ಸಾರಾಂಶ
ಹರಪನಹಳ್ಳಿ: 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ್ ತಿಳಿಸಿದರು.
ಪಟ್ಟಣದ ಎಸ್‌ಯುಜೆಎಂ ಕಾಲೇಜಿನ ಆವರಣದಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಹಿತರಕ್ಷಣೆಗಾಗಿ ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ, ಯಾರು ಕೂಡ ಲೈಂಗಿಕ ಶೋಷಣೆಗೆ ಒಳಗಾಗಬಾರದು, ಯಾವುದೇ ವ್ಯಕ್ತಿಯಿಂದಾಗಲಿ ತೊಂದರೆಯಾದಲ್ಲಿ ಪೋಷಕರ ಮೂಲಕ ಅಥವಾ ತಾವೇ ಖುದ್ದಾಗಿ ಬಂದು ಪೊಲೀಸ್ ಠಾಣೆ ದೂರು ನೀಡಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.ವಿದ್ಯಾರ್ಥಿಗಳು ಮೊದಲು ಸಾಮಾನ್ಯ ಜ್ಞಾನ ಹೊಂದಿರಬೇಕು, ಜತೆಗೆ ಸಮಯ ಪ್ರಜ್ಞೆ, ಉತ್ತಮ ಮನೋಭಾವನೆ ಇದ್ದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.ಪಿಎಸ್‌ಐ ಶಂಭುಲಿಂಗಯ್ಯ ಸಿ. ಹಿರೇಮಠ್ ಮಾತನಾಡಿ, ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ವಾಹನ ಪರವಾನಗಿ ಪಡೆದುಕೊಂಡಿರಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.18 ವರ್ಷದೊಳಗಿನವರು ಕಾನೂನಿನ ಪ್ರಕಾರ ಬೈಕ್ ಸೇರಿದಂತೆ ಇತರ ವಾಹನಗಳನ್ನು ಚಲಾಯಿಸುವಂತಿಲ್ಲ. ಒಂದು ವೇಳೆ ಚಲಾಯಿಸುವುದು ನಮ್ಮ ಇಲಾಖೆಯ ಗಮನಕ್ಕೆ ಬಂದರೆ ಗಾಡಿ ಮಾಲೀಕನಿಗೆ ₹೨೫ ಸಾವಿರ ದಂಡ ಮತ್ತು ೩ ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಹೊಂದಿರಬೇಕು, ಸಾಮಾಜಿಕ ಜಾಲತಾಣಗಳಿಂದ ಅದಷ್ಟು ದೂರವಿರಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಚಾರ್ಯ ಎಚ್. ಮಲ್ಲಿಕಾರ್ಜುನ ಮಾತನಾಡಿ, ಅಪರಾಧ ತಡೆಯುವಲ್ಲಿ ಪೊಲೀಸರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಸ್.ಬಿ. ಸೋಮರೆಡ್ಡಿ, ಎಸ್. ಚನ್ನಬಸಪ್ಪ, ಕೃಷ್ಣಮೂರ್ತಿ, ಜಗದೀಶ, ಚಂದ್ರಪ್ಪ ಹಾಗೂ ವಿದ್ಯಾರ್ಥಿಗಳಿದ್ದರು.