- ಆರು ತಿಂಗಳು ಸಾವು-ಬದುಕಿನ ಮಧ್ಯೆ ಹೋರಾಡಿ ಸಶಕ್ತನಾಗಿ ಉಳಿದೆ: ಗೋಪಾಲ ಬಿ.ಹೊಸೂರು ಹೇಳಿಕೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಗುಂಡು ತಗುಲಿ, ಆರು ತಿಂಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ನಾನು ಇಂದು ನಿಮ್ಮ ಮುಂದೆ ಸದೃಢನಾಗಿ ನಿಂತಿದ್ದೇನೆಂದರೆ ಅದಕ್ಕೆ ನನ್ನ ಕುಟುಂಬ, ವೈದ್ಯರು, ಮುಖ್ಯವಾಗಿ ನಮ್ಮ ಪೊಲೀಸ್ ಸಿಬ್ಬಂದಿಯೇ ಕಾರಣ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಗೋಪಾಲ ಬಿ. ಹೊಸೂರು ಭಾವುಕರಾದರು.
ನಗರದ ಹೊರವಲಯದ ಶಿರಮಗೊಂಡನಹಳ್ಳಿ ಗ್ರಾಮದ ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಭಾನುವಾರ ನೂತನ ದಾವಣಗೆರೆ ಜಿಲ್ಲೆಯ ಪ್ರಥಮ ಪೊಲೀಸ್ ತಂಡ 1999ನೇ ಬ್ಯಾಚ್‌ನ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಮ್ಮಿಕೊಂಡದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ ಈಗ ನಿಮ್ಮ ಮುಂದೆ ಸಶಕ್ತನಾಗಿ ನಿಂತಿದ್ದೇನೆಂದರೆ ಅದು ಪವಾಡದಂತಿದೆ ಎಂದರು.ದಂತಚೋರ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ನನ್ನ ದೇಹ ಹೊಕ್ಕಿದ್ದ ಗುಂಡು ಗಂಭೀರವಾಗಿ ಗಾಯಗೊಳಿಸಿತ್ತು. ಮೇಜರ್ ಸರ್ಜರಿ ವೇಳೆ ನನ್ನ ದೇಹದಲ್ಲಿ 40 ಇಂಚು ಹೊಲಿಗೆಗಳನ್ನು ಹಾಕಿದ್ದಾಗ ನಿರಂತರ ರಕ್ತದ ಅವಶ್ಯಕತೆ ಇತ್ತು. ಸಾವು- ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ನನಗೆ ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಿದ್ದು, ನಮ್ಮ ಪೊಲೀಸ್ ಸಿಬ್ಬಂದಿ ಎಂದು ಅವರು ಗದ್ಗದಿತರಾದರು.
ರಕ್ತದಾನದಲ್ಲಿ ಜಾತಿ, ಮತ, ಕುಲವೆಂಬ ಯಾವುದೇ ಬೇಧಭಾವವೂ ಇಲ್ಲ. ಇಂದು ನನ್ನ ಮೈಯಲ್ಲಿರುವ ಪ್ರತಿಯೊಂದು ನರ ನಾಡಿಯಲ್ಲೂ ಪೊಲೀಸ್ ಸಿಬ್ಬಂದಿ ರಕ್ತವೇ ಹರಿದಾಡುತ್ತಿದೆ. ತಮಗೆ ರಕ್ತದಾನ ಮಾಡಿದ ಎಲ್ಲ ಸಿಬ್ಬಂದಿಗೂ ಈ ವೇದಿಕೆ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ಕಾರದ ಯಾವುದೇ ಇಲಾಖೆಗೆ ಹೋಲಿಸಿದರೂ ಸಮಾಜಕ್ಕೆ ಪೊಲೀಸ್ ಇಲಾಖೆ ನೀಡುವ ಕೊಡುಗೆ ಮತ್ತು ನಿರ್ವಹಿಸುವ ಪಾತ್ರ ಅತ್ಯಂತ ಮಹತ್ವದ್ದು. ಬೇರೆ ಇಲಾಖೆಗಳಂತೆ ನಮ್ಮ ಇಲಾಖೆ ಅಲ್ಲ ಎಂದು ಅವರು ತಿಳಿಸಿದರು.
