ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಮಾನತೆಯ ಸಮಾಜ ಚಿಂತನೆಯನ್ನು ಬೆಳೆಸಿಕೊಂಡಿದ್ದ ಕವಿ ಲಕ್ಕೂರು ಆನಂದ ಅವರೊಬ್ಬ ಅಪ್ರತಿಮ ಸಾಹಿತ್ಯ ಪ್ರತಿಭೆ. ಅವರು ನಮ್ಮೊಂದಿಗಿಲ್ಲದ ನೆನೆಪು ನೋವು ತಂದಿದೆ. ಸಾಹಿತ್ಯ ಮತ್ತು ಕಾವ್ಯ ಚಿಂತನೆಗಳ ಮೂಲಕ ಸಮಾಜದಲ್ಲಿ ಬಿತ್ತಿ ಬೆಳಕು ನೀಡಿ ಅಗಲಿದ್ದಾರೆ. ಅವರ ಮೌಲಿಕ ಕಾವ್ಯ ಸಂದೇಶಗಳು ಯುವಕರಿಗೆ ಹಾಗೂ ಸಮಾನತೆಯ ಸಮಾಜವನ್ನು ರೂಪಿಸಲು ಪೂರಕವಾಗಿವೆ. ಎಂದು ಗುಲ್ಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.ಗುವಿವಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯ ಎಸ್‍ಸಿ-ಎಸ್‍ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕಲಬುರಗಿ ಸಮುದಾಯ ಇವುಗಳ ಸಹಯೋಗದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕವಿ ಲಕ್ಕೂರು ಆನಂದ ನೆನಪು ಹಾಗೂ ಸಮಾಕಾಲೀನ ಸಾಮಾಜಿಕ ಹೊಣೆಗಾರಿಕೆ-ಚಿಂತನೆ ಮತ್ತು ಲಕ್ಕೂರು ಆನಂದರ ಪುಸ್ತಕ ಬಿಡುಗಡೆ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿರಿಯ ಸಾಹಿತಿ ಮಹಾದೇವ ಶಂಕನಪುರ ಮಾತನಾಡಿ, ಸಾಹಿತ್ಯ ವಲಯದ ಸಂಪರ್ಕ ಬೆಳೆಸಿಕೊಂಡಿದ್ದ ಕವಿ ಲಕ್ಕೂರು ಆನಂದ ಜಾಗತಿಕ ಸಾಹಿತ್ಯ ಚಿಂತನೆಯನ್ನು ಕರಗತ ಮಾಡಿಕೊಂಡಿದ್ದರು ಎಂದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಕೋಲಾರ ಜಿಲ್ಲೆಯ ಲಕ್ಕೂರು ಗ್ರಾಮದ ಬಡತನದ ಕುಟುಂಬದಲ್ಲಿ ಬೆಳೆದು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧನೆ ಮಾಡುತ್ತಿದ್ದ ಕವಿ ಲಕ್ಕೂರು ಆನಂದ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಯುವ ಸಾಹಿತ್ಯ ಪ್ರಶಸ್ತಿ ಪಡೆದಿದ್ದರು. ಇಂತಹ ಪ್ರತಿಭೆಗೆ ಸೂಕ್ತ ಉದ್ಯೋಗ ಸಿಗಲಿಲ್ಲ. ಅರ್ಹತೆಯುಳ್ಳ ಇಂತಹ ಸಾವಿರಾರು ಪ್ರತಿಭೆಗಳು ಜೀವನದಲ್ಲಿ ಜಿಗುಪ್ಸೆ ಪಡುವಂತಾಗಿದೆ ಎಂದು ವಿಷಾದಿಸಿದು.ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಅವಕಾಶದಿಂದ ಅಧಿಕಾರ, ಉದ್ಯೋಗ ಪಡೆದಿರುವವರು ಮಾತನಾಡುತ್ತಿಲ್ಲ. ವಿದ್ಯಾವಂತ ಸಮುದಾಯ ಒಗ್ಗಟ್ಟಿನಿಂದ ಅವಕಾಶ ಮತ್ತು ಸೌಲಭ್ಯಗಳನ್ನು ಪಡೆಯಲು ಪ್ರಶ್ನಿಸುವ ದೈರ್ಯವನ್ನು ಬೆಳೆಸಿಕೊಳ್ಳಬೇಕು. ಅನ್ಯಾಯ ಮತ್ತು ತುಳಿಯುತ್ತಿರುವ ವ್ಯವಸ್ಥೆಯನ್ನು ಯುವಕರು ಅರ್ಥಮಾಡಿಕೊಂಡು ಚಳುವಳಿ ಮತ್ತು ಹೋರಾಟದ ನೆಲೆಯಲ್ಲಿ ಧ್ವನಿ ಮಾಡಬೇಕಿದೆ. ಒಂದು ಕಡೆ ವಯೋಮಾನ ಮೀರುತ್ತಿರುವ ಪದವಿದರರು ಇಂದು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಾತಿಯತೆ ಎಲ್ಲೇ ಮೀರಿ ಬೆಳೆದಿದೆ. ಪ್ರಶ್ನೆ ಮಾಡುವ ಹಕ್ಕಿದ್ದರು ಸಹ ಯುವ ಜನಾಂಗ ಪ್ರಶ್ನಿಸದಿರುವುದರಿಂದಲೇ ಅವ್ಯವಸ್ಥೆ ಬೆಳೆಯುತ್ತಿದೆ ಎಂದರು.
