ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಗಂಡಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೋಕ್ಸೋ ಪ್ರಕರಣ ಆರೋಪ ಎದುರಿಸುತ್ತಿರುವ ಶಿಕ್ಷಕರೊಬ್ಬರನ್ನು ನಿಯೋಜಿಸಿರುವುದನ್ನು ವಿರೋಧಿಸಿ ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಮರ್ಕಲ್ ಗ್ರಾಪಂ ಮಾಜಿ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತರೀಕೆರೆ ತಾಲೂಕಿನ ಬಸವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಇಲ್ಲಿಗೆ ವರ್ಗವಾಗಿ ಬಂದಿರುವ ಸಿದ್ದರಾಮಪ್ಪ ಎಂಬ ಶಿಕ್ಷಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಗ್ರಾಪಂ ಮಾಜಿ ಸದಸ್ಯ ಪ್ರಶಾಂತ್ ಕಲ್ಮಕ್ಕಿ ಮಾತನಾಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಂತಹ ಶಿಕ್ಷಕನನ್ನು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಈ ಶಾಲೆಯ ಘನತೆ, ಗೌರವಕ್ಕೆ ಕುಂದು ಬರುತ್ತದೆ. ಈ ಶಾಲೆ 2020 ರಲ್ಲಿ ಮುಚ್ಚುವ ಹಂತ ತಲುಪಿತ್ತು. ದಾನಿಗಳು,ಶಾಸಕರ ಸಹಕಾರದಿಂದ ಮತ್ತಿ ಅಭಿವೃದ್ಧಿ ಗೊಂಡಿದ್ದು ಪ್ರಸ್ತುತ 155 ವಿದ್ಯಾರ್ಥಿಗಳಿದ್ದಾರೆ. ಆರೋಪ ಹೊತ್ತಿರುವ ಇಂತಹ ಶಿಕ್ಷಕನಿಂದ ಶಾಲೆ ಮತ್ತೆ ಮುಚ್ಚುವ ಸ್ಥಿತಿಗೆ ಬರಬಹುದು ಎಂದರು.ಗ್ರಾಮಸ್ಥೆ ಪ್ರಿಯಾ ಮಂಜುನಾಥ್ ಮಾತನಾಡಿ ಸದ್ಯ ಈಶಾಲೆಯಲ್ಲಿ ಶಿಕ್ಷಕಿಯರೇ ಉತ್ತಮ ಬೋಧನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪೋಕ್ಸೋ ಪ್ರಕರಣ ಆರೋಪ ಎದುರಿಸುತ್ತಿರುವ ಇಂತಹ ಶಿಕ್ಷಕರು ನಿಯೋಜನೆಗೊಂಡರೆ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯಲಿದೆ. ಇಂತಹ ಶಿಕ್ಷಕರನ್ನು ನಿಯೋಜಿಸಿ ಶಾಲೆಯನ್ನು ಹಾಳುಮಾಡಬೇಡಿ ಎಂದು ಮನವಿ ಮಾಡಿದರು. ಗ್ರಾಪಂ ಮಾಜಿ ಸದಸ್ಯರು,ಗ್ರಾಮಸ್ಥರು ಇದ್ದರು.