ಮಿಲಿಟರಿಯವರು ದೇಶದ ಗಡಿಯಲ್ಲಿ ಭದ್ರತೆ ನೀಡಿದರೆ, ಆತಂರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವವರು ನಮ್ಮ ಪೊಲೀಸರು. ನಮ್ಮ ಇಲಾಖೆಯಲ್ಲೂ ಕೆಲವೊಂದಿಷ್ಟು ನ್ಯೂನತೆಗಳು ಇರಬಹುದು. ಆದರೆ, ಅವುಗಳನ್ನು ಮೆಟ್ಟಿ ನಿಂತು, ಕೆಲಸ ಮಾಡುವ ಧೋರಣೆ, ಮನೋಭಾವವು ನಮ್ಮ ಅಧಿಕಾರಿ, ಸಿಬ್ಬಂದಿಯಲ್ಲಿ ಇರಬೇಕು. ನನ್ನ ಸುದೀರ್ಘ ಪೊಲೀಸ್ ಇಲಾಖೆ ಸೇವಾವಧಿಯಲ್ಲಿ ಮುಖ್ಯಮಂತ್ರಿಗಳ ಪದಕ, ರಾಷ್ಟ್ರಪತಿ ಪದಕ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವ ಸಿಕ್ಕಿವೆ. ಆದರೆ, ಜನರ ಪ್ರೀತಿ, ಸಿಬ್ಬಂದಿಯ ನಿಸ್ವಾರ್ಥ ಸೇವೆಯೇ ತಮಗೆ ಅತ್ಯಂತ ತೃಪ್ತಿ, ಸಂತೋಷ ತಂದಿದೆ ಎಂದು ಅವರು ಹೇಳಿದರು.
ಶಾಲಾ ಶಿಕ್ಷಕರ ಮಗನಾಗಿ ಬೆಳೆದ ನಾನು ಪೊಲೀಸ್ ಇಲಾಖೆ ಉನ್ನತ ಹುದ್ದೆಯನ್ನೇರಿದೆ. ಒಮ್ಮೆ ರಾಜ ಮನೆತನಕ್ಕೆ ಸೇರಿದ ಪ್ರಭಾವಿ ವ್ಯಕ್ತಿಗಳು, ಶ್ರೀಮಂತರು ರಕ್ಷಣೆ ಕೋರಿ ನನ್ನ ಕಚೇರಿಗೆ ಬಂದಿದ್ದರು. ಒಂದು ಕಾಲದಲ್ಲಿ ಸಮಾಜದ ಅತ್ಯಂತ ಪ್ರಭಾವಿ, ಶ್ರೀಮಂತರಾಗಿದ್ದವರು ಸಾಮಾನ್ಯ ಪೊಲೀಸ್ ಕಚೇರಿಗೆ ಬಂದು ರಕ್ಷಣೆ ಕೇಳುವ ಸ್ಥಿತಿ ನಿರ್ಮಾಣವಾಗಿದ್ದು ಹೇಗೆಂದು ನಾನು ಸಹ ಯೋಚಿಸಿದೆ. ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದು ಎಂಬುದು ಅಂದು ಮತ್ತೆ ಮನವರಿಕೆಯೂ ಆಯಿತು ಎಂದು ನೆನಪು ಮೆಲಕು ಹಾಕಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್, ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಪ್ರೇಮಲತಾ ಜಿ. ಹೊಸೂರು, ನಿವೃತ್ತ ಪೊಲೀಸ್ ಅಧೀಕ್ಷಕರಾದ ರವಿನಾರಾಯಣ, ಎನ್.ಲಿಂಗಾರೆಡ್ಡಿ, ಪೊಲೀಸ್ ಅಧಿಕಾರಿಗಳಾದ ಬಿ.ಎಸ್. ಬಸವರಾಜ, ಗುರುಬಸವರಾಜ, ಕಿರಣಕುಮಾರ, ಪ್ರಭು, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿಗಳಾದ ರುದ್ರಪ್ಪ ಎಸ್.ಉಜ್ಜಿನಕೊಪ್ಪ, ಎಂ.ಎಸ್.ರಮೇಶ ರಾವ್, ಬಿ.ಶರಣ ಬಸವೇಶ್ವರ, ಜಿ.ಎಂ.ತಿಪ್ಪೇಸ್ವಾಮಿ, ಬಂಕಾಳಿ ನಾಗಪ್ಪ ಇದ್ದರು.
