಸಿಕ ಒತ್ತಡ ಹೇರಿದ್ದರಿಂದಲೇ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಕಿಡಿಕಾರಿದ್ದಾರೆ.

ಕೋಟ್ ................

ಕಳೆದ ಎರಡು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ್ ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಬಗ್ಗೆ ದೂರುಗಳಿತ್ತು. ಐವರು ಹೆಣ್ಣುಮಕ್ಕಳು ಶಿಕ್ಷಕನ ವಿರುದ್ಧ ಹೇಳಿಕೆ ನೀಡಿದ್ದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದೂರಿನ ಆಧಾರದ ಮೇಲೆ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸ್ ಭವನದ 3ನೇ ಮಹಡಿಯ ಎಂಸಿಯು ಯೂನಿಟ್ ನಲ್ಲಿ ಬೆರಳಚ್ಚು ದಾಖಲು ಮಾಡಲಾಗಿತ್ತು. ಆಗ ನಮ್ಮ ಕಾನ್ಸ್‌ಟೇಬಲ್ ಗಳನ್ನು ತಳ್ಳಿ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

- ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ

20ಕೆಆರ್ ಎಂಎನ್ 4.ಜೆಪಿಜಿ

ಮೃತ ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ್