ಸಾರಾಂಶ
ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ, ಸುರಕ್ಷತೆ ಜತೆಗೆ ವಾಹನ ಸಂಚಾರ ಸುಗಮವಾಗಿಸಲು ಎಐ, ಬಿಗ್ ಡೇಟಾ ಮತ್ತು ಐಒಟಿ ಆಧಾರಿತ ಪರಿಹಾರಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಾರಿಗೊಳಿಸಲಾಗುತ್ತಿದೆ ಎಂದು ಡಿಸಿಪಿ ಅನುಚೇತ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದೇವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹೇಳಿದ್ದಾರೆ.ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್(ಬಿಸಿಐಸಿ) ಆಯೋಜಿಸಿದ್ದ ರಸ್ತೆ ಸುರಕ್ಷತೆ-ಜಾಗೃತಿ ಅಭಿಯಾನದಲ್ಲಿ ‘ಬೆಂಗಳೂರಿನ ಸಂಚಾರ ದಟ್ಟಣೆ ಸವಾಲುಗಳ ನಿರ್ವಹಣೆ’ ವಿಷಯ ಕುರಿತು ಮಾತನಾಡಿದ ಅವರು, ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ, ಸುರಕ್ಷತೆ ಜತೆಗೆ ವಾಹನ ಸಂಚಾರ ಸುಗಮವಾಗಿಸಲು ಎಐ, ಬಿಗ್ ಡೇಟಾ ಮತ್ತು ಐಒಟಿ ಆಧಾರಿತ ಪರಿಹಾರಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಾರಿಗೊಳಿಸಲಾಗುತ್ತಿದೆ ಎಂದರು.
ವಾಹನ ಚಾಲನೆ ವೇಳೆ ಅತಿ ವೇಗದಿಂದಾಗಿ ಶೇ.10ರಷ್ಟು ಸಾವುಗಳು ದೇವನಹಳ್ಳಿಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಭವಿಸಿದರೆ, ಕೆಂಗೇರಿ ನೈಸ್ ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.ಕಳೆದ 2 ತಿಂಗಳಲ್ಲಿ174 ಮಂದಿ ಸಾವು
ಕಳೆದ ವರ್ಷ ನಗರದಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ 914 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ದ್ವಿಚಕ್ರ ವಾಹನ ಸವಾರರು ಶೇ.74 ಹಾಗೂ ಪಾದಚಾರಿಗಳು ಶೇ.21ರಷ್ಟು ಮೃತಪಟ್ಟಿದ್ದಾರೆ. ಮೃತರ ಪೈಕಿ ಶೇ.60ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣಗಳಲ್ಲಿ 174 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.ಹೆಬ್ಬಾಳದಲ್ಲಿ 3 ತಾಸಿನಲ್ಲಿ90,000 ವಾಹನ ಓಡಾಟ
ಹೆಬ್ಬಾಳದಂತಹ ಕೆಲವು ಜಂಕ್ಷನ್‌ಗಳಲ್ಲಿ ಇಡೀ ದಿನ ವಾಹನ ದಟ್ಟಣೆ ಕಂಡುಬರುತ್ತವೆ. ಹೆಬ್ಬಾಳ ಜಂಕ್ಷನ್‌ನಲ್ಲಿ ಮೂರು ಗಂಟೆಗಳ ಅವಧಿಯಲ್ಲಿ 90 ಸಾವಿರ ವಾಹನಗಳು ಹಾದು ಹೋಗುತ್ತವೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಈ ವಾಹನ ದಟ್ಟಣೆ ಪ್ರಮಾಣ ಜಾಗತಿಕವಾಗಿ ಅತ್ಯಧಿಕ ದಟ್ಟಣೆಗಳಲ್ಲಿ ಒಂದಾಗಿದೆ ಎಂದು ಅನುಚೇತ್ ತಿಳಿಸಿದರು.ಈ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಗರ ಸಂಚಾರ ಪೊಲೀಸ್ ವಿಭಾಗದಿಂದ ನಕ್ಷೆ ಆಧಾರಿತ ಸೇವೆಗಳು, ಎಫ್‌ಎಂ ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನೈಜ-ಸಮಯದ ರಸ್ತೆ ಪರಿಸ್ಥಿತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.