ಇದೇ ವೇಳೆ ಗೋಪಾಲ್ ಬಿ. ಹೊಸೂರು ಅವಧಿಯಲ್ಲಿ ದಾವಣಗೆರೆಯಲ್ಲಿ ಕೆಲಸ ಮಾಡಿದ್ದ 1999ನೇ ಬ್ಯಾಚ್ ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಂಡರು. ಗೋಪಾಲ ಬಿ. ಹೊಸೂರು ದಂಪತಿ ಹಾಗೂ 1999ನೇ ಬ್ಯಾಚ್‌ನ ಮೃತಪಟ್ಟ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕುಟುಂಬದವರಿಗೆ ಸನ್ಮಾನಿಸಲಾಯಿತು.- - -
(ಬಾಕ್ಸ್) * ಪೊಲೀಸ್ ಇಲಾಖೆ ಬಗ್ಗೆ ಸಮಾಜ ಗೌರವ ಹೊಂದಿರಬೇಕು - ಅಧೀನ ಅಧಿಕಾರಿ, ಸಿಬ್ಬಂದಿಗೆ ಅಧಿಕಾರಿಗಳು ಗೌರವಿಸಲಿ: ಗೋಪಾಲ ಹೊಸೂರು ಸಲಹೆ ದಾವಣಗೆರೆ: ಗಲಭೆ, ಕೋಮು ಸಂಘರ್ಷ, ಭೂಗತ ಚಟುವಟಿಕೆಗಳು, ಭಯೋತ್ಪಾದನೆ ಹಾಗೂ ನಕ್ಸಲ್ ಬೆದರಿಕೆಗಳಂತಹ ದೇಶವಿರೋಧಿ ಚಟುವಟಿಕೆಗಳನ್ನು ಎದೆ ಕೊಟ್ಟು ತಡೆಯುವ ಶಕ್ತಿ ಪೊಲೀಸ್ ಇಲಾಖೆಗಿದ್ದು, ಈ ಕಾರಣಕ್ಕಾಗಿ ಇಲಾಖೆ ಮೇಲೆ ಸಮಾಜವು ಸದಾ ಗೌರವ ಹೊಂದಿರಬೇಕು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಗೋಪಾಲ ಬಿ. ಹೊಸೂರು ಹೇಳಿದರು.ನಗರದ ಹೊರವಲಯದ ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲೆಯ ಪ್ರಥಮ ಪೊಲೀಸ್ ತಂಡ 1999ನೇ ಬ್ಯಾಚ್ ಅಧಿಕಾರಿ ಹಾಗೂ ಸಿಬ್ಬಂದಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ಯಾವುದೇ ಒಬ್ಬ ಅಧಿಕಾರಿ ಯಶಸ್ವಿಯಾಗಿ ಸೇವೆ ಸಲ್ಲಿಸಬೇಕಾದರೆ ಆತನ ಕುಟುಂಬದ ಬೆಂಬಲ ಅತ್ಯಗತ್ಯ ಎಂದರು.
