ಸಾರಾಂಶ
- ಪಾಲಿಕೆಯಲ್ಲಿ ಕನ್ನಡ ರಾಜ್ಯೋತ್ಸವ: ಕವಿಗೋಷ್ಠಿ ಕಾರ್ಯಕ್ರಮ, ಸನ್ಮಾನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಸಕ್ತ ದಿನಗಳಲ್ಲಿ ನಮಗೆ ಶರಣ ಸಂಸ್ಕೃತಿ, ಸೂಫಿ ಸಂಸ್ಕೃತಿ ಬೇಕಾಗಿವೆ. ಈ ಸಂಸ್ಕೃತಿಗಳು ಜನರನ್ನು ಬೆಸೆಯುವ ಸಂಸ್ಕೃತಿಗಳಾಗಿವೆ. ಇಂತಹ ಶರಣರು, ಸಂತರು, ದಾರ್ಶನಿಕರು, ಸೂಫಿಗಳು ನೀಡಿದ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೇಯರ್ ಕೆ.ಚಮನ್ ಸಾಬ್ ಹೇಳಿದರು.ನಗರದ ಮಹಾನಗರ ಪಾಲಿಕೆ ರಂಗಮಂದಿರದಲ್ಲಿ ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ, ಕನ್ನಡಪರ ಸಂಘಟನೆಗಳು, ಪತ್ರಕರ್ತರ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿತೆ, ಕವನಗಳಿಗೆ ಲೋಕದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇದೆ. ಕರಾಳ ಶಕ್ತಿಗಳು ಇಂದು ವಿಜೃಂಭಣೆಯಿಂದ ಮೆರೆಯುತ್ತಿವೆ. ಈ ದೇಶದ, ಈ ನಾಡಿನ ಸಂಸ್ಕೃತಿ, ಪ್ರೀತಿ, ಭ್ರಾತೃತ್ವ ಕಡಿಮೆಯಾಗಿದೆ. ಜನ ದ್ವೇಷ, ಹಿಂಸೆಗಳ ಬಗ್ಗೆ, ಜಾತಿ-ಜಾತಿ, ದೇಶ-ದೇಶ, ಪ್ರಾಂತ್ಯ-ಪ್ರಾಂತ್ಯಗಳ ಬಗ್ಗೆ ಮಾತನಾಡುತ್ತಾರೆ. ನಮ್ಮಲ್ಲಿ ಏನು ಒಳ್ಳೆತನ ಇದೆಯೋ ಅದನ್ನು ಯಾರೂ ಹೇಳುತ್ತಿಲ್ಲ. ನಮ್ಮಲ್ಲಿರುವ ವ್ಯತ್ಯಾಸಗಳನ್ನು ಹೇಳುತ್ತಿದ್ದಾರೆ ಎಂದರು.ಇಂದು ಜನ ಜೀವದ ಬಗ್ಗೆ ಮಾತನಾಡುತ್ತಾರೆ. ಜೀವ ನಾವು ಕೇಳಿ ಬಂದಿಲ್ಲ, ಹೇಳಿ ಹೋಗಲ್ಲ. ಅಪ್ಲಿಕೇಷನ್ ಹಾಕಿ ಈ ಧರ್ಮ, ಈ ತಂದೆ- ತಾಯಂದರಿಗೆ ಹುಟ್ಟುತ್ತೇನೆ ಎಂದು ಕೇಳಿ ಬಂದಿಲ್ಲ. ಎಲ್ಲ ಧರ್ಮಗಳು ಅವರ ಸಮಕಾಲೀನ ಭಾಷೆಯಲ್ಲಿ ಮನುಷ್ಯ ಹೇಗೆ ಉತ್ತಮವಾಗಿ ಬದುಕಬಹುದು ಎಂಬುದನ್ನು ಹೇಳಿದ್ದಾರೆ. ಎಲ್ಲರೂ ದೇವರಲ್ಲಿ ಕೇಳಿಕೊಳ್ಳುವುದು ನನಗೆ ಆಯಾಸವಿಲ್ಲದ ಮರಣ ಕೊಡು, ಯಾರ ಹಂಗಿನಲ್ಲೂ ಬದುಕಲು ಬಿಡಬೇಡ, ಕೇವಲ ನಿನ್ನ ಹಂಗಿನಲ್ಲಿ ಇರಲು ವ್ಯವಸ್ಥೆ ಮಾಡು. ನನ್ನ ಜೊತೆಗೆ ನೀನು ಇರು ಎಂದು ಪ್ರಾರ್ಥಿಸುತ್ತಾರೆ ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ಕನ್ನಡ ಭಾಷೆಗೆ ಮೂಲವೇ ಸಾಹಿತ್ಯ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯವನ್ನು ಕಡೆಗಣಿಸುವಂತಹ ಕ್ರಿಯೆಯನ್ನು ನಾವು ನೀವು ಕಾಣುತ್ತಿದ್ದೇವೆ. ಮನಸ್ಸಿಗೆ ಮುದ ನೀಡುವಂತಹ, ನಾಟುವಂತಹದ್ದು ಮಾತ್ರ ಬರಹ, ಅದು ಸಾಹಿತ್ಯ. ಇವತ್ತಿನ ಪರಿಸ್ಥಿತಿಯಲ್ಲಿ ಸಾಹಿತಿಗಳ ಲೇಖನಿ ಸಮಾಜವನ್ನು ತಿದ್ದುವುದಷ್ಟೇ ಅಲ್ಲ, ಕಲುಷಿತವಾಗಿರುವ ರಾಜಕಾರಣವನ್ನು ತಿದ್ದುವಂತಾಗಬೇಕು. ಯುವಜನತೆ ಇಂತಹ ಕವಿಗೋಷ್ಠಿಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.ಚುಸಾಪ ಜಿಲ್ಲಾಧ್ಯಕ್ಷ ಗುಂಡಗಟ್ಟಿ ರಾಜಶೇಖರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಿಕೆಯಲ್ಲಿನ ಕನ್ನಡ ರಾಜ್ಯೋತ್ಸವದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಒಂದು ಅಂಗ. ಪ್ರತಿವರ್ಷ ಜಿಲ್ಲೆಯ ವಿವಿಧೆಡೆಯಿಂದ ಪಾಲಿಕೆಯಲ್ಲಿ ನಡೆಯುವ ರಾಜ್ಯೋತ್ಸವದಲ್ಲಿ ನಡೆಯುವ ಕವಿಗೋಷ್ಠಿ ಕಾರ್ಯಕ್ರಮಗಳಿಗೆ ಬರುತ್ತಾರೆ. ಕವಿಗಳಿಗೆ ವೇದಿಕೆಯನ್ನು ಕಲ್ಪಿಸುವುದು ಚುಟುಕು ಸಾಹಿತ್ಯ ಪರಿಷತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕವಿಗಳಿಗೆ ಪಾಲಿಗೆ ವತಿಯಿಂದ ಸನ್ಮಾನಿಸಲಾಯಿತು. ಕನ್ನಡಪರ ಹೋರಾಟಗಾರ, ಮಾಜಿ ನಗರಸಭಾಧ್ಯಕ್ಷ ಕೆ.ಜಿ.ಶಿವಕುಮಾರ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಸಾಹಿತಿಗಳಾದ ಓಂಕಾರಯ್ಯ ತವನಿಧಿ, ಅನ್ನಪೂರ್ಣ ರವಿ, ಉಮಾ ಹಿರೇಮಠ, ಎಂ.ಬಸವರಾಜ, ಕಲೀಂ ಭಾಷಾ, ಅಣಬೇರು ತಾರೇಶ, ಮಂಜುನಾಥ, ಸುಶೀಲ ಹಿರೇಮಠ, ಪಕ್ಕಿರೇಶ ಆದಾಪುರ, ಚನ್ನಬಸವ ಶೀಲವಂತ್, ಶಿವಯೋಗಿ ಹಿರೇಮಠ, ಲಲಿತಕುಮಾರ ಜೈನ್, ಸತ್ಯಭಾಮ ಮಂಜುನಾಥ, ನೂರ್ ಜಾನ್, ಜಿ.ಕೆ.ಕುಲಕರ್ಣಿ ಇತರರು ಭಾಗವಹಿಸಿದ್ದರು.- - - -29ಕೆಡಿವಿಜಿ31: ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಕವಿಗೋಷ್ಠಿ ಕಾರ್ಯಕ್ರಮವನ್ನು ಮೇಯರ್ ಕೆ.ಚಮನ್‌ಸಾಬ್ ಉದ್ಘಾಟಿಸಿದರು.