ರಾಜ್ಯದಲ್ಲಿ ಸೈಬರ್ ಪಾತಕ ಲೋಕದ ಹಣ ವರ್ಗಾವಣೆ ಜಾಲವೊಂದನ್ನು ಭೇದಿಸುವಲ್ಲಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಇದೀಗ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಸೈಬರ್ ಪಾತಕ ಲೋಕದ ಹಣ ವರ್ಗಾವಣೆ ಜಾಲವೊಂದನ್ನು ಭೇದಿಸುವಲ್ಲಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಇದೀಗ ಯಶಸ್ವಿಯಾಗಿದ್ದಾರೆ. ಸೈಬಲ್ ವಂಚನೆ ಜಾಲಕ್ಕೆ 42 ಸಾವಿರ ಅಕ್ರಮ ಬ್ಯಾಂಕ್ ಖಾತೆಗಳು ಬಳಕೆಯಾಗಿರುವ ಆಘಾತಕಾರಿ ಸಂಗತಿ ಬಯಲುಗೊಳಿಸಿದ್ದಾರೆ.ಇದರ ಬೆನ್ನಲ್ಲೇ, ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಸೈಬರ್ ಪೊಲೀಸರು ಸೆರೆ ಹಿಡಿದಿದ್ದು, ಶಿವಮೊಗ್ಗದಲ್ಲೇ 5 ಕೋಟಿ ರು. ಸೈಬರ್ ಕಳ್ಳರು ದೋಚಿರುವುದು ಬೆಳಕಿಗೆ ಬಂದಿದೆ. ಈ ಜಾಲದ ವಿರುದ್ಧ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ 17 ಎಫ್‌ಐಆರ್‌ಗಳು ದಾಖಲಾಗಿವೆ.
ಕಳೆದ ವರ್ಷ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ, ನಿಯಂತ್ರಣಕ್ಕೆ ಸರ್ಕಾರ ಪ್ರತ್ಯೇಕವಾಗಿ ಸೈಬರ್ ಕಮಾಂಡ್ ಸೆಂಟರ್ ರಚಿಸಿತ್ತು. ಈಗ ಸೈಬರ್ ವಂಚಕರ ವಿರುದ್ಧ ಕಮಾಂಡ್ ಸೆಂಟರ್ ಫೀಲ್ಡ್‌ಗಿಳಿದಿದೆ. ಸೈಬರ್ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆಗೆ ಅಕ್ರಮವಾಗಿ ಬ್ಯಾಂಕ್ ಖಾತೆಗಳನ್ನು ಪೂರೈಸುತ್ತಿದ್ದ ದಂಧೆಕೋರರ ಪತ್ತೆಗೆ ಡಿಜಿಪಿ ಪ್ರಣವ್ ಮೊಹಂತಿ ಮಾರ್ಗದರ್ಶನದಲ್ಲಿ ಸಿಐಡಿ ಸೈಬರ್ ವಿಭಾಗದ ಎಸ್ಪಿ ಎಂ.ಡಿ.ಶರತ್ ಉಸ್ತುವಾರಿಯಲ್ಲಿ ಸೈಬರ್ ಕ್ರೈಂ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.42 ಸಾವಿರ ಖಾತೆಗಳ ವಿವರ:
ಕಳೆದ ಎರಡ್ಮೂರು ವರ್ಷಗಳಲ್ಲಿ ಸೈಬರ್ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆಗೆ ಬಳಕೆಯಾದ ಖಾತೆಗಳನ್ನು ಸಿಐಡಿ ಸೈಬರ್ ವಿಭಾಗದ ಪೊಲೀಸರು ಜಾಲಾಡಿದ್ದು, ಆಗ ರಾಜ್ಯದಲ್ಲಿ 42 ಸಾವಿರ ಬ್ಯಾಂಕ್ ಖಾತೆಗಳ ವಿವರ ಸಿಕ್ಕಿದೆ. ಬಳಿಕ ಈ ಖಾತೆಗಳಲ್ಲಿ ಅತಿ ಹೆಚ್ಚು ಬಳಕೆಯಾದ ಖಾತೆ ಕುರಿತು ಶೋಧನೆ ನಡೆಸಿದಾಗ 150 ಬ್ಯಾಂಕ್ ಅನುಮಾನಾಸ್ಪದ ಖಾತೆಗಳು ಪತ್ತೆಯಾಗಿವೆ. ಈ ಖಾತೆಗಳಿಗೆ ರಾಜ್ಯದಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಮೂಲಕ ಲೂಟಿ ಮಾಡಲಾದ ಹಣ ಜಮೆಯಾಗಿ ಇಲ್ಲೇ ಡ್ರಾ ಕೂಡ ಆಗಿದ್ದವು. ಈ ಖಾತೆಗಳ ವಿವರವನ್ನು ಬೆಂಗಳೂರು ಸೇರಿ ರಾಜ್ಯದ ಎಲ್ಲ ಸೈಬರ್ ಕ್ರೈಂ ಠಾಣೆಗಳಿಗೆ ಸಿಐಡಿ ಸೈಬರ್ ವಿಭಾಗ ಕಳುಹಿಸಿಕೊಟ್ಟಿದ್ದು, ಖಾತೆದಾರರ ಪತ್ತೆಗೆ ಕಾರ್ಯಾಚರಣೆ ನಡೆಸುವಂತೆ ಡಿಜಿಪಿ ಪ್ರಣವ್ ಮೊಹಂತಿ ಸೂಚಿಸಿದರು ಎಂದು ಮೂಲಗಳು ಹೇಳಿವೆ.ಈ ಮಾಹಿತಿ ಮೇರೆಗೆ ರಾಜ್ಯದ 29 ಜಿಲ್ಲೆಗಳಲ್ಲಿ ನಕಲಿ ಖಾತೆದಾರರ ಸೆರೆಗೆ ಸೈಬರ್ ಅಧಿಕಾರಿಗಳು ಯೋಜಿಸಿದ್ದರು. ಅದರಂತೆ ಗುರುವಾರ ಏಕಕಾಲಕ್ಕೆ ರಾಜ್ಯವ್ಯಾಪಿ ಸೈಬರ್ ಕ್ರೈಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತರ ವಿವರ:ಬೆಂಗಳೂರಿನ ರಂಗಪ್ಪನಪಾಳ್ಯದ ಧರ್ಮಪಾಲ್, ಸುಹೈಲ್ ಪಾಷ, ಅಕಿಲ್ ಪಾಷ, ಮೊಹಮ್ಮದ್ ಮುಜಾಮಿಲ್, ಪಟೇಲ್ ಜಿತೇಂದ್ರ ಕುಮಾರ್, ಸುಂಕದಕಟ್ಟೆಯ ವಿಶ್ವೇಶ್ವರ ಲೇಔಟ್‌ನ ಮೋಹನ್ ಕುಮಾರ್, ಮಾದೇಶ್ವರ ನಗರದ ಚಂದ್ರಶೇಖರ್, ವಿವೇಕನಗರದ ರಾಮಕಿರಣ್, ಕೋಲಾರದ ಜುನೈದ್ ಪಾಷ, ಮಜೀದ್ ಮದಿನಿ, ಶಾಹೀದ್ ಅಲಾಂ ಖಾನ್ ಅಲಿಯಾಸ್ ಶಾಲು ಹಾಗೂ ಶಿವಮೊಗ್ಗ ಶರತ್ ಕುಮಾರ್ ಬಂಧಿತರು.
ಯಾವ್ಯಾವ ಜಿಲ್ಲೆಯಲ್ಲಿ ಹಣ ವರ್ಗಾವಣೆ?:ಬೆಂಗಳೂರು ಪಶ್ಚಿಮ ವಿಭಾಗ-8,00,000 ರು, ದಕ್ಷಿಣ ವಿಭಾಗ-20,00,000, ಬೆಂಗಳೂರು ದಕ್ಷಿಣ ಜಿಲ್ಲೆ- 13,47,000 ರು, ಉಡುಪಿ-2,774 ರು, ದಕ್ಷಿಣ ಕನ್ನಡ- 4,33,525 ರು, ಬೆಳಗಾವಿ- 2,04,92,000 ರು, ಮಂಡ್ಯ- 1,58,000 ರು, ಧಾರವಾಡ- 5000 ರು, ಚಿಕ್ಕಮಗಳೂರು- 24,500 ರು, ಕೊಪ್ಪಳ- 9,99,140 ರು, ರಾಯಚೂರು- 1,00,400 ರು, ಬೀದರ್- 1,75,000 ರು, ಕಲುಬರಗಿ- 20,500, ಶಿವಮೊಗ್ಗ- 5 ಕೋಟಿ ರು ಸೇರಿ ಒಟ್ಟು 7.67 ಕೋಟಿ ರು ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದೆ.
ಎಟಿಎಂನಲ್ಲಿ ಹಣ:ಈ ಹಣದ ಪೈಕಿ ಶಿವಮೊಗ್ಗದಲ್ಲಿ ಮೂರು ಬಾರಿ ಚೆಕ್, 2 ಬಾರಿ ಕ್ಯೂಆರ್ ಕೋಡ್ ಹಾಗೂ 25 ಬಾರಿ ಎಟಿಎಂಗಳ ಮೂಲಕ 5 ಕೋಟಿ ರುಪಾಯಿ ಸೈಬರ್ ವಂಚಕರ ಪಾಲಾಗಿದೆ. ಇನ್ನುಳಿದಂತೆ ಬೆಂಗಳೂರಿನ ಪೂರ್ವ ವಿಭಾಗದಲ್ಲಿ 5 ಬಾರಿ ಮೊಬೈಲ್ ನಲ್ಲಿ ಆನ್‌ಲೈನ್ ಹಾಗೂ 8 ಬಾರಿ ಚೆಕ್ ಮೂಲಕ ಹಣ ವರ್ಗಾವಣೆಯಾಗಿದೆ ಎನ್ನುವುದು ತಿಳಿದುಬಂದಿದೆ.