ತಾವು 33 ವರ್ಷ ಕಠಿಣ ಸೇವೆ ನಂತರ ನಿವೃತ್ತಿಯಾಗಿ 13 ವರ್ಷ ಕಳೆದಿವೆ. ಅಧಿಕಾರದ ಅಹಂಕಾರ ಬಿಟ್ಟು, ಸಾಮಾನ್ಯ ಜನರೊಂದಿಗೆ ಸಾಮಾನ್ಯರಂತೆ ಸರಳ ಜೀವನ ನಡೆಸಿದಾಗ ಮಾತ್ರ ನಿಜವಾದ ನೆಮ್ಮದಿ ಸಿಗುತ್ತದೆ. ಅಧಿಕಾರ ಮುಗಿದ ಮೇಲೆ ಅಹಂ ಇಟ್ಟುಕೊಂಡರೆ ಸಮಾಜ ನಮ್ಮನ್ನು ಸ್ವೀಕರಿಸುವುದಿಲ್ಲ. ನಮ್ಮ ಪ್ರಾಮಾಣಿಕ ಸೇವೆ, ಶ್ರಮದ ಫಲವು ವೃತ್ತಿ ಜೀವನದ ಕೊನೆಯಲ್ಲಿ ನಮಗೆ ದೊರೆಯುತ್ತದೆ ಎಂದು ಅವರು ತಿಳಿಸಿದರು.ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆಗೆ ಗಮನ ಹರಿಸುತ್ತಾ, ನಿಷ್ಟೆಯಿಂದ ಕಾರ್ಯ ನಿರ್ವಹಿಸಬೇಕು. ನೀವು ಯಾವುದೇ ಹುದ್ದೆಯಲ್ಲಿದ್ದರೂ, ಎಷ್ಟೇ ಜವಾಬ್ದಾರಿಯಲ್ಲಿದ್ದರೂ ನಿಮ್ಮ ವೈಯಕ್ತಿಕ ಹಾಗೂ ಕುಟುಂಬದ ಆರೋಗ್ಯವೇ ಅತ್ಯಂತ ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಾವು ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯ. ಜೊತೆಗೆ ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.
ನಿಮ್ಮ ಅಧೀನದಲ್ಲಿ ಕೆಲಸ ಮಾಡುವ ಚಾಲಕರು, ಹೆಡ್ ಕಾನ್‌ಸ್ಟೇಬಲ್, ರೈಟರ್‌ಗಳು ಮತ್ತು ಕ್ಲರ್ಕ್‌ಗಳನ್ನು ಪ್ರೀತಿ, ವಿಶ್ವಾಸ, ಗೌರವದಿಂದ ಕಾಣಬೇಕು. ನಿಮ್ಮ ಕಿರಿಯ ಸಿಬ್ಬಂದಿ ಬಗ್ಗೆ ನಿಮಗೆ ಗೌರವವಿಲ್ಲದಿದ್ದರೆ, ನೀವು ಎಂದಿಗೂ ಯಶಸ್ವಿ ಪೊಲೀಸ್ ಅಧಿಕಾರಿಗಳಾಗಲು ಸಾಧ್ಯವಿಲ್ಲ. ನೀವು ಶೇ.1ರಷ್ಟು ಪ್ರೀತಿ-ಗೌರವ ನೀಡಿದರೆ, ಅವರು ಶೇ.100ರಷ್ಟು ಶ್ರಮ ವಹಿಸಿ ನಿಮಗೆ ಪ್ರತಿಫಲ ನೀಡುತ್ತಾರೆ ಎಂದು ಗೋಪಾಲ ಹೊಸೂರು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.- - -
-26ಕೆಡಿವಿಜಿ7: ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಗೋಪಾಲ ಬಿ.ಹೊಸೂರು, ಪ್ರೇಮಲತಾ ಜಿ. ಹೊಸೂರು ದಂಪತಿಗೆ ಸನ್ಮಾನಿಸಿ, ಗೌರವಿಸಲಾಯಿತು.