ರೀಲ್ಸ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಾಗಿ ಹಲ್ಲೆ ಮಾಡುವುದು ಅಥವಾ ಪೊಲೀಸರನ್ನು ನಿಂದಿಸುವುದು ಸರಿಯಲ್ಲ ಎಂದು ಹೋರಾಟಗಾರ ಪುನೀತ್‌ ಕೆರೆಹಳ್ಳಿಗೆ ಹೈಕೋರ್ಟ್‌ ಚಾಟಿ ಬೀಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೀಲ್ಸ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಾಗಿ ಹಲ್ಲೆ ಮಾಡುವುದು ಅಥವಾ ಪೊಲೀಸರನ್ನು ನಿಂದಿಸುವುದು ಸರಿಯಲ್ಲ ಎಂದು ಹೋರಾಟಗಾರ ಪುನೀತ್‌ ಕೆರೆಹಳ್ಳಿಗೆ ಹೈಕೋರ್ಟ್‌ ಚಾಟಿ ಬೀಸಿದೆ.

ಮಯನ್ಮಾರ್‌ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದಪಡಿಸುವಂತೆ ಕೋರಿ ಪುನೀತ್‌ ಕೆರೆಹಳ್ಳಿ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ವಕೀಲ ಪಿ.ಎನ್‌. ಮನಮೋಹನ್‌, ಪ್ರಕರಣ ದಾಖಲಿಸಿದ್ದ ಪೊಲೀಸರು ಪುನೀತ್‌ಗೆ ಜ.13ರಂದು ಅಂತಿಮ ನೋಟಿಸ್‌ ನೀಡಿ, ಜ.16ರಂದು ಹಾಜರಾಗಲು ಸೂಚಿಸಿದ್ದರು. ಆದರೆ, ಮಾರನೇಯ ದಿನ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ತನ್ನವಾದ ಮಂಡಿಸಲು ಪುನೀತ್‌ಗೆ ಅವಕಾಶವೇ ನೀಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಪೊಲೀಸರನ್ನು ಪ್ರತಿನಿಧಿಸಿದ್ದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಬೇರೊಂದು ಪ್ರಕರಣದಲ್ಲಿ ಜಾಮೀನು ಸಂಬಂಧ ಬಾಂಡ್‌ ಸಲ್ಲಿಸುವಂತೆ ಆದೇಶ ಮಾಡಿರುವುದನ್ನು ಪುನೀತ್‌ ಪಾಲಿಸಿಲ್ಲ. ಈ ಸಂಬಂಧ ಹೈಕೋರ್ಟ್‌ ಸಮನ್ವಯ ಪೀಠ ಆದೇಶ ಮಾಡಿದೆ. ಅದಕ್ಕಾಗಿ ಪುನೀತ್‌ಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಅವರು ಹಾಜರಾಗಿ ಹೇಳಿಕೆ ನೀಡಲಿ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳವುದಿಲ್ಲ ಎಂದು ಹೇಳಿದರು.

ಜೊತೆಗೆ, ಬಾಂಗ್ಲಾ ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಹೋರಾಟ ಮಾಡಿದ ಸಂಬಂಧ ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ಪುನೀತ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಬುಧವಾರ ಹೈಕೋರ್ಟ್‌ ತಡೆ ನೀಡಿದ ಬಳಿಕ ಅವರು ಪೊಲೀಸರನ್ನು ನಿಂದಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಆಗ ಪುನೀತ್‌ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪುನೀತ್‌ ಮತ್ತೆ ಗಲಾಟೆ ಮಾಡಿದ್ದೀರಾ? ಆತನಿಗೆ ಸುಮ್ಮನೆ ಇರಲು ಆಗುವುದಿಲ್ಲವೇ? ಪ್ರಕರಣ ನ್ಯಾಯಾಂಗದ ಪರಿಶೀಲನೆಯಲ್ಲಿರುವಾಗ ಅರ್ಜಿದಾರ ಹಾಗೆ ಮಾಡಲು ಹೇಗೆ ಸಾಧ್ಯ. ಯಾಕೆ ಹೀಗೆಲ್ಲಾ ಮಾಡುತ್ತಾರೆ? ಎಚ್ಚರಿಕೆ ಇರಬೇಕಲ್ಲವೇ? ಪುನೀತ್‌ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿಲ್ಲ. ಕೇವಲ ತಡೆ ನೀಡಲಾಗಿದೆಯಷ್ಟೆ ಎಂದು ಖಾರವಾಗಿ ನುಡಿದರು. ಅದಕ್ಕೆ ಪುನೀತ್‌ ಪರ ವಕೀಲರು, ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಪುನೀತ್‌ಗೆ ಸಲಹೆ ನೀಡಲಾಗುವುದು ಎಂದರು.