ಕಾವ್ಯ ಎಂದೂ ಹಳತಾಗದು: ಕಮಲಾ ನರಸಿಂಹನ್‌

| Published : Jan 18 2025, 12:46 AM IST

ಸಾರಾಂಶ

ಮಧುಗಿರಿ: ಕಾವ್ಯ ಎಂದೂ ಹಳತಾಗದು, ಅದು ಸದಾಕಾಲಕ್ಕೂ ನಿತ್ಯ ನೂತನ ಎಂದು ಲೇಖಕಿ ಕಮಲಾ ನರಸಿಂಹನ್‌ ಅಭಿಪ್ರಾಯಪಟ್ಟರು.

ಮಧುಗಿರಿ: ಕಾವ್ಯ ಎಂದೂ ಹಳತಾಗದು, ಅದು ಸದಾಕಾಲಕ್ಕೂ ನಿತ್ಯ ನೂತನ ಎಂದು ಲೇಖಕಿ ಕಮಲಾ ನರಸಿಂಹನ್‌ ಅಭಿಪ್ರಾಯಪಟ್ಟರು. ತಾಲೂಕು ಕಸಾಪ ಕನ್ನಡ ಭವನದ ಕೆ.ಎನ್‌. ರಾಜಣ್ಣ ಸಭಾಂಗಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನಮ್ಮೂರು ನಮ್ಮ ಕವಿತೆ ಎಂಬ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಮೊಬೈಲ್, ಡಿಜಿಟಲ್‌ ಗ್ರೂಪ್‌ಗಳಲ್ಲಿ ಕಾವ್ಯ ಹೆಚ್ಚು ಪ್ರಚಾರ ಪಡೆಯುತ್ತಿದೆ. ಸಾಮೂಹಿಕವಾಗಿ ಕುಳಿತು ಕಾವ್ಯ ಅನುಭವಿಸುವ ಜನ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ ಎಂದರು.ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಪ್ರೊ.ಮ.ಲ.ನ.ಮೂರ್ತಿ ಭಾವ ತೀವ್ರತೆಯಲ್ಲಿ ಕಾವ್ಯ ಅರಳುತ್ತದೆ. ಕವಿ ತನ್ನ ಸುತ್ತಲಿನ ಆಗು ಹೋಗುಗಳನ್ನು ನೋಡುತ್ತಾ ಕೇಳುತ್ತಾ ಮನದಲ್ಲಿ ಮನನ ಮಾಡಿದಾಗ ಸತ್ವವಾದ ಕಾವ್ಯ ಮೂಡುತ್ತದೆ. ಕವಿ ಸಹೃದಯ , ವಿಮರ್ಷಕ, ಕಾವ್ಯ ಶೋಧನೆಯಲ್ಲಿ ಪಾಲ್ಗೊಳ್ಳುವವ ಎಂದರು. ಕಾವ್ಯಗೋಷ್ಠಿ ಕುರಿತು ಮಾತನಾಡಿದ ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ ಪ್ರೊ.ಡಿ.ಎಸ್‌.ಮುನೀಂದ್ರ ಕುಮಾರ್‌ ಶಬ್ದ ಅರ್ಥ ಹೊಂದಿಕೊಂಡಾಗ ಮಾತ್ರ ಕಾವ್ಯ ಕಳೆಗಟ್ಟಲು ಸಾಧ್ಯ. ಭೂಮಿ, ಕಾಲ, ಕಾಮ, ಕಾವ್ಯವಾಗುತ್ತಿದೆ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ ಮಾತನಾಡಿ, ಕಾವ್ಯ ಕುತೂಹಲ ಹುಟ್ಟಿಸುತ್ತದೆ. ಬಗೆದಂತೆಲ್ಲಾ ಬಗೆ ಬಗೆಯ ಅರ್ಥಗಳು ಹೊಳೆಯತ್ತಿರಬೇಕು ಎಂದರು. ಬಿಇಒ ಕೆ.ಎನ್‌.ಹನುಮಂತರಾಯಪ್ಪ ಮಾತನಾಡಿ, ಮನದ ಭಾವನೆ ಕಾವ್ಯ ಪರಂಪರೆಯ ಪ್ರತೀಕವೆಂದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಗೋವಿಂದರಾಯ ಮಾತನಾಡಿ,ಶಬ್ದ, ಲಾಲಿತ್ಯ, ಧ್ವನಿ ಮಾಧುರ್ಯ ಕಾವ್ಯದ ಜೀವಾಳ ಎಂದರು. ಕಾರ್ಯದರ್ಶಿ ರಂಗಧಾಮಯ್ಯ ಮುಂದಿನ ದಿನಗಳಲ್ಲಿ ಹಾಸ್ಯ-ಹರಟೆ ಸಂವಾದ ಗೋಷ್ಠಿ ನಡೆಸುವುದಾಗಿ ತಿಳಿಸಿದರು. ಈ ಕವಿ ಗೋಷ್ಠಿಯಲ್ಲಿ 22 ಮಂದಿ ಕವಿಗಳು ಭಾಗವಹಿಸಿದ್ದರು.ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಗಂಕಾರನಹಳ್ಳಿ, ರಂಗಸ್ವಾಮಿ ಇದ್ದರು.