ಪುರುಷರ ವೇಷತೊಟ್ಟು ಬಂದು ಮನೆಗಳವು ಮಾಡ್ತಿದ್ದ ಮಹಿಳೆಯರ ಸೆರೆ : ಆಟೋರಿಕ್ಷಾ ಸುಳಿವು ಆಧರಿಸಿ ಬಂಧನ

| Published : Aug 24 2024, 01:26 AM IST / Updated: Aug 24 2024, 08:01 AM IST

Prisoner in Jail
ಪುರುಷರ ವೇಷತೊಟ್ಟು ಬಂದು ಮನೆಗಳವು ಮಾಡ್ತಿದ್ದ ಮಹಿಳೆಯರ ಸೆರೆ : ಆಟೋರಿಕ್ಷಾ ಸುಳಿವು ಆಧರಿಸಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಗೆ ಹೊಂದಿಕೊಂಡಿರುವ ಚಿಲ್ಲರೆ ಅಂಗಡಿಗೆ ಪುರುಷರ ವೇಷತೊಟ್ಟು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಮನೆಗೆ ಹೊಂದಿಕೊಂಡಿರುವ ಚಿಲ್ಲರೆ ಅಂಗಡಿಗೆ ಪುರುಷರ ವೇಷತೊಟ್ಟು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿಯ ನಿಲೋಫರ್‌ ಅಲಿಯಾಸ್‌ ನೀಲು(22) ಬಂಧಿತೆ. ಆರೋಪಿಯಿಂದ 4.09 ಲಕ್ಷ ರು. ಮೌಲ್ಯದ 70 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ದಾಸರಹಳ್ಳಿ ಕಲ್ಯಾಣನಗರದ ರಾಮಕೃಷ್ಣ ಶೆಟ್ಟಿ ಎಂಬುವವರ ಮನೆಗೆ ಹೊಂದಿಕೊಂಡಿರುವ ಚಿಲ್ಲರೆ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಅಪ್ರಾಪ್ತೆ ಹಾಗೂ ಮೂವರು ಪುರುಷ ವೇಷಧಾರಿ ಮಹಿಳೆಯರು, ಅಪ್ರಾಪ್ರೆಯನ್ನು ಮನೆ ಒಳಗೆ ಕಳುಹಿಸಿ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. ಅಪ್ರಾಪ್ತೆ ಹಾಗೂ ಇಬ್ಬರು ಮಹಿಳೆಯರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?ದೂರುದಾರ ರಾಮಕೃಷ್ಣ ಶೆಟ್ಟಿ ದಾಸರಹಳ್ಳಿಯ ಕಲ್ಯಾಣನಗರದಲ್ಲಿ ಮನೆಗೆ ಹೊಂದಿಕೊಂಡಂತೆ ಚಿಲ್ಲರೆ ಅಂಗಡಿ ಇರಿಸಿಕೊಂಡಿದ್ದಾರೆ. ಆ.1ರ ರಾತ್ರಿ 8 ಗಂಟೆಗೆ ರಾಮಕೃಷ್ಣ ಶೆಟ್ಟಿ ಮನೆಯ ಸಂಪ್‌ಗೆ ನೀರು ತುಂಬಿಸಲು ಮನೆಯ ಹಿಂಭಾಗಕ್ಕೆ ತೆರಳಿದ್ದಾರೆ. ಈ ವೇಳೆ ಅಂಗಡಿಯಲ್ಲಿ 9 ವರ್ಷದ ಮಗಳು ಇದ್ದಾಳೆ. ಈ ಸಮಯಕ್ಕೆ ಆಟೋರಿಕ್ಷಾದಲ್ಲಿ ಪುರುಷ ವೇಷತೊಟ್ಟ ಮೂವರು ಮಹಿಳೆಯರು ಹಾಗೂ ಓರ್ವ ಅಪ್ರಾಪ್ತೆ ಅಂಗಡಿ ಬಳಿ ಬಂದಿದ್ದಾರೆ. ಅಂಗಡಿಯಲ್ಲಿದ್ದ ಬಾಲಕಿಯು ಮನೆಯೊಳಗೆ ಇದ್ದ ತಾಯಿಯನ್ನು ಕರೆದಿದ್ದಾಳೆ. ಈ ವೇಳೆ ಅಪ್ರಾಪ್ತೆಯು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ, ಮನೆ ಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿಕೊಂಡು ಹೊರಗೆ ಬಂದಿದ್ದಾಳೆ. ಬಳಿಕ ನಾಲ್ವರೂ ಆಟೋರಿಕ್ಷಾದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ರಾಮಕೃಷ್ಣ ಶೆಟ್ಟಿ ಅವರ ಪತ್ನಿ ಮನೆಗೆ ಒಳಗೆ ತೆರಳಿ ನೋಡಿದಾಗ ಬೀರುವಿನಲ್ಲಿದ್ದ ಚಿನ್ನಾಭರಣ ಕಳುವಾಗಿರುವುದ ಬೆಳಕಿಗೆ ಬಂದಿದೆ.