ರಾಜ್ಯ ದಲಿತ ಸಂಘಟನೆ ಸಮಿತಿಯ ಸಂಚಾಲಕ ಡಿ.ಜಿ. ಸಾಗರ ಮಾತನಾಡಿ ಬಹುತೇಕ ವಿದ್ಯಾವಂತರು ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕೆಂದರು. ಸಾಹಿತಿ ಪ್ರೊ. ಆರ್. ಕೆ. ಹುಡುಗಿ ಮಾತನಾಡಿ ಯುವಕರು ವ್ಯಸನಗಳಿಗೆ ಬಲಿಯಾಗದೇ ಆದರ್ಶ ಗುಣಗಳನ್ನು ಪಾಲಿಸಬೇಕು ಎಂದರು.ಕರ್ನಾಟಕ ಕೇಂದ್ರಿಯ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್ ಮಾತನಾಡಿ, ಸಾಹಿತ್ಯ ಮತ್ತು ಕಾವ್ಯ ರಚನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕವಿ ಲಕ್ಕೂರು ಆನಂದ ದಲಿತ ಕವಿ ಸಿದ್ದಲಿಂಗಯ್ಯ, ಎಲ್. ಹನುಮಂತಯ್ಯ ಮತ್ತು ಬಿ. ಸಿದ್ದಯ್ಯ, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ ಮತ್ತು ದೇವನೂರು ಮಹದೇವ ಅವರು ತಮ್ಮ ಕಾವ್ಯ ಚಿಂತನದಲ್ಲಿ ಮಿಂದೆದ್ದವರು ಎಂದರು.
ಕವಿ ಲಕ್ಕೂರು ಆನಂದ ಅವರ ತಾಯಿ ಮುನಿಯಮ್ಮ ಲಕ್ಕೂರು, ಸಹೋದರ ನಾಗರಾಜ ಲಕ್ಕೂರು ಹಾಗೂ ಸಂಬಂಧಿಗಳು, ಮರಿಯಪ್ಪನಹಳ್ಳಿ ಅರ್ಜುನ್ ಭದ್ರೆ, ಸಾಹಿತ್ಯ ಬಳಗ, ಚಿಂತಕರು ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಸಂತೋಷಕಂಬಾರ ಅತಿಥಿಗಳನ್ನು ಸ್ವಾಗತಿಸಿದರು. ಅಣವೀರಗೌಡ ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು. ಕು. ಬೀಮಾಬಾಯಿ ವಂದಿಸಿದರು.ನನ್ನ ಅಣ್ಣ ಓದು ಮತ್ತು ಬರವಣಿಗೆಯ ತುಡಿತವನ್ನು ಬಹಳ ಬೆಳೆಸಿಕೊಂಡಿದ್ದರು. ರಾತ್ರಿ ಮೂರು ಗಂಟೆವರೆಗೂ ಬರೆದು ಮತ್ತೆ ಬೆಳಗಿನ ಐದು ಗಂಟೆಗೆದ್ದು ಮತ್ತೆ ಸಾಹಿತ್ಯ ಬರೆಯುತ್ತಿದ್ದರು. ಏಕೆ ಇಷ್ಟು ನಿದ್ದೆಗೆಡುತ್ತಿ ಅಂತ ನಾ ಕೇಳಿದರೆ, ನೋಡು ನನ್ನ ಜೀವನದಲ್ಲಿ ಏನು ಬೇಕಾದರೂ ತಗೊ ಆದರೆ, ನನ್ನಿಂದ ಅಕ್ಷರ ಕಿತ್ತುಕೊಳ್ಳಬೇಡ ಎನ್ನುತ್ತಿದ್ದರು ಎಂದು ಅಣ್ಣನ ಅಗಲಿಕೆ ನೆನೆದು ನಾಗರಾಜ ಲಕ್ಕೂರು ಭಾವುಕರಾದರು.