ಸಾರಾಂಶ
ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಆವರಣದಲ್ಲಿ ಮಂಡ್ಯದ ಕರುನಾಡು ಸೇವಾ ಟ್ರಸ್ಟ್ ಆಯೋಜಿಸಿದ್ದ ಕರುನಾಡು ಕವಿಗೋಷ್ಠಿ ಹಾಗೂ ಕರುನಾಡು ರಾಜ್ಯೋತ್ಸವ ರತ್ನ ಪುರಸ್ಕಾರ ಪ್ರದಾನ ಸಮಾರಂಭ
ಸಾಹಿತಿ ಬನ್ನೂರು ಕೆ. ರಾಜು ಅಭಿಮತಕನ್ನಡಪ್ರಭ ವಾರ್ತೆ ಮೈಸೂರು
ಇಡೀ ದೇಶವನ್ನು ಕಾಡುತ್ತಿರುವ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕವಿಯಾದವರು ಕಿವಿಯಾಗಿ, ಕಣ್ಣಾಗಿ ಸ್ಪಂದಿಸಿ ತಮ್ಮ ಲೇಖನಿಯಿಂದ ಸಮಾಜಮುಖಿ ಕಾವ್ಯ ಕೃಷಿ ಮಾಡಬೇಕು ಎಂದು ಸಾಹಿತಿ ಬನ್ನೂರು ಕೆ. ರಾಜು ತಿಳಿಸಿದರು.ನಿಮಿಷಾಂಬನಗರದ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಆವರಣದಲ್ಲಿ ಮಂಡ್ಯದ ಕರುನಾಡು ಸೇವಾ ಟ್ರಸ್ಟ್ ಆಯೋಜಿಸಿದ್ದ ಕರುನಾಡು ಕವಿಗೋಷ್ಠಿ ಹಾಗೂ ಕರುನಾಡು ರಾಜ್ಯೋತ್ಸವ ರತ್ನ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕವಿಗಳು, ಸಾಹಿತಿಗಳು ತಮ್ಮ ಸಮಾಜೋಪಯೋಗಿ ಶ್ರೇಷ್ಠ ಬರವಣಿಗೆಯಿಂದ ಸಮಾಜವನ್ನು ತಿದ್ದಿ ತೀಡುವ ಜನೋಪಯೋಗಿಯಾದ ನಾಡು ಕಟ್ಟುವ ದೇಶೋದ್ಧಾರದ ಕೆಲಸ ಮಾಡಬೇಕು ಎಂದರು.
ಇವತ್ತಿನ ಕಾಲಘಟ್ಟದಲ್ಲಿ ನಮ್ಮದು ಧ್ವನಿ ಸತ್ತ ಮೂಕ ಸಮಾಜವಾಗಿದ್ದು ರಾಜ್ಯ, ದೇಶ, ಸೇರಿದಂತೆ ಇಡೀ ಜಗತ್ತು ಅನೇಕ ಸಾಮಾಜಿಕ ತಲ್ಲಣಗಳ ಪ್ರಕ್ಷುಬ್ದ ಪರಿಸ್ಥಿತಿಯಿಂದ ಬಗೆ ಹರಿಯದ ಸಮಸ್ಯೆಗಳಿಂದ ಉತ್ತರವಿಲ್ಲದ ಪ್ರಶ್ನೆಗಳ ಸುಳಿಯಲ್ಲಿ ಬಳಲುತ್ತಿದೆ. ಹೀಗಾಗಿ ಇದಕ್ಕೆಲ್ಲ ಕವಿಗಳ ಲೇಖನಿ ಉತ್ತರವಾಗಬೇಕು ಎಂದು ಅವರು ಹೇಳಿದರು.ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಶಿವಣ್ಣಗೌಡ ಮಾದುರಾಯ ಬಿರಾದಾರ, ಶಿವಮೂರ್ತೆಪ್ಪಾ ಶಿದ್ದಪ್ಪ ಮೇನೆದಾರ ಸಾ, ಸಿದ್ದರಾಮ ಸಿ. ಸರಸಂಜಿ, ಪಿ.ಎಂ. ಭೋಜೆ, ಮೌನೇಶ್, ಚಂದು ವಾಗೀಶ, ಕುರುವತ್ತಿಗೌಡ ಪೊಲೀಸ್ ಪಾಟೀಲ, ಪಿ.ಎಸ್. ಮುನಿಲಕ್ಷ್ಮಿ, ಕೆ.ಜಿ. ಹೊನ್ನಾದೇವಿ, ನಳಿನಿ, ಸಿ.ಎಂ. ಜ್ಯೋತಿ, ಎಂ. ನಾಗರಾಜು, ಎನ್.ಎಂ. ಜನಿವಾರದ, ಕೆ. ನಾಗೇಂದ್ರ, ಉದಯರವಿ ಅವರಿಗೆ ಕರುನಾಡು ರಾಜ್ಯೋತ್ಸವ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಚ್.ಡಿ. ಕೋಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಎಂ. ನಾಗರಾಜು, ಉದ್ಯಮಿ ಎನ್.ಜೆ. ಮಂಜುಳಾ, ನಿವೃತ್ತ ಯೋಧ ಮಧುಕುಮಾರ್, ಸಮಾಜ ಸೇವಕ ಎಂ. ಶಿವಪ್ಪ ಹಾಲುಮತ, ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರದ ಎಂ.ಪಿ. ಪ್ರಭುಸ್ವಾಮಿ, ಕರುನಾಡು ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ಅಭಿನಂದನ್ ಇದ್ದರು.