ಆಟೋರಿಕ್ಷಾ ಸುಳಿವು ಆಧರಿಸಿ ಬಂಧನ:ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆಗೆ ಮುಂದಾದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆಟೋರಿಕ್ಷಾದ ಸುಳಿವು ಸಿಕ್ಕಿದೆ. ಈ ಸುಳಿವಿನ ಮೇರೆಗೆ ಆಟೋರಿಕ್ಷಾ ನೋಂದಣಿ ಸಂಖ್ಯೆ ಆಧರಿಸಿ, ಡಿ.ಜೆ.ಹಳ್ಳಿಯ ಶಾಂಪೂರ ಬಸ್‌ ನಿಲ್ದಾಣದ ಬಳಿ ನಿಲೋಫರ್ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಚಿನ್ನಾಭರಣ ಕಳವು ಮಾಡಿದ್ದು ತಾವೇ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

ಮುಂದುವರೆದ ವಿಚಾರಣೆ ವೇಳೆ ಈ ಕಳವು ಕೃತ್ಯದಲ್ಲಿ ಅಪ್ರಾಪ್ತೆ ತಂಗಿ ಹಾಗೂ ಇಬ್ಬರು ಮಹಿಳೆಯರು ಭಾಗಿಯಾಗಿರುವುದಾಗಿ ಬಾಯಿಬಿಟ್ಟಿದ್ದಾಳೆ.

ಆಟೋ ಸೀಟಿನ ಕೆಳಗೆ ಚಿನ್ನಾಭರಣ:

ನಿಲೋಫರ್‌ ನೀಡಿದ ಮಾಹಿತಿ ಮೇರೆಗೆ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾದ ಸೀಟಿನ ಕೆಳ ಭಾಗದಲ್ಲಿ ಬಚ್ಚಿಟ್ಟಿದ್ದ 70 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಉಳಿದ 55 ಗ್ರಾಂ ಚಿನ್ನಾಭರಣಗಳನ್ನು ತಲೆಮರೆಸಿಕೊಂಡಿರುವ ಮಹಿಳೆ ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾಳೆ. ಅಪ್ರಾಪ್ತೆ ಹಾಗೂ ಇಬ್ಬರು ಮಹಿಳೆಯರ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.

ದುಶ್ಚಟಗಳಿಗೆ ಹಣ ಹೊಂದಿಸಲು ಕಳವು:ಆರೋಪಿ ನಿಲೋಫರ್‌, ಆಕೆಯ ಸ್ನೇಹಿತೆಯರು ದುಶ್ಚಟಗಳ ದಾಸಿಯರಾಗಿದ್ದಾರೆ. ಮೋಜು-ಮಸ್ತಿಗೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳ್ಳತನಕ್ಕೆ ಇಳಿದಿದ್ದರು. ಪುರುಷರ ವೇಷತೊಟ್ಟು ಆಟೋ ಓಡಿಸಿಕೊಂಡು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ವಸ್ತುಗಳ ಖರೀದಿ ನೆಪದಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಕಳವು ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಒಬ್ಬಾಕೆ ಡಿ.ಜೆ.ಹಳ್ಳಿ ಠಾಣೆ ರೌಡಿ ಶೀಟರ್‌!

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಪ್ರಾಪ್ತೆ ಹಾಗೂ ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆ ರೌಡಿ ಶೀಟರ್‌ ಆಗಿದ್ದಾಳೆ. ಈಕೆಯ ವಿರುದ್ಧ ಹಲ್ಲೆ, ಬೆದರಿಕೆ, ಹಲವು ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತೆ ಹೊರತುಡಿಸಿ, 3 ಆರೋಪಿಗಳು ಪುರುಷರಂತೆ ಹೇರ್‌ ಕಟಿಂಗ್‌ ಮಾಡಿಸಿಕೊಂಡಿದ್ದು, ಪ್ಯಾಂಟ್‌ ಮತ್ತು ಶರ್ಟ್‌ ಧರಿಸುತ್ತಾರೆ. ಹೊರನೋಟಕ್ಕೆ ಪುರುಷರಂತೆ ಕಾಣುತ್ತಾರೆ.